Poonam Pandey: ಸುಳ್ಳು ಸುದ್ದಿ ಹಬ್ಬಿಸಿದಕ್ಕೆ ಪೂನಂ ಪಾಂಡೆ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಮುಂಬೈ ಪೊಲೀಸ್ ಬಳಿ ಮನವಿ..!
ಕಾಂಟ್ರವರ್ಸಿ ಮೂಲಕವೇ ಹೆಸರು ಮಾಡಿರುವ ಪೂನಂ ಪಾಂಡೆ (Poonam Pandey) ಈಗ ಬಹುತೇಕರ ಕೆಂಗಣ್ಣಿಗೆ ಗುರಿ ಆಗಿದ್ದಾರೆ. ತಮ್ಮ ಬಗ್ಗೆಯೇ ಸುಳ್ಳು ಸುದ್ದಿ ಹಬ್ಬಿಸಿಕೊಂಡ ಅವರನ್ನು ಕಂಡರೆ ಈಗ ಅನೇಕರು ಕಿಡಿಕಾರುತ್ತಿದ್ದಾರೆ. ಫೆಬ್ರವರಿ 2ರಂದು ಪೂನಂ ಪಾಂಡೆ ಕ್ಯಾನ್ಸರ್ನಿಂದ ಮೃತರಾದರು (Poonam Pandey Death) ಎಂದು ಸುಳ್ಳು ಸುದ್ದಿ ಹರಡಿಸಲಾಗಿತ್ತು. ಸ್ವತಃ ಪೂನಂ ಪಾಂಡೆ ಅವರ ಸೋಶಿಯಲ್ ಮೀಡಿಯಾ ಖಾತೆಯಿಂದಲೇ ಈ ಬ್ರೇಕಿಂಗ್ ನ್ಯೂಸ್ ನೀಡಲಾಗಿತ್ತು. ಆದರೆ ಮರುದಿನ ಅದು ಫೇಕ್ ನ್ಯೂಸ್ (Fake News) ಎಂಬುದು ಸ್ಪಷ್ಟವಾಯ್ತು. ಇದಕ್ಕೆ ಸಂಬಂಧಪಟ್ಟಂತೆ ಪೊಲೀಸರಿಗೆ ದೂರು ನೀಡಲಾಗಿದೆ.
ಮುಂಬೈನಲ್ಲಿ ಪತ್ರಕರ್ತರೊಬ್ಬರು ಪೂನಂ ಪಾಂಡೆ ವಿರುದ್ಧ ದೂರು ದಾಖಲಿಸಿದ್ದಾರೆ. ‘ಪೂನಂ ಪಾಂಡೆ ಅವರ ಸಾವಿನ ಕುರಿತು ಸುಳ್ಳು ಸುದ್ದಿ ಹರಡಲು ಕಾರಣರಾದ ಎಲ್ಲರ ವಿರುದ್ಧವೂ ಎಫ್ಐಆರ್ ದಾಖಲಿಸಿ. ಇಂತಹ ಸುಳ್ಳು ಸುದ್ದಿಗಳಿಗೆ ಕಡಿವಾಣ ಹಾಕಬೇಕು’ ಎಂದು ದೂರಿನಲ್ಲಿ ತಿಳಿಸಲಾಗಿದೆ. ಅನೇಕ ಸೆಲೆಬ್ರಿಟಿಗಳು ಕೂಡ ಪೂನಂ ಪಾಂಡೆ ಅವರ ಕೃತ್ಯವನ್ನು ಖಂಡಿಸುತ್ತಿದ್ದಾರೆ.
ಗರ್ಭಕಂಠದ ಕ್ಯಾನ್ಸರ್ನಿಂದ ಪೂನಂ ಪಾಂಡೆ ನಿಧನರಾದರು ಎಂಬ ಸುಳ್ಳು ಸುದ್ದಿ ಮಿಂಚಿನ ವೇಗದಲ್ಲಿ ಹರಡಿತು. ಅವರ ಅಭಿಮಾನಿಗಳಿಗೆ ಇದು ಆತಂಕ ಮೂಡಿಸಿತು. ಜನಸಾಮಾನ್ಯರಿಂದ ಹಿಡಿದು ಸೆಲೆಬ್ರಿಟಿಗಳ ತನಕ ಅನೇಕರು ಶ್ರದ್ಧಾಂಜಲಿ ಅರ್ಪಿಸಿದರು. ಆದರೆ ಇದೆಲ್ಲವೂ ಪ್ರಚಾರಕ್ಕಾಗಿ ಮಾಡಿದ್ದು ಎಂಬುದು ಗೊತ್ತಾದಾಗ ಎಲ್ಲರೂ ಹಿಡಿಶಾಪ ಹಾಕಿದರು.
ಪೂನಂ ಪಾಂಡೆ ಅವರು ಗರ್ಭಕಂಠದ ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ತಮ್ಮದೇ ಸಾವಿನ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಿದರು. ಅವರ ಉದ್ದೇಶ ಒಳ್ಳೆಯದೇ ಆಗಿದ್ದರೂ ಕೂಡ ಮಾರ್ಗ ಸರಿಯಾಗಿಲ್ಲ ಎಂದು ತೀವ್ರ ಟೀಕೆ ವ್ಯಕ್ತವಾಗುತ್ತಿದೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಚರ್ಚೆ ಆಗುತ್ತಿದೆ. ಇನ್ಸ್ಟಾಗ್ರಾಮ್ನಲ್ಲಿ ಪೂನಂ ಪಾಂಡೆ ಅವರನ್ನು 13 ಲಕ್ಷ ಜನರು ಫಾಲೋ ಮಾಡುತ್ತಿದ್ದಾರೆ. ಈ ಮೊದಲು ಕೂಡ ಅವರು ಹಲವಾರು ವಿವಾದಗಳನ್ನು ಮಾಡಿಕೊಂಡಿದ್ದರು.