ರಾಹುಲ್ ಗಾಂಧಿ ವಿರುದ್ಧ ಅವಹೇಳನಕಾರಿ ಟ್ವೀಟ್ : ಅಮಿತ್ ಮಾಳವೀಯ ವಿರುದ್ಧ ಬೆಂಗಳೂರಲ್ಲಿ ಎಫ್‌ಐಆರ್
ಬೆಂಗಳೂರು : ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ ವಿರುದ್ಧ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಅವಹೇಳನಕಾರಿ ಟ್ವೀಟ್ ಮಾಡಿದ್ದಕ್ಕೆ ಐಪಿಸಿ ಸೆಕ್ಷನ್ 153 ಎ, 120 ಬಿ, 505 (2) ಹಾಗೂ 34ರ ಅಡಿ ಎಫ್‌ಐಆರ್ ದಾಖಲಾಗಿದೆ. ಕೆಪಿಸಿಸಿ ವಕ್ತಾರ ರಮೇಶ್ ಬಾಬು ಹಾಗೂ ಸಚಿವ ಪ್ರಿಯಾಂಕ್ ಖರ್ಗೆ ಅಮಿತ್ ಮಾಳವೀಯಾ ವಿರುದ್ಧ ದೂರು ನೀಡಿದ್ದರು.
ಕಾಂಗ್ರೆಸ್ ದೇಶ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿದೆ ಎಂದು ಆರೋಪಿಸಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಅನಿಮೇಟೆಡ್ ವಿಡಿಯೋವನ್ನು ಅಮಿತ್ ಮಾಳವೀಯ ಬಿಡುಗಡೆ ಮಾಡಿದ್ದರು. ಈ ಹಿನ್ನೆಲೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ ಹಾಗೂ ಚಂಡೀಗಢ ಬಿಜೆಪಿ ರಾಜ್ಯಾಧ್ಯಕ್ಷ ಅರುಣ್ ಸೂದ್ ವಿರುದ್ಧವೂ ಕಾಂಗ್ರೆಸ್ ನಾಯಕರು ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಇದೇ ಜೂನ್ 17 ರಂದು ಅಮಿತ್ ಮಾಳವೀಯ ತಮ್ಮ ಅಧಿಕೃತ ಟ್ವಿಟರ್ ಖಾತೆಯಿಂದ ಅನಿಮೇಟೆಡ್ ವಿಡಿಯೋವನ್ನು ಪೋಸ್ಟ್ ಮಾಡಿದ್ದರು. ಆ ವಿಡಿಯೋದಲ್ಲಿ ಕಾಂಗ್ರೆಸ್ ಪಕ್ಷ ದೇಶ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿದೆ. ರಾಹುಲ್ ಗಾಂಧಿ ವಿದೇಶಕ್ಕೆ ಹೋದಾಗಲೆಲ್ಲ ಅವರು ದೇಶ ವಿರೋಧಿ ಚಟುವಟಿಕೆಗಳಲ್ಲಿ ತೊಡಗುತ್ತಾರೆ ಎಂದು ಹೇಳಲಾಗಿತ್ತು. ಇದು ಕಾಂಗ್ರೆಸ್ ನಾಯಕರನ್ನು ಕೆರಳಿಸಿದ್ದು, ಬಿಜೆಪಿ ನಾಯಕರ ವಿರುದ್ಧ ರಮೇಶ್ ಬಾಬು, ಪ್ರಿಯಾಂಕ್ ಖರ್ಗೆ ದೂರು ನೀಡಿದ್ದರು.