ಜ್ಯೂಸ್ ಅಂತಾ ಕೀಟನಾಶಕ ಸೇವಿಸಿ ಮಗು ಸಾವು!
RAMANAGARA: ಜ್ಯೂಸ್ ಎಂದು ಮನೆಯಲ್ಲಿದ್ದ ಕೀಟನಾಶಕ ಕುಡಿದು ಪುಟ್ಟ ಕಂದಮ್ಮವೊಂದು ಮೃತಪಟ್ಟಿರುವ ಘಟನೆ ಚನ್ನಪಟ್ಟಣ ತಾಲೂಕಿನ ಕೃಷ್ಣಾಪುರ ಗ್ರಾಮದಲ್ಲಿ ಭಾನುವಾರ ನಡೆದಿದೆ.
ಗ್ರಾಮದ ಪುಷ್ಪ ಹಾಗೂ ಹನುಮಂತು ಎಂಬವರ ಪುತ್ರ ಎರಡು ವರ್ಷದ ಯಶ್ವಿಕ್ (2) ಕೀಟ ನಾಶಕ ಸೇವಿಸಿ ಮೃತಪಟ್ಟ ಮಗು. ಜಮೀನಿಗೆ ಸಿಂಪಡಿಸಿ ಉಳಿದಿದ್ದ ಕೀಟನಾಶಕವನ್ನ ಹನುಮಂತು ಮನೆಯಲ್ಲಿ ಇಟ್ಟಿದ್ದರು. ಈ ವೇಳೆ ಮಗು ಆಟವಾಡುವಾಗ ಕೀಟನಾಶಕದ ಬಾಟೆಲ್ ನೋಡಿ ಜ್ಯೂಸ್ ಎಂದು ಭಾವಿಸಿ ಕುಡಿದಿದೆ.
ಕೆಲ ಕ್ಷಣಗಳ ಬಳಿಕ ಹೊಟ್ಟೆನೋವಿನಿಂದ ನರಳಾಡುತ್ತಿದ್ದ ಮಗುವನ್ನು ಮಂಡ್ಯ ಮಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಮಗು ಮೃತಪಟ್ಟಿದ್ದು ಪೋಷಕರ ಆಕ್ರಂದನ ಮುಗಿಲುಮುಟ್ಟಿದೆ.
ಬೆಂಗಳೂರಿನ ಅಬ್ಬಿಗೆರೆಯ ಅಶೋಕ್ ಐಟಿಐ ಕಾಲೇಜು ಬಳಿ ಗಲಾಟೆ, ವಿದ್ಯಾರ್ಥಿಗೆ ಚಾಕು ಇರಿತ
ನೆಲಮಂಗಲ, ಸೆ.4: ಪ್ರಾಕ್ಟಿಕಲ್ ಕ್ಲಾಸ್‌ನಲ್ಲಿನ ಮೆಟಲ್ ವಿಷಯವಾಗಿ ವಿದ್ಯಾರ್ಥಿಗಳ ನಡುವೆ ನಡೆದ ಗಲಾಟೆ ವೇಳೆ ಒಬ್ಬನಿಗೆ ಚಾಕು ಇರಿದ ಘಟನೆ ಬೆಂಗಳೂರಿನ (Bengaluru) ಅಬ್ಬಿಗೆರೆಯ ಅಶೋಕ್ ಐಟಿಐ ಕಾಲೇಜು ಬಳಿ ಆಗಸ್ಟ್ 28 ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಸದ್ಯ ಗಾಯಾಳು ವಿದ್ಯಾರ್ಥಿಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದ್ದು, ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.
ಅಬ್ಬಿಗೆರೆಯ ಅಶೋಕ್ ಐಟಿಐ ಕಾಲೇಜು ಬಳಿ ಪ್ರಾಕ್ಟಿಕಲ್ ಕ್ಲಾಸ್‌ನಲ್ಲಿ ಮೆಟಲ್ ವಿಷಯವಾಗಿ ಗಲಾಟೆ ನಡೆದಿದೆ. ನಂತರ ಕಾಲೇಜಿನಿಂದ ಹೊರಬರುತ್ತಿದ್ದಂತೆ ಮತ್ತೆ ಗಲಾಟೆ ನಡೆದಿದೆ. ಈ ವೇಳೆ ವಿದ್ಯಾರ್ಥಿ ಪಾಸಿ ಮೊಹಮ್ಮದ್ (21) ಎಂಬಾತನಿಗೆ ವಿದ್ಯಾರ್ಥಿ ಬಾಲಕೃಷ್ಣಾರೆಡ್ಡಿ (21) ಸೇರಿದಂತೆ ಇಬ್ಬರು ಚಾಕುವಿನಿಂದ ಇರಿದಿದ್ದಾರೆ.
ಕೂಡಲೇ ಗಾಯಾಳು ವಿದ್ಯಾರ್ಥಿ ಪಾಸಿ ಮೊಹಮ್ಮದ್ನನ್ನು ರಾಜಲಕ್ಷ್ಮಿ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಗಲಾಟೆ ಸಂಬಂಧ ಇಬ್ಬರನ್ನು ಗಂಗಮ್ಮಗುಡಿ ಠಾಣಾ ಪೊಲೀಸರು ವಶಕ್ಕೆ ಪಡೆದಿದ್ದು, ಎಸಿಪಿ ಮೇರಿ ಶೈಲಜಾ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ.