ಶಾಸಕ ಪ್ರಕಾಶ್ ಸೋಲಂಕೆ ಅವರ ಮನೆಗೆ ಬೆಂಕಿ ಹಚ್ಚಿದ ಪ್ರತಿಭಟನಾಕಾರರು!
ಭೀಡ್ (ಅ.30): ಕಳೆದ ಆಗಸ್ಟ್‌ನಿಂದ ಮರಾಠಾ ಮೀಸಲಾತಿಗಾಗಿ ನಡೆಯುತ್ತಿರುವ ಬೇಡಿಕೆ ಮಹಾರಾಷ್ಟ್ರದಲ್ಲಿ ಸೋಮವಾರ ಹಿಂಸಾಚಾರಕ್ಕೆ ತಿರುಗಿದೆ. ಸೋಮವಾರ ಭೀಡ್‌ನ ಮಜಲಗಾಂವ್‌ನಲ್ಲಿರುವ ಎನ್‌ಸಿಪಿ ಅಜಿತ್ ಪವಾರ್ ಬಣದ ಶಾಸಕ ಪ್ರಕಾಶ್ ಸೋಲಂಕೆ ಅವರ ಮನೆ ಮತ್ತು ಕಚೇರಿ ಮೇಲೆ ಮೀಸಲಾತಿಗೆ ಒತ್ತಾಯಿಸಿದ ಹತ್ತಾರು ಜನರು ಕಲ್ಲು ತೂರಾಟ ನಡೆಸಿದ್ದಾರೆ. ನೂರಾರು ಪ್ರತಿಭಟನಾಕಾರರು ಇಲ್ಲಿ ಹತ್ತಾರು ಬೈಕ್‌ಗಳು ಮತ್ತು ಕಾರುಗಳಿಗೆ ಬೆಂಕಿ ಹಚ್ಚಿದ್ದಾರೆ. ಇತ್ತೀಚೆಗೆ, ಎನ್‌ಸಿಪಿ ಶಾಸಕ ಪ್ರಕಾಶ್ ಸೋಲಂಕೆ ಅವರ ವೀಡಿಯೊ ವೈರಲ್ ಆಗಿದ್ದು, ಅದರಲ್ಲಿ ಅವರು ಮರಾಠ ಮೀಸಲಾತಿಗೆ ಒತ್ತಾಯಿಸುತ್ತಿರುವ ನಾಯಕ ಮನೋಜ್ ಜಾರಂಜ್ ವಿರುದ್ಧ ಟೀಕೆ ಮಾಡಿರುವುದು ಕಂಡುಬಂದಿದೆ. ಇಂದು ಅವರ ಮನೆ ಮತ್ತು ಕಚೇರಿ ಮೇಲೆ ದಾಳಿ ನಡೆಸಲು ಈ ವಿಡಿಯೋವೇ ಕಾರಣ ಎನ್ನಲಾಗುತ್ತಿದೆ. ಘಟನೆ ಬಳಿಕ ಆ ಪ್ರದೇಶದಲ್ಲಿ ಪೊಲೀಸ್ ಭದ್ರತೆ ಹೆಚ್ಚಿಸಲಾಗಿದೆ. ಘಟನೆ ಕುರಿತು ಶಾಸಕ ಪ್ರಕಾಶ್ ಸೋಲಂಕೆ ಮಾತನಾಡಿದ್ದು, ದಾಳಿ ನಡೆದಾಗ ನಾನು ಮನೆಯೊಳಗಿದ್ದೆ. ಆದರೆ, ನನ್ನ ಕುಟುಂಬ ಸದಸ್ಯರು ಅಥವಾ ನೌಕರರಿಗೆ ಯಾವುದೇ ಗಾಯವಾಗಿಲ್ಲ. ನಾವೆಲ್ಲರೂ ಸುರಕ್ಷಿತವಾಗಿದ್ದೇವೆ ಆದರೆ ಬೆಂಕಿಯಿಂದಾಗಿ ಅಪಾರ ಆಸ್ತಿಪಾಸ್ತಿ ನಷ್ಟವಾಗಿದೆ ಎಂದಿದ್ದಾರೆ
ಮಹಾರಾಷ್ಟ್ರದಲ್ಲಿ ಭಾನುವಾರ (ಅಕ್ಟೋಬರ್ 29) ಮತ್ತೋರ್ವ ಯುವಕ ಮರಾಠಾ ಮೀಸಲಾತಿಯ ಬೇಡಿಕೆಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೃತರನ್ನು ಬೀಡ್ ಜಿಲ್ಲೆಯ ಪರ್ಲಿ ತಾಲೂಕಿನ ನಿವಾಸಿ ಗಂಗಾಭೀಷಣ ರಾಮರಾವ್ ಎಂದು ಗುರುತಿಸಲಾಗಿದೆ. ರಾಜ್ಯದಲ್ಲಿ 11 ದಿನಗಳಲ್ಲಿ 13 ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹಿಂಗೋಳಿಯ ಶಿವಸೇನೆ ಶಿಂಧೆ ಬಣದ ಸಂಸದ ಹೇಮಂತ್ ಪಾಟೀಲ್ ಅವರು ಮರಾಠಾ ಮೀಸಲಾತಿಯನ್ನು ಬೆಂಬಲಿಸಿ ರಾಜೀನಾಮೆ ನೀಡಿದ್ದಾರೆ. ರಾಜೀನಾಮೆ ಇನ್ನೂ ಲೋಕಸಭೆಯ ಸ್ಪೀಕರ್‌ಗೆ ತಲುಪಿಲ್ಲವಾದರೂ, ರಾಜೀನಾಮೆ ಪತ್ರ ವೈರಲ್ ಆಗುತ್ತಿದೆ.
ಈ ಸಮಸ್ಯೆ ಬಹಳ ಹಳೆಯದು. ದೇವೇಂದ್ರ ಫಡ್ನವೀಸ್ ಅವರು ಮುಖ್ಯಮಂತ್ರಿಯಾಗಿದ್ದಾಗ ಮರಾಠರಿಗೆ ಮೀಸಲಾತಿ ನೀಡಿದ್ದರು, ಆದರೆ ದುರದೃಷ್ಟವಶಾತ್ ಸುಪ್ರೀಂ ಕೋರ್ಟ್ ಅದನ್ನು ರದ್ದುಗೊಳಿಸಿತು. ಸಮಿತಿ ರಚಿಸಿದ್ದೇವೆ. ಶೀಘ್ರದಲ್ಲೇ ವರದಿ ಬರಲಿದೆ ಎಂದು ಮುಖ್ಯಮಂತ್ರಿ ಏಕನಾಥ್ ಶಿಂಧೆ ಹೇಳಿದ್ದಾರೆ.
ಮರಾಠ ಮೀಸಲಾತಿಗಾಗಿ ನಾವು ಎರಡು ರೀತಿಯಲ್ಲಿ ಕೆಲಸ ಮಾಡುತ್ತಿದ್ದೇವೆ. ಮೊದಲನೆಯದು – ಕುಂಬಿ ಪ್ರಮಾಣಪತ್ರ ಪತ್ರದ ಮೂಲಕ ಮತ್ತು ಎರಡನೆಯದು ಸುಪ್ರೀಂ ಕೋರ್ಟ್‌ನಲ್ಲಿ ಕ್ಯುರೇಟಿವ್ ಅರ್ಜಿಯ ಮೂಲಕ ಈ ಮೀಸಲಾತಿಗಾಗಿ ಹೋರಾಟ ಮಾಡುತ್ತಿದ್ದೇವೆ. ಶೀಘ್ರವೇ ಕುಂಬಿ ಪ್ರಮಾಣ ಪತ್ರ ನೀಡುವಂತೆ ಕಂದಾಯ ಸಚಿವರಿಗೆ ಸೂಚಿಸಲಾಗಿದೆ. ಮರಾಠ ಸಮಾಜ ಎಷ್ಟು ಹಿಂದುಳಿದಿದೆ ಎಂಬುದನ್ನು ಸರಕಾರ ಸುಪ್ರೀಂ ಕೋರ್ಟ್ ನಲ್ಲಿ ಸಾಬೀತುಪಡಿಸಲಿದೆ ಎಂದು ತಿಳಿಸಿದ್ದಾರೆ.
ಮರಾಠ ಮೀಸಲಾತಿ ಆಂದೋಲನದ ನಾಯಕ ಮನೋಜ್ ಜಾರಂಜ್ ಅವರು ಜಲ್ನಾದ ಅಂಟ್ರಾಲಿಯಲ್ಲಿ 6 ದಿನಗಳಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ. ‘ಮನೋಜ್ ಜಾರಂಜ್ ಅವರಿಗೆ ನನ್ನ ಮನವಿ ಏನೆಂದರೆ ನಮಗೆ ಸ್ವಲ್ಪ ಸಮಯ ಕೊಡಿ. ಅವರ ಆರೋಗ್ಯದ ಬಗ್ಗೆ ಸರ್ಕಾರ ಚಿಂತಿತವಾಗಿದೆ. ಔಷಧ, ನೀರು ಸೇವಿಸುವಂತೆ ಮನವಿ ಮಾಡಿದ್ದಾರೆ’ ಏಕನಾಥ್ ಶಿಂಧೆ ಮನವಿ ಮಾಡಿದ್ದಾರೆ.