ಬಿಜೆಪಿ ಜೊತೆ ಸೇರಲು ಸಜ್ಜಾದ ಪುತ್ತಿಲ ಪರಿವಾರ ; ಎಲ್ಲಾ ಮಾತುಕತೆಗೆ ಒಪ್ಪಿಗೆ ಸೂಚನೆ?
ಪುತ್ತೂರು : ರಾಜ್ಯದ ರಾಜಕೀಯದಲ್ಲೇ ಸಂಚಲನ ಸೃಷ್ಟಿಸಿ ಬಿಜೆಪಿಗೆ ತಲೆನೋವು ತಂದಿದ್ದ ಪುತ್ತೂರಿನ ‘ಪುತ್ತಿಲ ಪರಿವಾರ’ ವನ್ನು ಮತ್ತೆ ಭಾರತೀಯ ಜನತಾ ಪಕ್ಷದ ಜೊತೆ ವಿಲೀನಗೊಳಿಸುವುದು ಬಹುತೇಕ ಖಚಿತವಾಗಿದೆ.
ಬಿಜೆಪಿ ಹಿರಿಯ ನಾಯಕ ಬಿ ಎಸ್ ಯಡ್ಯೂರಪ್ಪ ಅರುಣ್ ಕುಮಾರ್ ಪುತ್ತಿಲ ಜೊತೆ ನಡೆಸಿದ್ದ ಮಾತುಕತೆ ಫಲಪ್ರಧವಾಗಿದೆ ಎನ್ನಲಾಗಿದ್ದು ಪುತ್ತಿಲಗೆ ಸೂಕ್ತ ಸ್ಥಾನ ಮಾನ ನೀಡುವ ಭರವಸೆ ನೀಡಲಾಗಿದೆ ಎಂದು ತಿಳಿದು ಬಂದಿದೆ. ಕೆಲ ದಿನಗಳ ಹಿಂದೆ ಪುತ್ತೂರಿನಲ್ಲಿ ಸಭೆ ಸೇರಿದ್ದ ಪುತ್ತಿಲ ಪರಿವಾರ ಬಿಜೆಪಿ ಜತೆ ವಿಲೀನಕ್ಕೆ ಕೆಲ ಶರತ್ತುಗಳನ್ನು ವಿಧಿಸಿತ್ತು. ಜತೆಗೆ ಮೂರು ದಿನಗಳ ಗಡುವನ್ನು ವಿಧಿಸಲಾಗಿತ್ತು. ಆ ಗಡವು ಗುರುವಾರ ಮುಗಿಯುವುದರೊಳಗೆ ಶುಭ ಸುದ್ದಿಯನ್ನು ಬಿಜೆಪಿ ಹೈಕಮಾಂಡ್ ಪುತ್ತಿಲ ಪರಿವಾರಕ್ಕೆ ನೀಡಿದೆ ಎನ್ನಲಾಗಿದ್ದು ಬಿಎಸ್ ವೈ ಮಾತಿಗೆ ಪುತ್ತಿಲ ಪರಿವಾರ ಕೂಡ ಒಪ್ಪಿಗೆ ಸೂಚಿಸಿದೆ ಎನ್ನಲಾಗಿದೆ. ಸದ್ಯದಲ್ಲೇ ಬೆಂಗಳೂರಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರನ್ನು ಅರುಣ್ ಪುತ್ತಿಲ ಭೇಟಿಯಾಗಲಿದ್ದಾರೆ . ಪುತ್ತಿಲ ಪರಿವಾರ ಬಿಜೆಪಿಯಲ್ಲಿ ವಿಲೀನವಾಗುವ ಮಾಹಿತಿಯನ್ನು ಜಿಲ್ಲಾಧ್ಯಕ್ಷರು ಅಧಿಕೃತವಾಗಿ ಶುಕ್ರವಾರ ಪ್ರಕಟಿಸುವ ಸಾಧ್ಯತೆಯಿದೆ.