Rakhi Sawant: ಹೃದಯಾ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾದ ರಾಖಿ ಸಾವಂತ್; ಫೋಟೋ ವೈರಲ್!
Rakhi Sawant: ತನ್ನ ಸ್ಟೈಲ್ ಮತ್ತು ವಿವಾದಗಳಿಂದ ಆಗಾಗ ಸುದ್ದಿಯಲ್ಲಿರುವ ರಾಖಿ ಸಾವಂತ್ ಆಸ್ಪತ್ರೆಗೆ ದಾಖಲಾಗಿದ್ದಾರೆ.
ರಾಖಿ ಸಾವಂತ್ ಗಂಭೀರ ಹೃದಯ ಕಾಯಿಲೆಯಿಂದ ಬಳಲುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಆಕೆ ಆಸ್ಪತ್ರೆಯ ಬೆಡ್ ಮೇಲೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಮಲಗಿರುವ ಚಿತ್ರಗಳೂ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
ಅವರಿಗೆ ಹೃದಯದ ಸಮಸ್ಯೆ ಕಾಣಿಸಿಕೊಂಡಿದೆ. ಈ ಬಗ್ಗೆ ರಾಖಿ ಸಾವಂತ್ ಪಾಪರಾಟ್ಜಿಯೊಬ್ಬರಿಗೆ ಸಂದೇಶ ಕಳಿಸಿ ತಿಳಿಸಿದ್ದಾರಂತೆ. ಆ ವಿಷಯನ್ನು ಪಾಪರಾಟ್ಜಿಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಆದರೆ ನಿಜಕ್ಕೂ ರಾಖಿ ಸಾವಂತ್ ಆರೋಗ್ಯ ಹದಗೆಟ್ಟಿದೆಯೇ ಅಥವಾ ಪ್ರಚಾರಕ್ಕಾಗಿ ಹೀಗೆ ಮಾಡುತ್ತಿದ್ದಾರೆಯೇ ಎಂಬ ಅನುಮಾನವೂ ಮೂಡಿದೆ.
ರಾಖಿ ಸಾವಂತ್ ಅವರ ಈ ಫೋಟೋಗಳನ್ನು ನೋಡಿದರೆ ಆಕೆಗೆ ಪ್ರಜ್ಞೆ ಇಲ್ಲದೇ ಮಲಗಿದ್ದಾರಾ ಅಥವಾ ಗಾಢ ನಿದ್ರೆಯಲ್ಲಿದ್ದಾರೋ ಎಂಬುದು ತಿಳಿದಿಲ್ಲ. ಫೋಟೋದಲ್ಲಿ ನರ್ಸ್ ಬಿಪಿ ಪರೀಕ್ಷಿಸುತ್ತಿರುವುದನ್ನು ಕಾಣಬಹುದು. ಹಿಂಭಾಗದಲ್ಲಿ ದೊಡ್ಡ ಇಸಿಜಿ ಯಂತ್ರವನ್ನೂ ಅಳವಡಿಸಲಾಗಿದೆ. ಸದ್ಯ ಆಕೆಗೆ ಗಂಭೀರ ಹೃದಯ ಸಮಸ್ಯೆ ಇದೆ ಎಂದು ವೈದ್ಯರು ತಿಳಿಸಿದ್ದಾರೆ. ಆದರೆ ನಟಿಗೆ ಏನಾಗಿದೆ ಎಂಬ ಸಂಪೂರ್ಣ ಮಾಹಿತಿ ಇನ್ನೂ ಬಹಿರಂಗವಾಗಿಲ್ಲ.
ರಾಖಿಯ ಒಂದು ಕೈಗೆ ಆಕ್ಸಿಮೀಟರ್ ಮತ್ತೊಂದು ಕೈಗೆ ಬಿಪಿ ಯಂತ್ರವನ್ನು ಹಾಕಿ, ರಾಖಿ ಬೆಡ್ ಮೇಲೆ ಮಲಗಿರುವ ಚಿತ್ರವನ್ನು ಪಾಪರಾಟ್ಜಿಯೊಬ್ಬರು ಹಂಚಿಕೊಂಡಿದ್ದಾರೆ. ರಾಖಿಗೆ ಹೃದಯ ಸಮಸ್ಯೆ ಎದುರಾಗಿದೆ ಹಾಗಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪಾಪರಾಜಿ ಬರೆದುಕೊಂಡಿದ್ದಾರೆ.
ಇನ್ನು ರಾಖಿಯ ಮಾಜಿ ಪತಿ, ಮೈಸೂರಿನ ಆದಿಲ್, ಇನ್ಸ್ಟಾಗ್ರಾಂನಲ್ಲಿ ವಿಡಿಯೋ ಒಂದನ್ನು ಹಂಚಿಕೊಂಡಿದ್ದು, ಇದು ತಮ್ಮ ಪಾಲಿನ ಅತ್ಯಂತ ಖುಷಿಯ ದಿನ ಎಂದು ಬರೆದುಕೊಂಡಿದ್ದಾರೆ. ರಾಖಿ ಸಾವಂತ್ಗೆ ನೀಡಲಾಗಿದ್ದ ನಿರೀಕ್ಷಣಾ ಜಾಮೀನನ್ನು ರದ್ದು ಮಾಡಿರುವ ಸುಪ್ರೀಂಕೋರ್ಟ್, ಇನ್ನು ನಾಲ್ಕು ವಾರಗಳ ಒಳಗಾಗಿ ರಾಖಿ ಸಾವಂತ್ ಮುಂಬೈ ಪೊಲೀಸರಿಗೆ ಶರಣಾಗಬೇಕು ಎಂದು ಸೂಚಿಸಿದೆ ಎಂದಿದ್ದಾರೆ. ಸುಪ್ರೀಂಕೋರ್ಟ್ನ ಆದೇಶ ಬಂದಿದ್ದಕ್ಕೆಂದೇ ರಾಖಿ ಸಾವಂತ್ ಆಸ್ಪತ್ರೆಗೆ ದಾಖಲಾದರೆ ಎಂಬ ಅನುಮಾನವೂ ಮೂಡಿದೆ.
‘ರಾಖಿ ಸಾವಂತ್ ಸುಪ್ರೀಂ ಕೋರ್ಟ್‌ನ ಆದೇಶಗಳಿಗೆ ಬದ್ಧರಾಗಿದ್ದರೆ ಮಾತ್ರ ರಾಖಿ ಅವರ ಜಾಮೀನು ಅರ್ಜಿಯನ್ನು ನ್ಯಾಯಾಲಯವು ಅಂಗೀಕರಿಸುತ್ತದೆ, ಇಲ್ಲದಿದ್ದರೆ, ಅಲ್ಲಿಯವರೆಗೆ ಯಾವುದೇ ಜಾಮೀನು ಇರುವುದಿಲ್ಲ’ ಎಂದು ಸುಪ್ರೀಂಕೋರ್ಟ್ ಹೇಳಿರುವುದಾಗಿ ಆದಿಲ್ ದುರಾನಿ ಹೇಳಿದ್ದಾರೆ. ಮೈಸೂರಿನ ಆದಿಲ್ ಹಾಗೂ ರಾಖಿ ಸಾವಂತ್ ವಿವಾಹವಾಗಿದ್ದರು. ಆದರೆ ರಾಖಿ ಸಾವಂತ್ ಆದಿಲ್ ವಿರುದ್ಧ ಹಲವು ಆರೋಪಗಳನ್ನು ಮಾಡಿ ವಿವಾದ ಎಬ್ಬಿಸಿದ್ದರು, ರಾಖಿಯ ದೂರು ಆಧರಿಸಿ ಆದಿಲ್ ಬಂಧನವೂ ಆಗಿತ್ತು. ಇದೀಗ ಆದಿಲ್, ರಾಖಿ ವಿರುದ್ಧ ದೂರು ನೀಡಿದ್ದಾರೆ.