ಅರ್ಜುನನ ಅಂತ್ಯಕ್ರಿಯೆ ವೇಳೆ ಪ್ರತಿಭಟನೆ: ಪೊಲೀಸರಿಂದ ಲಾಠಿ ಚಾರ್ಜ್!
ಹಾಸನ, ಡಿ.05: ಅರ್ಜುನ ಆನೆ ಅಂತ್ಯಕ್ರಿಯೆಗೆ ವಿರೋಧಿಸಿ ಸ್ಥಳೀಯರು ಪ್ರತಿಭಟನೆ ನಡೆಸಿದ್ದು, ಪ್ರತಿಭಟನಾನಿರತರ ಮೇಲೆ ಪೊಲೀಸರು ಲಾಠಿಚಾರ್ಜ್ ನಡೆಸಿದ್ದಾರೆ. ಮೈಸೂರಿನ ಬಳ್ಳೆ ಸಾಕಾನೆ ಶಿಭಿರಕ್ಕೆ ಮೃತ ಅರ್ಜುನ ಆನೆ(Arjuna Elephant)ಯನ್ನು ಕೊಂಡೊಯ್ಯಲು ಮಾವುತರು ಒತ್ತಾಯಿಸಿದರೆ, ಇತ್ತ ಸ್ಥಳೀಯರು ಸೂಕ್ತ ಸ್ಥಳದಲ್ಲಿ ಅಂತ್ಯ ಸಂಸ್ಕಾರ ಮಾಡಿ ಸ್ಮಾರಕ ಮಾಡಲು ಆಗ್ರಹಿಸಿದ್ದರು. ಇದಕ್ಕೆ ಒಪ್ಪದ ಅರಣ್ಯ ಅಧಿಕಾರಿಗಳು, ಮೃತಪಟ್ಟ ಸ್ಥಳವಾದ ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ದಬ್ಬಳ್ಳಿಕಟ್ಟೆ ಗ್ರಾಮದ ಬಳಿಯೇ ಅಂತ್ಯಕ್ರಿಯೆ ನಡೆಸಲು ಜೆಸಿಬಿ ಮೂಲಕ ಗುಂಡಿ ತೆಗೆಸುತ್ತಿದ್ದಾರೆ.
ಇನ್ನು ಕಣ್ಣೀರಿಡುತ್ತಲೇ ಮೃತ ಅರ್ಜುನ ಆನೆಗೆ ಮಾವುತ ವಿನು ಪೂಜೆ ಸಲ್ಲಿಸಿ, ದುಃಖ ತುಂಬಿದ ಮನದಲ್ಲೇ ಪ್ರದಕ್ಷಿಣಿ ಹಾಕಿದ್ದಾರೆ.ಜೊತೆಗೆ ಅರ್ಜುನನ ಕಳೆದುಕೊಂಡ ದುಃಖದಲ್ಲೇ ಅಂತಿಮ ವಿಧಿವಿಧಾನ ನೆರವೇರಿಸಿದ್ದಾರೆ. ಹಾಸನ ಜಿಲ್ಲಾಡಳಿತದಿಂದ ಅರ್ಜುನನಿಗೆ ಸರ್ಕಾರಿ ಗೌರವ ಸಮರ್ಪಣೆ ಮಾಡಿದ್ದು, ಪೊಲೀಸ್ ಇಲಾಖೆಯ ಸಿಬ್ಬಂದಿಯಿಂದ ಗಾಳಿಯಲ್ಲಿ ಮೂರು ಸುತ್ತು ಗುಂಡು ಹಾರಿಸಿ ಗೌರವ ಸಲ್ಲಿಸಿದ್ದಾರೆ. ಹಾಸನ ಜಿಲ್ಲಾಧಿಕಾರಿ ಸತ್ಯಭಾಮ, ಎಸ್ಪಿ ಮೊಹಮದ್ ಸುಜೀತಾ, ಡಿಸಿಎಫ್ ಮೋಹನ್ ಕುಮಾರ್ ಸಮ್ಕುಖದಲ್ಲಿ ಗೌರವಾರ್ಪಣೆ ಸಲ್ಲಿಸಿದರು. ಈ ವೇಳೆ ರಾಜ್ಯ ಅರಣ್ಯ ಇಲಾಖೆ ಭಾಗವಾಗಿ ಅಂತ್ಯಕ್ರಿಯೆಯಲ್ಲಿ ಸಹಾಯಕ ಅರಣ್ಯ ಮುಖ್ಯ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ ಶಾಶ್ವತಿ ಮಿಶ್ತ ಹಾಜರಿದ್ದರು.
ಘಟನೆ ವಿವರ
ವಿಶ್ವವಿಖ್ಯಾತ ಮೈಸೂರು ದಸರಾದಲ್ಲಿ 8 ಬಾರಿ ಅಂಬಾರಿ ಹೊತ್ತಿದ್ದ ಅರ್ಜುನ ಆನೆ, ಇಂದು ಕಾಡಾನೆ ಸೆರೆ ಕಾರ್ಯಾಚರಣೆ ವೇಳೆ ಒಂಟಿ ಸಲಗವೊಂದು ಹೊಟ್ಟೆಗೆ ತಿವಿದಿತ್ತು. ಇದರಿಂದ ತೀವ್ರ ಗಾಯಗೊಂಡಿದ್ದ ಅರ್ಜುನ ಮೃತಪಟ್ಟಿದೆ ಎನ್ನಲಾಗಿತ್ತು. ಆದರೆ, ಅರ್ಜುನ ಸಾವಿನ ಬಗ್ಗೆ ಮಾವುತರೊಬ್ಬರು ಹೇಳಿದ ಪ್ರಕಾರ ‘ಕಾಲಿಗೆ ಗುಂಡು ಬಿದ್ದ ನಂತರ ಅರ್ಜುನನಿಗೆ ನಡೆದಾಡಲು ಆಗಲಿಲ್ಲ, ಇದೇ ವೇಳೆ ಒಂಟಿ ಸಲಗ ದಾಳಿ ಮಾಡಿದ್ದರಿಂದ ಸಾವಾಗಿದೆ ಎಂದಿದ್ದರು. ಮದದಲ್ಲಿದ್ದ ಕಾಡಾನೆ ಸೆರೆಗೆ ಅರಣ್ಯ ಇಲಾಖೆ ಮುಂದಾಗಿತ್ತು. ಆ ಕಾಡಾನೆ ಹುಚ್ಚನಂತೆ ಆಡುತ್ತಿದೆ ಎಂಬ ಮಾಹಿತಿ ಕೊಟ್ಟಿದ್ದರೂ ಅರಣ್ಯ ಇಲಾಖೆ ಸಿಬ್ಬಂದಿ ತಪ್ಪು ನಿರ್ಧಾರ ಮಾಡಿದ್ದಾರೆ ಎಂಬ ಬಗ್ಗೆ ತಜ್ಞರು ಟೀಕೆ ಮಾಡಿದ್ದಾರೆ.
ನನ್ನ ಆನೆಯನ್ನು ಮೈಸೂರಿಗೆ ಕಳಿಸಿಕೊಡಿ, ಇಲ್ಲ ನನ್ನನ್ನೂ ಅರ್ಜುನ ಜತೆ ಮಣ್ಣು ಮಾಡಿ: ಅಂಗಲಾಚಿದ ಮಾವುತ
ಹಾಸನ, (ಡಿಸೆಂಬರ್ 05): ಮೈಸೂರು ದಸರಾ ಉತ್ಸವದಲ್ಲಿ 8 ಬಾರಿ ಅಂಬಾರಿ ಹೊತ್ತಿದ್ದ ಸಾಕಾನೆ ‘ಅರ್ಜುನ’ (Arjuna) ಕಾಡಾನೆ ಸೆರೆ ಕಾರ್ಯಾಚರಣೆ ವೇಳೆ ಮೃತಪಟ್ಟಿದೆ. ಸಕಲೇಶಪುರ ತಾಲ್ಲೂಕಿನ ಯಸಳೂರು ಬಳಿಯ ದಬ್ಬಳಿಕಟ್ಟೆ ಅರಣ್ಯದಲ್ಲಿ ಸೋಮವಾರ ಸಾವನ್ನಪ್ಪಿದ್ದು, ಇಡೀ ಕರ್ನಾಟಕವೇ ಮಮ್ಮಲ ಮರುಗಿದೆ. ಇನ್ನು ಅರ್ಜುನನ್ನು ನೋಡಿಕೊಳ್ಳುತ್ತಿದ್ದ ಮಾವುತ ವಿನು ಆಕ್ರಂದನ ಮುಗಿಲು ಮುಟ್ಟಿದೆ. ನನ್ನ ಆನೆಯನ್ನು ಬದುಕಿಸಿಕೊಡಿ, ನನ್ನ ಆನೆಯನ್ನು ಮೈಸೂರಿಗೆ ಕಳುಸಹಿಸಿಕೊಡಿ. ಇಲ್ಲಾ ನನ್ನನ್ನು, ನನ್ನನ್ನೂ ಅರ್ಜುನನ ಜೊತೆ ಮಣ್ಣು ಮಾಡಿ ಎಂದು ಅಂಗಲಾಚಿ ಬೇಡಿಕೊಳ್ಳುತ್ತಿದ್ದಾರೆ.
ನನ್ನ ಆನೆಗೆ ಆಕಸ್ಮಿಕವಾಗಿ ಕಾಲಿಗೆ ಗುಂಡು ಬಿತ್ತು. ಅವರೇನು ಬೇಕಂತ ಫೈರ್ ಮಾಡಿಲ್ಲ. ಆಕಸ್ಮಿಕವಾಗಿ ಗುಂಡೇಟು ಬಿದ್ದಿದೆ. ಗುಂಡೇಟು ತಗುಲಿದ ಬಳಿಕ ಆನೆ ಕುಂಟಲು ಶುರುವಾಯ್ತು. ಅವನು ಕುಂಟುತ್ತಾ ಎಷ್ಟು ಹೋರಾಟ ಮಾಡ್ತಾನೆ ಸಾರ್, ಆಗದೇ ಅಲ್ಲೇ ಕುಸಿದು ಬಿದ್ದ. ಪ್ರಶಾಂತ ಆನೆಗೆ ಮಿಸ್ಸಾಗಿ ಅರವಳಿಕೆ ಮದ್ದಿನ ಫೈರ್ ಆಗಿತ್ತು. ಆ ಆನೆಯನ್ನು ಸಂತೈಸಲು ಹೋದಾಗ ಸಲಗ ಅರ್ಜುನನ ಮೇಲೆ ದಾಳಿ ಮಾಡಿದೆ. ನಾನು ಇದ್ದಿದ್ದರೆ ಹೀಗೆ ಆಗಲು ಬಿಡುತ್ತಿರಲಿಲ್ಲ ಸಾರ್. ನಾನು ನನ್ನ ಆನೆ ಬಿಟ್ಟು ಹೋಗಲ್ಲ. ಸಾರ್ ನನ್ ರಾಜಾ ಮಲಗಿದಾನೆ ಸಾರ್ ಎದ್ದೇಳಿಸಿ. ಅರ್ಜುನ ಸತ್ತಿಲ್ಲ ಎಂದು ನನ್ನ ಹೆಂಡತಿ ಮಕ್ಕಳಿಗೆ ಹೇಳಿದ್ದೇನೆ. ಅರ್ಜುನನನ್ನು ನನ್ನ ಜೊತೆ ಕಳುಹಿಸಿಕೊಡಿ ಸಾರ್ ಎಂದು ಕಣ್ಣೀಡುತ್ತಿದ್ದಾರೆ.