ಪುತ್ತೂರು : ಪುತ್ತಿಲ ಪರಿವಾರದ ಕಚೇರಿಗೆ ತಲ್ವಾರ್ ಹಿಡಿದು ನುಗ್ಗಿದ ಯುವಕರ ತಂಡ ; ಐವರು ಪೊಲೀಸ್ ವಶಕ್ಕೆ...!
ಪುತ್ತೂರು ನವೆಂಬರ್ 10: ಪುತ್ತಿಲ ಪರಿವಾರದ ಮತ್ತು ಹಿಂದೂ ಜಾಗರಣ ವೇದಿಕೆ ಮುಖಂಡರ ನಡುವೆ ಗಲಾಟೆ ನಡೆದ ಘಟನೆ ಪುತ್ತೂರಿನ ಮುಕ್ರಂಪಾಡಿಯಲ್ಲಿ ನಡೆದಿದೆ. ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಹಾಕಿರುವ ಪೋಸ್ಟ್ ಒಂದರ ವಿಚಾರವಾಗಿ ಈ ಗಲಾಟೆ ನಡೆದಿದೆ ಎಂದು ಹೇಳಲಾಗಿದೆ.
ಪುತ್ತೂರಿನ ಮುಕ್ರಂಪಾಡಿಯಲ್ಲಿರುವ ಪುತ್ತಿಲ ಪರಿವಾರ ಕಚೇರಿಗೆ ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರು ನುಗ್ಗಲು ಯತ್ನಿಸಿದ್ದಾರೆ. ಅರುಣ್ ಪುತ್ತಿಲ ಬೆಂಬಲಿಗರಾದ ಮನೀಶ್ ಕುಲಾಲ್ ಬನ್ನೂರು ಅವರನ್ನು ಗುರಿಯಾಗಿಟ್ಟುಗೊಂಡು ದಿನೇಶ್ ಪಂಜಿಗ ಎಂಬಾತ ನಾಲ್ವರು ಯುವಕರೊಂದಿಗೆ ತಲವಾರು ಹಿಡಿದುಕೊಂಡು ಆಗಮಿಸಿದ್ದರು ಎನ್ನಲಾಗಿದೆ.
ಈ ವೇಳೆ ಪುತ್ತಿಲ ಪರಿವಾರ ಕಚೇರಿಯಲ್ಲಿ ಕೃಷ್ಣಪ್ರಸಾದ್ ಶೆಟ್ಟಿ ಮತ್ತಿತರರು ಇದ್ದು, ಮನೀಶ್ ಕುಲಾಲ್ ಕಚೇರಿಯಲ್ಲಿ ಇರಲಿಲ್ಲ. ಮಾಹಿತಿ ತಿಳಿದ ಮನೀಶ್ ಕುಲಾಲ್ ಪೊಲೀಸರಿಗೆ ಮಾಹಿತಿ ನೀಡಿದ್ದರು. ತಕ್ಷಣ ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿ ಯುವಕರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ವಶಕ್ಕೆ ಪಡೆದವರನ್ನು 1. ಪುತ್ತೂರು ಶಾಂತಿಗೋಡು ಗ್ರಾಮದ ದಿನೇಶ ಪಂಜಿಗ (38) ,2. ನರಿಮೊಗರು ಗ್ರಾಮದ ಭವಿತ್ (19) ,3. ಪುತ್ತೂರು ಬೊಳ್ವಾರು ನಿವಾಸಿ ಮನ್ವಿತ್ (19), 4. ಆರ್ಯಾಪು ಗ್ರಾಮದ ಜಯಪ್ರಕಾಶ (18), 5. ಚಿಕ್ಕಮುಡ್ನೂರು ಗ್ರಾಮದ ಚರಣ್ (23), 6. ಪುತ್ತೂರು ಬನ್ನೂರು ಗ್ರಾಮದ ಮನೀಶ (23),7. ಪುತ್ತೂರು ಕಸಬಾ ಗ್ರಾಮದ ವಿನೀತ್ (19) ಎಂದು ಗುರುತಿಸಲಾಗಿದೆ.
ಈ ಹಿನ್ನಲೆ ಪುತ್ತೂರು ಠಾಣೆಯ ಮುಂದೆ ಹಿಂದೂ ಜಾಗರಣ ವೇದಿಕೆ ಹಾಗೂ ಪುತ್ತಿಲ ಪರಿವಾರದ ಕಾರ್ಯಕರ್ತರು ಜಮಾಯಿಸಿದ್ದಾರೆ. ಪೊಲೀಸ್ ಠಾಣೆಗೆ ಪುತ್ತಿಲ ಪರಿವಾರದ ಅರುಣ್ ಕುಮಾರ್ ಪುತ್ತಿಲ ಆಗಮಿಸಿ ಮಾತುಕತೆ ನಡೆಸಿದ್ದಾರೆ. ಪರಿಸ್ಥಿತಿ ಸ್ವಲ್ಪ ಬಿಗುವಿನಿಂದ ಕೂಡಿದೆ ಎಂದು ಹೇಳಲಾಗಿದೆ. ವಾಟ್ಸಾಪ್ ಗ್ರೂಪ್‌ನಲ್ಲಿ ನಡೆದ ಚರ್ಚೆಯ ಕೋಪದಲ್ಲಿ ಈ ಕೃತ್ಯ ನಡೆದಿದೆ ಎನ್ನಲಾಗಿದ್ದು, ಹಾಡಹಗಲೇ ತಲವಾರು ಹಿಡಿದುಕೊಂಡಿರುವ ಸಾರ್ವಜನಿಕರಲ್ಲಿ ಆತಂಕ ಕಾರಣವಾಗಿದೆ.
ಮಂಗಳೂರು – ಚಾಕುವಿನಿಂದ ಇರಿದುಕೊಂಡು ಆತ್ಮಹತ್ಯೆಗೆ ಶರಣಾದ ಕರ್ಣಾಟಕ ಬ್ಯಾಂಕ್ ನ ಹಿರಿಯ ಅಧಿಕಾರಿ
ಮಂಗಳೂರು ನವೆಂಬರ್ 09: ಕರ್ಣಾಟಕ ಬ್ಯಾಂಕ್ ನ ಹಿರಿಯ ಅಧಿಕಾರಿಯೊಬ್ಬರು ಚಾಕುವಿನಿಂದ ಇರಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಮಂಗಳೂರಿನಲ್ಲಿ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ ಅಧಿಕಾರಿಯನ್ನು ವಾದಿರಾಜ್(55) ಎಂದು ಹೇಳಲಾಗಿದೆ.
ಇವರು ಮನೆಯಲ್ಲಿ ಯಾರೂ ಇಲ್ಲದ ವೇಳೆ ಚಾಕುವಿನಿಂದ ಹೊಟ್ಟೆ ಹಾಗೂ ಕೊರಳಿಗೆ ಚುಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಈ ವೇಳೆ ಮನೆಮಂದಿ ಬಂದು ನೋಡಿದಾಗ ರಕ್ತದ ಮಡುವಿನಲ್ಲಿ ಬಿದ್ದಿದ್ದ ಅವರನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಿದರೂ ದಾರಿ ಮಧ್ಯೆ ಮೃತಪಟ್ಟಿದ್ದಾರೆ.
ಕಾರ್ಕಳದವರಾದ ವಾದಿರಾಜ ಅವರು ಆರು ವರ್ಷಗಳಿಂದ ನಗರದಲ್ಲಿ ನೆಲೆಸಿದ್ದಾರೆ. ಒಂದು ವರ್ಷದಿಂದ ಬೋಂದೆಲ್‌ನ ವಸತಿ ಸಮುಚ್ಚಯದಲ್ಲಿ ವಾಸವಿದ್ದರು. ವಾದಿರಾಜ ಅವರಿಗೆ ಪತ್ನಿ ಹಾಗೂ ಇಬ್ಬರು ಮಕ್ಕಳಿದ್ದಾರೆ. ಅವರ ಮಕ್ಕಳು ಕಲಿಯುತ್ತಿದ್ದ ಶಾಲೆಯಲ್ಲಿ ಗುರುವಾರ ಪೋಷಕರ ಸಭೆ ಇತ್ತು. ಅವರ ಪತ್ನಿ ಈ ಸಭೆಗೆ ಹೋಗಿದ್ದರು. ಈ ವೇಳೆ ಮನೆಯಲ್ಲಿ ಅವರೊಬ್ಬರೇ ಇದ್ದರು’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಅವರನ್ನು ಕಚೇರಿಗೆ ಕರೆದೊಯ್ಯಲು ಎಂದಿನಂತೆ ಕಾರು ಅವರ ಮನೆಯ ಬಳಿಗೆ ಬಂದಿತ್ತು. ಅವರು ಸುಮಾರು ಹೊತ್ತಾದರೂ ಕಾರಿನ ಬಳಿಗೆ ತೆರಳಿರಲಿಲ್ಲ. ಚಾಲಕ ಕರೆ ಮಾಡಿದರೂ ಪ್ರತಿಕ್ರಿಯಿಸಿರಲಿಲ್ಲ. ಹಾಗಾಗಿ ಚಾಲಕ ಮನೆಗೆ ಹೋಗಿ ನೋಡಿದಾಗ ಅವರು ರಕ್ತದ ಮಡುವಿನಲ್ಲಿ ಬಿದ್ದಿದ್ದರು. ತಕ್ಷಣವೇ ಅಪಾರ್ಟ್‌ಮೆಂಟ್‌ನಲ್ಲಿದ್ದವರು ಸೇರಿ ಅವರನ್ನು ಎ.ಜೆ.ಆಸ್ಪತ್ರೆಗೆ ಕರೆದೊಯ್ದಿದ್ದರು. ಆದರೆ, ಅಷ್ಟರಲ್ಲೇ ಅವರು ಅಸುನೀಗಿದ್ದರು’ ಎಂದು ಪೊಲೀಸರು ತಿಳಿಸಿದ್ದಾರೆ.