ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾಂಗ್ರೆಸ್ನ ಗತಕಾಲದ ವೈಭವವನ್ನು ಮರಳಿ ತರುವರೆ ಜನಾರ್ದನ ಪೂಜಾರಿ ಶಿಷ್ಯ?
ಮಂಗಳೂರು: ಬಿಜೆಪಿ ಹಿಡಿತದಲ್ಲಿರುವ ಪ್ರಮುಖ ಕ್ಷೇತ್ರಗಳನ್ನು ಟಾರ್ಗೆಟ್ ಮಾಡಿರುವ ಕಾಂಗ್ರೆಸ್, ದಕ್ಷಿಣ ಕನ್ನಡ ಸೇರಿದಂತೆ ಕೆಲ ಕ್ಷೇತ್ರಗಳಲ್ಲಿ ಹೊಸ ಪ್ರಯೋಗಕ್ಕೂ ಮುಂದಾಗಿದೆ. ಅದರ ಭಾಗವಾಗಿ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಿಂದ ಹೊಸ ಮುಖವನ್ನು ಕಾಂಗ್ರೆಸ್ ಹೈಕಮಾಂಡ್ ಮತ್ತು ಕೆಪಿಸಿಸಿ ಕಣಕ್ಕಿಳಿಸಿದೆ. ಮಾಜಿ ಕೇಂದ್ರ ಸಚಿವ ಜನಾರ್ದನ ಪೂಜಾರಿಯವರ ಶಿಷ್ಯ ಪದ್ಮರಾಜ್ ರಾಮಯ್ಯ ಅವರು ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ.
ಜನಾರ್ದನ ಪೂಜಾರಿಯವರ ಪ್ರೀತಿಯ ಶಿಷ್ಯನಾಗಿರುವ ಪದ್ಮರಾಜ್ ಅವರು ವೃತ್ತಿಯಲ್ಲಿ ವಕೀಲರಾಗಿದ್ದು ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ಮತ್ತು ರಾಜಕೀಯ ರಂಗದಲ್ಲಿ ತೊಡಗಿಸಿಕೊಂಡಿದ್ದಾರೆ. ಮಂಗಳೂರಿನ ಪ್ರಸಿದ್ಧ ಕುದ್ರೋಳಿ ಗೋಕರ್ಣನಾಥ ದೇವಾಲಯದ ಆಡಳಿತ ಸಮಿತಿಯ ಖಜಾಂಚಿ ಆಗಿರುವ ಅವರು ಮಂಗಳೂರಿನ ಪ್ರಸಿದ್ಧ ದಸರಾ ಕೂಟದ ರೂವಾರಿ ಎನಿಸಿಕೊಂಡಿದ್ದಾರೆ.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಯಾಗಿ ಜಿಲ್ಲೆಯಲ್ಲಿ ಪಕ್ಷವನ್ನು ಸಂಘಟಿಸುತ್ತಿದ್ದಾರೆ. ದ.ಕ ಜಿಲ್ಲೆಯ ಬಹುಸಂಖ್ಯಾತ ಬಿಲ್ಲದ ಸಮುದಾಯದ ನಂಬಿಕಸ್ಥ ಮುಖವಾಗಿರುವ ಪದ್ಮರಾಜ್ ರಾಮಯ್ಯ, ಎಲ್ಲಾ ಜಾತಿ ಧರ್ಮಗಳ ಜನರ ಜೊತೆ ಉತ್ತಮ ಬಾಂಧವ್ಯ, ಒಡನಾಟ ಇಟ್ಟುಕೊಂಡಿದ್ದಾರೆ. ಜಿಲ್ಲೆಯನ್ನು ಕೋಮು ಸಾಮರಸ್ಯದ ಕಡೆಗೆ ತರಲು ನಿರಂತರವಾಗಿ ಕೆಲಸ ಮಾಡುತ್ತಿದ್ದಾರೆ.
ಈ ಎಲ್ಲಾ ಮಾನದಂಡ, ಅರ್ಹತೆ ಪರಿಗಣಿಸಿ ಪದ್ಮರಾಜ್ ಅವರ ಹೆಸರು ಆಕಾಂಕ್ಷಿಗಳ ಪಟ್ಟಿಯಲ್ಲಿ ಹೈಕಮಾಂಡ್ ಗೆ ರವಾನೆಯಾಗಿತ್ತು. ಮಾಜಿ ಸಚಿವ ರಮನಾಥ ರೈ ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯ ಹಿರಿಯ ನಾಯಕರು ಪದ್ಮರಾಜ್ ಅವರನ್ನು ಬೆಂಬಲಿಸಿದ್ದರು. ನಿರೀಕ್ಷೆಯಂತೆ ಅವರಿಗೆ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ದಕ್ಷಿಣ ಕನ್ನಡ ಕ್ಷೇತ್ರದಿಂದ ಟಿಕೆಟ್ ಲಭಿಸಿದೆ..
ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರ ಒಂದು ಕಾಲದಲ್ಲಿ ಕಾಂಗ್ರೆಸ್ ಪಕ್ಷದ ಭದ್ರಕೋಟೆಯಾಗಿತ್ತು. ಜನಾರ್ದನ ಪೂಜಾರಿಯವರ ಹಿಡಿತದಲ್ಲಿದ್ದ ಈ ಕ್ಷೇತ್ರ ಬದಲಾದ ಕಾಲಘಟ್ಟದಲ್ಲಿ ಕಾಂಗ್ರೆಸ್ ಕೈತಪ್ಪಿ ಹೋಗಿತ್ತು. 3 ದಶಕದಿಂದ ಬಿಜೆಪಿ ಹಿಡಿತದಲ್ಲಿರುವ ಈ ಕ್ಷೇತ್ರ ಬಿಜೆಪಿಯ ಭದ್ರಕೋಟೆ ಎಂದು ಕರೆಸಿಕೊಳ್ಳುತ್ತಿದೆ. ಬಿಜೆಪಿಯ ಈ ಭದ್ರಕೋಟೆಯನ್ನು ಭೇದಿಸುವ ಪ್ರಯತ್ನದಲ್ಲಿರುವ ಕಾಂಗ್ರೆಸ್ ಪಕ್ಷ, ಜನಾರ್ದನ ಪೂಜಾರಿ ಅವರ ಕೈಯಿಂದ ಕಳೆದುಕೊಂಡಿರುವ ಕ್ಷೇತ್ರವನ್ನು ಅವರ ಪ್ರೀತಿಯ ಶಿಷ್ಯನ ಮೂಲಕವೇ ಪಡೆದುಕೊಳ್ಳಲು ಪ್ಲ್ಯಾನ್ ಮಾಡಿಕೊಂಡಿದೆ.
ಬಿಜೆಪಿಯನ್ನು ಸೋಲಿಸಬೇಕಾದರೆ ಜಿಲ್ಲೆಯಲ್ಲಿ ಬಹುಸಂಖ್ಯಾತರಾಗಿರುವ ಬಿಲ್ಲವರ ಮತಗಳನ್ನು ಸೆಳೆಯಬೇಕು. ಬಿಜೆಪಿ ಕಡೆ ವಾಲಿರುವ ಬಿಲ್ಲವರ ಮತಗಳನ್ನು ಕಾಂಗ್ರೆಸ್ ಪದ್ಮರಾಜ್ ರಾಮಯ್ಯ ಅವರ ಮುಖಾಂತರ ಪಕ್ಷಕ್ಕೆ ಸೆಳೆದಲ್ಲಿ ಲೋಕಸಭೆ ಸೇರಿದಂತೆ ಮುಂಬರುವ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಚುನಾವಣಾ ಗಳಲ್ಲಿ ಪಕ್ಷಕ್ಕೆ ಮುನ್ನಡೆಯನ್ನು ತಂದುಕೊಡುವುದರಲ್ಲಿ ಯಾವುದೇ ಸಂಶಯವಿರುವುದಿಲ್ಲ.
ಆದರೆ ಬಿಜೆಪಿಯಲ್ಲಿ ಬದಲಾದ ಸನ್ನಿವೇಶದಲ್ಲಿ ನಲಿನ್ ಕುಮಾರ್ ಕಟೀಲ್ ಅವರ ಬದಲಿಗೆ ಕ್ಯಾಪ್ಟನ್ ಬ್ರಿಜೆಷ್ ಚೌಟ ಅವರಿಗೆ ಟಿಕೆಟ್ ನೀಡಿದ್ದು ಹಾಗೂ ಇತ್ತೀಚಿನ ದಿನಗಳಲ್ಲಿ ಪುತ್ತಿಲ ಪರಿವಾರದ ಅರುಣ್ ಕುಮಾರ್ ಪುತ್ತಿಲ ಬಿಜೆಪಿಗೆ ಸೇರ್ಪಡೆಗೊಂಡಿದ್ದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ಬಾರಿ ಲೋಕಸಭಾ ಚುನಾವಣೆಯ ತೀವ್ರತೆಯನ್ನು ಇನ್ನಷ್ಟು ಹೆಚ್ಚಿಸಿದೆ.
ಬಿಜೆಪಿಯು ತಮ್ಮ ಅಭ್ಯರ್ಥಿಯ ಪರ ಈಗಾಗಲೇ ಮತ ಬೇಟೆ ಆರಂಭಿಸಿದ್ದು ಹಾಗೂ ಎಲ್ಲರೂ ಒಗ್ಗಟ್ಟಾಗಿ ದುಡಿಯುತ್ತಿದ್ದು ತಮ್ಮ ಅಭ್ಯರ್ಥಿಯನ್ನು ಎಂದೆಂದಿಗಿಂತ ಜಾಸ್ತಿ ಅಂತಾರದಿಂದ ಗೆಲ್ಲಿಸಿ ಕೊಡಬೇಕೆಂಬ ಛಲದಿಂದ ಕಾರ್ಯಕರ್ತರ ಜೊತೆಗೂಡಿ ಈಗಾಗಲೇ ಸಮಾಲೋಚನೆಯನ್ನು ಮಾಡಿ ಕೆಲಸವನ್ನು ಆರಂಭಿಸಿದ್ದಾರೆ.
ಏಪ್ರಿಲ್ ತಿಂಗಳ 26ರಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಚುನಾವಣೆ ನಡೆಯಲಿದ್ದು. ಜೂನ್ ತಿಂಗಳಲ್ಲಿ ಫಲಿತಾಂಶ ಹೊರಬೀಳಲಿದೆ.