ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್: ಬಾಂಬರ್ ಮತ್ತು ಸ್ಫೋಟದ ಮಾಸ್ಟರ್ ಮೈಂಡ್ 10 ದಿನಗಳ ಕಾಲ ಎನ್ಐಎ ವಶಕ್ಕೆ.!
ಬೆಂಗಳೂರಿನ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ (Rameshwaram Cafe Blast case) ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಬಾಂಬರ್ ಮುಸ್ಸಾವಿರ್ ಹುಸೇನ್ ಶಾಜಿಬ್ ಮತ್ತು ಸ್ಫೋಟದ ಮಾಸ್ಟರ್ ಮೈಂಡ್ ಅಬ್ದುಲ್ ಮತೀನ್ ತಾಹಾನನ್ನು ನ್ಯಾಯಾಧೀಶರು 10 ದಿನಗಳ ಕಾಲ ರಾಷ್ಟ್ರೀಯ ತನಿಖಾ ದಳ (NIA) ವಶಕ್ಕೆ ನೀಡಿ ಆದೇಶಿಸಿದ್ದಾರೆ.
ರಾಮೇಶ್ವರಂ ಕೆಫೆಯಲ್ಲಿ ಸ್ಫೋಟಗೊಳಿಸಿ ಪಶ್ಚಿಮ ಬಂಗಾಳದ ಕೊಲ್ಕತ್ತಾದಲ್ಲಿ ತಲೆಮರೆಸಿಕೊಂಡಿದ್ದ ಉಗ್ರರನ್ನು ಎನ್ಐಎ ಅಧಿಕಾರಿಗಳು ಬಂಧಿಸಿ ಬೆಂಗಳೂರಿಗೆ ಕರೆತಂದಿದ್ದಾರೆ. ಇಬ್ಬರು ಉಗ್ರರನ್ನು ಎನ್ಐಎ ಅಧಿಕಾರಿಗಳು ಮಂಡಿವಾಳದ ಎಫ್ಎಸ್ಎಲ್ ಸೆಂಟರ್ ಬಳಿಯಿರುವ ಇಂಟ್ರಾಗೇಷನ್ ಸೆಲ್ನಲ್ಲಿ ವಿಚಾರಣೆ ನಡೆಸಿದರು. ಬಳಿಕ ಬೆಳಿಗ್ಗೆ 10:30 ಕೋರಮಂಗಲದ ರಾಷ್ಟ್ರೀಯ ಕ್ರೀಡಾ ಗ್ರಾಮ ಸಮುಚ್ಚಯದಲ್ಲಿರುವ ನಿವಾಸದಲ್ಲಿ ನ್ಯಾಯಾಧೀಶರ ಮುಂದೆ ಉಗ್ರರನ್ನು ಹಾಜರುಪಡಿಸಿದರು. ನ್ಯಾಯಾಧೀಶರು 10 ದಿನಗಳ ಕಾಲ ಎನ್ಐಎ ಕಸ್ಟಡಿಗೆ ನೀಡಿ ಆದೇಶ ನೀಡಿದ್ದಾರೆ.
ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಪಟ್ಟಣದ ಸೊಪ್ಪುಗುದ್ದೆ ಬಡಾವಣೆ ನಿವಾಸಿಯಾಗಿರುವ ಉಗ್ರ ಅಬ್ದುಲ್ ಮತೀನ್ ತಾಹ, ಬೆಂಗಳೂರಿನಲ್ಲಿ ಇಂಜಿನಿಯರಿಂಗ್ ಓದಿದ್ದಾನೆ. ಅಬ್ದುಲ್ ಮತೀನ್ ತಾಹ ISIS ಉಗ್ರ ಸಂಘಟನೆ ಜೊತೆ ಸಂಪರ್ಕ ಹೊಂದಿದ್ದಾನೆ. ಅಬ್ದುಲ್ ಮತೀನ್ ತಾಹ ಡಾರ್ಕ್ ವೆಬ್ ಮೂಲಕ ಬಾಂಬ್ ತಯಾರಿಸುವುದನ್ನು ಕಲಿತಿದ್ದನು. ಮಂಗಳೂರು ಕುಕ್ಕರ್ ಬಾಂಬ್, ರಾಮೇಶ್ವರಂ ಕೆಫೆ ಸ್ಫೋಟಗೊಳಿಸಲು ಈತನೆ ಬಾಂಬ್ ತಯಾರಿಸಲು ಪ್ಲಾನ್ ನೀಡಿದ್ದನು.
ಅಬ್ದುಲ್ ಮತೀನ್ ತಾಹ ಮಾರ್ಗದರ್ಶನದಲ್ಲಿ ಬಾಂಬ್ ತಯಾರಿಸಿ, ತುಂಗಾ ತೀರದ ಟ್ರಯಲ್ ಬ್ಲಾಸ್ಟ್, ಮಂಗಳೂರು ಕುಕ್ಕರ್ ಬ್ಲಾಸ್ಟ್, ರಾಮೇಶ್ವರಂ ಕೆಫೆಯಲ್ಲಿ ಬ್ಲಾಸ್ಟ್ ಮಾಡಲಾಗಿದೆ. ಅಲ್ಲದೆ ಈತನು ಕ್ರಿಪ್ಟೋ ಕರೆನ್ಸಿ ಮೂಲಕ ಉಗ್ರ ಸಂಘಟನೆಗಳಿಗೆ ಹಣ ನೀಡುತ್ತಿದ್ದನು ಎಂದು ಮೂಲಗಳಿಂದ ಮಾಹಿತಿ ದೊರೆತಿದೆ.