Poonam pande: ಪೂನಂ ಪಾಂಡೆ ವಿರುದ್ಧ100 ಕೋಟಿ ರೂ. ಮಾನನಷ್ಟ ಕೇಸ್...!
ʼಸರ್ವಿಕಲ್ ಕ್ಯಾನ್ಸರ್ ಬಗ್ಗೆ ಅರಿವು ಮೂಡಿಸುವʼ ಹಿನ್ನೆಲೆಯಲ್ಲಿ ತನ್ನ ಫೇಕ್ ಸಾವಿನ ಮೂಲಕ ಪ್ರಚಾರ ಪಡೆದ ಪೂನಂ ಪಾಂಡೆಗೆ (Poonam Pande) ಈಗ ಕಾನೂನು ಸಂಕಷ್ಟ ಎದುರಾಗಿದೆ. ನಟಿ ಮತ್ತು ಆಕೆಯ ಮಾಜಿ ಪತಿ ಸ್ಯಾಮ್ ಬಾಂಬೆ ವಿರುದ್ಧ 100 ಕೋಟಿ ರೂಪಾಯಿ ಮಾನನಷ್ಟ ಮೊಕದ್ದಮೆ ದಾಖಲಿಸಲಾಗಿದೆ.
ಫೈಜಾನ್ ಅನ್ಸಾರಿ ಎಂಬವರು ಪ್ರಕರಣವನ್ನು ದಾಖಲಿಸಿದ್ದಾರೆ. “ಪೂನಂ ಪಾಂಡೆ ಅವರು ಕ್ಯಾನ್ಸರ್ ಕಾಯಿಲೆಯ ಗಂಭೀರತೆಯನ್ನು ಕ್ಷುಲ್ಲಕಗೊಳಿಸಿದ್ದಾರೆ. ಲಕ್ಷಾಂತರ ಜನರ ಭಾವನೆಗಳ ಜೊತೆಗೆ ಚೆಲ್ಲಾಟವಾಡಿದ್ದಾರೆ” ಎಂದು ಅವರು ಆರೋಪಿಸಿದ್ದಾರೆ. ಪಾಂಡೆ ಮತ್ತು ಆಕೆಯ ಮಾಜಿ ಪತಿಯನ್ನು ಬಂಧಿಸುವಂತೆ ಅವರು ಅಧಿಕಾರಿಗಳಿಗೆ ಒತ್ತಾಯಿಸಿದ್ದಾರೆ.
ಅನ್ಸಾರಿ ಅವರು ಕಾನ್ಪುರ ಪೊಲೀಸ್ ಕಮಿಷನರ್ ಮುಂದೆಯೂ ಎಫ್‌ಐಆರ್ ದಾಖಲಿಸಿದ್ದಾರೆ. ಪೂನಂ ಪಾಂಡೆ ಮತ್ತು ಆಕೆಯ ಮಾಜಿ ಪತಿ ಸ್ಯಾಮ್ ಬಾಂಬೆ ಅವರು ಕ್ಯಾನ್ಸರ್‌ನಂತಹ ಗಂಭೀರ ಕಾಯಿಲೆಯನ್ನು ಅಪಹಾಸ್ಯ ಮಾಡಿ, ಫೇಕ್ ಸಾವಿನ ಸಂಚು ರೂಪಿಸಿದ್ದಾರೆ. ಪೂನಂ ಪಾಂಡೆ ತನ್ನ ವೈಯಕ್ತಿಕ ಪ್ರಚಾರಕ್ಕಾಗಿ ಈ ಸಾಹಸವನ್ನು ಆಯೋಜಿಸಿದ್ದಾಳೆ. ಲಕ್ಷಾಂತರ ಭಾರತೀಯರು ಮತ್ತು ಇಡೀ ಬಾಲಿವುಡ್ ಉದ್ಯಮದ ನಂಬಿಕೆಗೆ ದ್ರೋಹ ಬಗೆದಿದ್ದಾರೆ ಎಂದು ಎಫ್‌ಐಆರ್ ತಿಳಿಸಿದೆ.
ಪೂನಂ ಪಾಂಡೆ ಅವರ ʼಸಾವಿನ ಸುದ್ದಿʼಯನ್ನು ಫೆಬ್ರವರಿ 2ರಂದು ಅವರ ಅಧಿಕೃತ Instagram ಹ್ಯಾಂಡಲ್‌ನಲ್ಲಿ ಹಂಚಿಕೊಂಡ ಪೋಸ್ಟ್‌ನಲ್ಲಿ ಪ್ರಕಟಿಸಲಾಗಿತ್ತು. “ನಮ್ಮ ಪ್ರೀತಿಯ ಪೂನಂ ಅವರನ್ನು ಗರ್ಭಕಂಠದ ಕ್ಯಾನ್ಸರ್‌ನಿಂದ ಕಳೆದುಕೊಂಡಿದ್ದೇವೆ ಎಂದು ತಿಳಿಸಲು ತುಂಬಾ ದುಃಖವಾಗುತ್ತಿದೆ. ಅವಳೊಂದಿಗೆ ಸಂಪರ್ಕಕ್ಕೆ ಬಂದ ವ್ಯಕ್ತಿಗಳು ಶುದ್ಧ ಪ್ರೀತಿಯನ್ನು ಕಾಣುತ್ತಾರೆ. ಈ ದುಃಖದ ಸಮಯದಲ್ಲಿ, ನಾವು ಅವಳನ್ನು ಪ್ರೀತಿಯಿಂದ ನೆನಪಿಸಿಕೊಳ್ಳುತ್ತೇವೆ” ಎಂದು ಪೋಸ್ಟ್ ಹೇಳಿತ್ತು.
ಒಂದು ದಿನದ ನಂತರ ಪೂನಂ ಪಾಂಡೆ ವೀಡಿಯೊ ಹೇಳಿಕೆ ನೀಡಿ, ತಾನು ಜೀವಂತವಾಗಿದ್ದೇನೆ ಎಂದು ಬಹಿರಂಗಪಡಿಸಿದರು. ಸುದ್ದಿಯ ಉದ್ದೇಶವು ಗರ್ಭಕಂಠದ ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸುವುದಾಗಿದೆ ಎಂದು ವಾದಿಸಿದರು. ಕಂಗನಾ ರಣಾವತ್, ಕರಣ್ ಕುಂದ್ರಾ ಸೇರಿದಂತೆ ಹಲವಾರು ಸೆಲೆಬ್ರಿಟಿಗಳು ಇದಕ್ಕಾಗಿ ನಟಿಯ ವಿರುದ್ಧ ವಾಗ್ದಾಳಿ ನಡೆಸಿದ್ದರು.
ಆಲ್ ಇಂಡಿಯನ್ ಸಿನಿ ವರ್ಕರ್ಸ್ ಅಸೋಸಿಯೇಷನ್ ಪೂನಂ ಪಾಂಡೆಯ ವಿರುದ್ಧ ಎಫ್‌ಐಆರ್‌ಗೆ ಒತ್ತಾಯಿಸಿತು. ಪೂನಂ ಅವರ ಕ್ರಮ “ಅತ್ಯಂತ ತಪ್ಪು” ಮತ್ತು “ಸ್ವೀಕಾರಾರ್ಹವಲ್ಲ” ಎಂದು ಹೇಳಿದೆ.