ರಾಹುಲ್ ಗಾಂಧಿ ವಿರುದ್ದ ಆಕ್ಷೇಪಾರ್ಹ ಟ್ವೀಟ್; ಅಮಿತ್ ಮಾಳವಿಯ ವಿರುದ್ಧ ಎಫ್ ಐಆರ್
ಬೆಂಗಳೂರು : ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ವಿರುದ್ದ ಆಕ್ಷೇಪಾರ್ಹ ಟ್ವೀಟ್ ಮಾಡಿದ ಕಾರಣಕ್ಕೆ ಬಿಜೆಪಿ ನಾಯಕ ಮತ್ತು ಅದರ ಐಟಿ ವಿಭಾಗದ ಮುಖ್ಯಸ್ಥ ಅಮಿತ್ ಮಾಳವಿಯ ವಿರುದ್ಧ ಬೆಂಗಳೂರಿನಲ್ಲಿ ಎಫ್‌ಐಆರ್ ದಾಖಲಾಗಿದೆ. ಮಾಜಿ ಕಾಂಗ್ರೆಸ್ ಶಾಸಕ ರಮೇಶ್ ಬಾಬು ಅವರು ನೀಡಿದ ದೂರಿನ ಮೇರೆಗೆ ಎಫ್‌ಐಆರ್ ದಾಖಲಿಸಲಾಗಿದೆ.
ಮಾಳವಿಯ ಅವರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಕುರಿತಾಗಿ ”ಅಂತಾರಾಷ್ಟ್ರೀಯ ಮಾಧ್ಯಮಗಳ ಎದುರು ರಾಹುಲ್ ಗಾಂಧಿ ಅಪಾಯಕಾರಿ ಮತ್ತು ಕಪಟ ಆಟ ಆಡುತ್ತಿದ್ದಾರೆ” ಎಂದು ಬರೆದು ವ್ಯಂಗ್ಯವಾದ ವಿಡಿಯೋ ಟ್ವೀಟ್ ಮಾಡಿದ್ದರು.
ಈ ಬೆಳವಣಿಗೆಯ ಬಗ್ಗೆ ಪ್ರತಿಕ್ರಿಯಿಸಿರುವ ಬಿಜೆಪಿ ಸಂಸದ ತೇಜಸ್ವಿ ಸೂರ್ಯ, ಎಫ್‌ಐಆರ್ “ರಾಜಕೀಯ ಪ್ರೇರಿತ” ಎಂದಿದ್ದಾರೆ.ಹೇಳಿಕೆಗಾಗಿ ಐಪಿಸಿಯ 153 ಎ ಮತ್ತು 505 (2) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.ಮೇಲಿನ ಎರಡೂ ಸೆಕ್ಷನ್ ಗಳು ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವ ಬಗ್ಗೆ ವ್ಯವಹರಿಸುತ್ತವೆ. ಹಾಗಾದರೆ, ರಾಹುಲ್ ಗಾಂಧಿ ಎಂದರೇನು? ಒಬ್ಬ ವ್ಯಕ್ತಿ ಅಥವಾ ಗುಂಪು ಅಥವಾ ಒಂದು ವರ್ಗವೇ? ನಾವು ಇದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸುತ್ತೇವೆ ಮತ್ತು ನ್ಯಾಯವನ್ನು ಖಚಿತಪಡಿಸಿಕೊಳ್ಳುತ್ತೇವೆ” ಎಂದು ಟ್ವೀಟ್ ಮಾಡಿದ್ದಾರೆ.