ಪುತ್ತೂರು : ಅಕ್ಷಯ್ ಕಲ್ಲೇಗ ಕೊಲೆ ಪ್ರಕರಣ ; ಆರೋಪಿಗಳು ಠಾಣೆಗೆ ಶರಣು!
ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ನೆಹರು ನಗರ ಜಂಕ್ಷನ್ನಲ್ಲಿ ಹುಲಿವೇಷ ತಂಡ ಕಲ್ಲೇಗ ಟೈಗರ್ಸ್ ಮುಖ್ಯಸ್ಥನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಪುತ್ತೂರಿನ ಕಲ್ಲೇಗ ಟೈಗರ್ಸ್ ಮುಖ್ಯಸ್ಥ ಅಕ್ಷಯ್ ಕಲ್ಲೇಗ (26) ಹತ್ಯೆಯಾದ ಯುವಕ. ಕೊಲೆ ನಂತರ ಮೂವರು ಆರೋಪಿಗಳ ಪೈಕಿ ಇಬ್ಬರು ಆರೋಪಿಗಳು ಪೊಲೀಸ್ ಠಾಣೆಗೆ ಶರಣಾಗಿದ್ದಾರೆ.
ಬನ್ನೂರು ನಿವಾಸಿ ಮನೀಷ್, ಚೇತು ಬಂಧಿತ ಆರೋಪಿಗಳಾಗಿದ್ದು, ಮತ್ತೊಬ್ಬ ಆರೋಪಿ ತಲೆಮರೆಸಿಕೊಂಡಿದ್ದಾನೆ. ದ್ವಿಚಕ್ರ ವಾಹನಗಳ ನಡುವೆ ನಡೆದ ಅಪಘಾತ ವಿಚಾರದಲ್ಲಿ ಎರಡು ಸಾವಿರ ನೀಡುವ ಬಗ್ಗೆ ಮಾತುಕತೆ ನಡೆದಿದೆ.
ಈ ವೇಳೆ ಬಸ್ ಚಾಲಕ ಚೇತು ಎಂಬಾತನ ಬೆಂಬಲಿಗ ಹಾಗೂ ಅಕ್ಷಯ್ ನಡುವೆ ತೀವ್ರ ವಾಗ್ವಾದ ನಡೆದಿದೆ. ಹೀಗೆ ಆರಂಭವಾದ ಗಲಾಟೆ ವಿಕೋಪಕ್ಕೆ ತಿರುಗಿದೆ. ಕೊನೆಗೆ ಮೂರಕ್ಕೂ ಅಧಿಕ ಮಂದಿಯ ತಂಡವು ಮಾಣಿ ಮೈಸೂರು ಹೆದ್ದಾರಿಯ ನೆಹರು ನಗರ ಜಂಕ್ಷನ್ನಲ್ಲಿ ಅಕ್ಷಯ್ನನ್ನ ಅಟ್ಟಾಡಿಸಿ ತಲವಾರಿನಿಂದ ಕೊಚ್ಚಿ ಕೊಲೆ ಮಾಡಿದ್ದಾರೆ.
ಅಕ್ಷಯ್ ಹತ್ಯೆ ಬಳಿಕ ಮನೀಷ್ ಮತ್ತು ಚೇತು ಪೊಲೀಸ್ ಠಾಣೆಗೆ ಶರಣಾಗಿದ್ದಾರೆ. ಘಟನೆ ಸಂಬಂಧ ಸ್ಥಳಕ್ಕೆ ಆಗಮಿಸಿದ ಪುತ್ತೂರು ನಗರ ಠಾಣಾ ಪೊಲೀಸರು, ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಹತ್ಯೆಗೆ ಬೇರೆ ಕಾರಣಗಳು ಇದೆಯಾ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸಲಾಗುತ್ತಿದೆ. ಹುಲಿಕುಣಿತದಲ್ಲಿ ಕಲ್ಲೇಗ ಟೈಗರ್ಸ್ ತಂಡದ ನೇತೃತ್ವವನ್ನು ಅಕ್ಷಯ್ ವಹಿಸಿಕೊಂಡಿದ್ದನು.