Puneeth Rajkumar : ಅಪ್ಪುವಿನ ಜನ್ಮದಿನ ಸ್ಪೂರ್ತಿಯ ದಿನ; ಕಂಠೀರವ ಸ್ಟುಡಿಯೋದಲ್ಲಿ ಅಭಿಮಾನಿಗಳ ಸಾಗರ

ತಾನು ಮಾಡಿದ ಸಮಾಜ ಸೇವೆ, ದಾನ-ಧರ್ಮಗಳ ಮೂಲಕ ಪುನೀತ್ ಹೆಸರು ಅಭಿಮಾನಿಗಳ ಮನದಲ್ಲಿ ಸದಾ ಜೀವಂತವಾಗಿಸಿದೆ. ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ ಎಂಬ ಘೋಷ ವಾಕ್ಯ ಕಾಮನ್ ಡಿಪಿಯಲ್ಲಿದೆ. ಸೋಶಿಯಲ್ ಮೀಡಿಯಾದಲ್ಲಿ ಸಿಡಿಪಿ ವೈರಲ್ ಆಗಿದ್ದು, ಗಣ್ಯರು ಹಾಗೂ ಅಭಿಮಾನಿಗಳು ಈ ಡಿಪಿಯನ್ನು ಶೇರ್ ಮಾಡಿದ್ದಾರೆ.
ಇಂದು (ಮಾ.17) ಸ್ಯಾಂಡಲ್‌ವುಡ್ ನಟ ಪವರ್ ಸ್ಟಾರ್ ದಿವಂಗತ ಪುನೀತ್ ರಾಜ್‌ಕುಮಾರ್ (Puneeth Rajkumar) ಅವರ ಜನ್ಮದಿನ. ನೆಚ್ಚಿನ ನಟ ಜನ್ಮದಿನವನ್ನು ಅಭಿಮಾನಿಗಳು ಸ್ಮರಣೀಯವಾಗಿ ಆಚರಿಸುತ್ತಿದ್ದಾರೆ. ನಿನ್ನೆ ರಾತ್ರಿಯಿಂದಲೇ ಕಂಠೀರವ ಸ್ಟುಡಿಯೋಗೆ ಅಭಿಮಾನಿಗಳು ಆಗಮಿಸುತ್ತಿದ್ದು, ಅಪ್ಪು ಸಮಾಧಿ ದರ್ಶನ ಪಡೆಯುತ್ತಿದ್ದಾರೆ.
ಅಪ್ಪು ಅವರ 49ನೇ ಜನ್ಮದಿನದ ಹಿನ್ನೆಲೆಯಲ್ಲಿ ಶನಿವಾರ ರಾತ್ರಿ ನಟ ಯುವ ರಾಜ್‌ಕುಮಾರ್ ಪುನೀತ್ ಸಮಾಧಿ ದರ್ಶನ ಪಡೆದಿದ್ದಾರೆ. ನಂತರ ಅಪ್ಪು ಪುತ್ಥಳಿ ಅನಾವರಣ ಮಾಡಿದ್ದಾರೆ. ಭಾನುವಾರವಾದ ಇಂದು ನಗರದೆಲ್ಲೆಡೆ ಅಪ್ಪು ಪುತ್ಥಳಿಯ ತೇರು ಸಂಚರಿಸಲಿದೆ.
ಮಾರ್ಚ್ 17 ಎಂದಾಗ ಅಪ್ಪು ಅಭಿಮಾನಿಗಳ ಮನದಲ್ಲಿ ನಾನಾ ಭಾವ. ದಿವಂಗತ ಪುನೀತ್ ರಾಜ್‌ಕುಮಾರ್ ಅವರ ಹುಟ್ಟುಹಬ್ಬ. ಹ್ಯಾಪಿ ಬರ್ತ್‌ಡೇ ಎಂದು ಹೇಳಿದರೆ ಮಾರುತ್ತರ ನೀಡಲು ಅವರಿಲ್ಲ ಎಂಬ ನೋವು ಅಭಿಮಾನಿಗಳದ್ದು. ಅಪ್ಪು ಅಜರಾಮರ ಎನ್ನುವಂತೆ ಅಪ್ಪು ಹೆಸರಿನಲ್ಲಿ ಹುಟ್ಟುಹಬ್ಬದಂದು ನಡೆಯುವ ಸಾಮಾಜಿಕ ಕಾರ್ಯಗಳಿಗೆ ಲೆಕ್ಕವಿಲ್ಲ. ಅಪ್ಪು ಕನ್ನಡಿಗರಿಗೆ ಸ್ಪೂರ್ತಿಯ ಚಿಲುಮೆ ಎನ್ನಬಹುದು.
ಇಂದು ಕುಟುಂಬ ಸಮೇತ ಅಪ್ಪು ಸಮಾಧಿ ದರ್ಶನಕ್ಕೆ ಅಭಿಮಾನಿಗಳು ಆಗಮಿಸುತ್ತಿದ್ದಾರೆ. ಎಲ್ಲೆಡೆ ಫ್ಯಾನ್ಸ್ ಪಟಾಕಿ ಸಿಡಿಸಿ ಸಂಭ್ರಮಿಸುತ್ತಿದ್ದಾರೆ. ಶನಿವಾರ ರಾತ್ರಿ 11 ಗಂಟೆಯಿಂದಲೇ ಕಂಠೀರವ ಸ್ಟೂಡಿಯೋಗೆ ಅಪ್ಪು ಫ್ಯಾನ್ಸ್ ಆಗಮಿಸುತ್ತಿದ್ದಾರೆ.
ಮಹಾಲಕ್ಷ್ಮಿ ಲೇಔಟ್ ಕ್ಷೇತ್ರದ ಶಾಸಕ ಗೋಪಾಲಯ್ಯ ಕೂಡ ಅಪ್ಪು ಸಮಾಧಿಗೆ ಭೇಟಿ ನೀಡಿ ದರ್ಶನ ಪಡೆದರು. ಫ್ಯಾನ್ಸ್ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಪೊಲೀಸರ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲಾಗಿದೆ. ಪುನೀತ್ ಫೋಟೊ, ಗುಲಾಬಿ ಹೂವನ್ನು ಸಮಾಧಿ ಬಳಿ ಇಟ್ಟು ಅಪ್ಪು ಫ್ಯಾನ್ಸ್ ತಮ್ಮ ನೆಚ್ಚಿನ ನಟನನ್ನು ಭಾವಪೂರ್ಣವಾಗಿ ನೆನಪಿಸಿಕೊಳ್ಳುತ್ತಿದ್ದಾರೆ.
ಅಗಲಿದ ಅಪ್ಪುವಿನ ನೆನಪಿನಲ್ಲಿ ಅಭಿಮಾನಿಗಳು ಹಲವು ಕಾರ್ಯಕ್ರಮಗಳನ್ನು ರಾಜ್ಯದೆಲ್ಲೆಡೆ ಹಮ್ಮಿಕೊಂಡಿದ್ದಾರೆ. ಇದೇ ಸಮಯದಲ್ಲಿ ಜಾಕಿ ಸಿನಿಮಾ ಮರು ಬಿಡುಗಡೆಯಾಗಿ ಯಶಸ್ವಿಯಾಗಿ ಪ್ರದರ್ಶನಗೊಳ್ಳುತ್ತಿದೆ.
ಸೋಷಿಯಲ್ ಮೀಡಿಯಾದಲ್ಲಿ ಈಗಾಗಲೇ ಅಭಿಮಾನಿಗಳು ಪುನೀತ್ ರಾಜ್‌ಕುಮಾರ್‌ರನ್ನು ನೆನಪಿಸಿಕೊಳ್ಳುತ್ತಿದ್ದಾರೆ. ಪುನೀತ್ ಹುಟ್ಟುಹಬ್ಬದ ಸ್ಮರಣಾರ್ಥವಾಗಿ ರಕ್ತದಾನ, ನೇತ್ರದಾನ ನೋಂದಣಿ ಶಿಬಿರ, ಉಚಿತ ಆರೋಗ್ಯ ತಪಾಸಣೆ ಸೇರಿದಂತೆ ವಿವಿಧ ರೀತಿಯಲ್ಲಿ ಪುನೀತ್ ರಾಜ್‌ಕುಮಾರ್‌ರನ್ನು ಅಭಿಮಾನಿಗಳು ನೆನಪಿಸಿಕೊಳ್ಳಲಿದ್ದಾರೆ.
ರಾಜ್ಕುಮಾರ್ಗೆ ಐವರು ಮಕ್ಕಳು. ರಾಘವೇಂದ್ರ ರಾಜ್‌ಕುಮಾರ್, ಶಿವರಾಜ್ಕುಮಾರ್, ಲಕ್ಷ್ಮಿ, ಪೂರ್ಣಿಮಾಗಿಂತ ಪುನೀತ್ ವಯಸ್ಸು ಸಣ್ಣದು. ಕಿರಿಮಗನ ಎಂಬ ಕಾರಣಕ್ಕೆ ರಾಜ್ಕುಮಾರ್ಗೆ ಪುನೀತ್ ಮೇಲೆ ಹೆಚ್ಚು ಪ್ರೀತಿ ಇತ್ತೇ ಎನ್ನುವ ಪ್ರಶ್ನೆ ಮೂಡೋದು ಸಹಜ. ಅದಕ್ಕೆ ಪುನೀತ್ ಅವರು ಈ ಮೊದಲು ಉತ್ತರ ನೀಡಿದ್ದರು. ಹಳೆಯ ಸಂದರ್ಶನ ಒಂದರಲ್ಲಿ ಈ ಬಗ್ಗೆ ಹೇಳಿಕೊಂಡಿದ್ದರು.