Poonam Pande: ಖ್ಯಾತ ನಟಿ ಮತ್ತು ಮಾಡೆಲ್ ಪೂನಂ ಪಾಂಡೆ ನಿಧನ...!
ನಟಿ ಹಾಗೂ ಮಾಡೆಲ್ ಪೂನಂ ಪಾಂಡೆ (Poonam Pandey) ಅವರು ಚಿತ್ರರಂಗದಲ್ಲಿ ಸಾಕಷ್ಟು ಜನಪ್ರಿಯತೆ ಪಡೆದವರು. ಅವರು ಮಾಡಿಕೊಂಡ ವಿವಾದಗಳು ಹಲವು. ಈಗ ಅವರು ಶುಕ್ರವಾರ (ಫೆಬ್ರವರಿ 2) ಮುಂಜಾನೆ ಮೃತಪಟ್ಟಿದ್ದಾರೆ ಎಂದು ವರದಿ ಆಗಿದೆ. ಕ್ಯಾನ್ಸರ್ನಿಂದ ಪೂನಂ ಮೃತಪಟ್ಟಿರುವುದಾಗಿ ಅವರ ಇನ್ಸ್ಟಾಗ್ರಾಮ್ ಖಾತೆ ಮೂಲಕ ಪೋಸ್ಟ್ ಮಾಡಲಾಗಿದೆ. ಉತ್ತರ ಪ್ರದೇಶದಲ್ಲಿರುವ ಅವರ ನಿವಾಸದಲ್ಲಿ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಅವರಿಗೆ ಕೇವಲ 32 ವರ್ಷ ವಯಸ್ಸಾಗಿತ್ತು. ಇದು ಅವರ ಅಭಿಮಾನಿಗಳಿಗೆ ಶಾಕಿಂಗ್ ಎನಿಸಿದೆ.
ಪೂನಂ ಪಾಂಡೆ ಅವರು ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಒಂದನ್ನು ಮಾಡಲಾಗಿದೆ. ‘ಇಂದು ಮುಂಜಾನೆ ಸಾಕಷ್ಟು ಕಷ್ಟಕರವಾಗಿತ್ತು. ಸರ್ವಿಕಲ್ ಕ್ಯಾನ್ಸರ್ನಿಂದ ನಮ್ಮ ಪ್ರೀತಿಯ ಪೂನಂ ಅವರನ್ನು ಕಳೆದುಕೊಂಡಿದ್ದೇವೆ. ಈ ದುಃಖದ ಸಂದರ್ಭದಲ್ಲಿ ನಮಗೆ ಪ್ರೈವಸಿ ನೀಡಿ’ ಎಂದು ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಲಾಗಿದೆ.
ಪೂನಂ ಪಾಂಡೆ ಅವರು 2013ರಲ್ಲಿ ಚಿತ್ರರಂಗಕ್ಕೆ ಕಾಲಿಟ್ಟರು. ‘ನಶಾ’ ಅವರ ನಟನೆಯ ಮೊದಲ ಸಿನಿಮಾ. ‘ಲವ್ ಈಸ್ ಪಾಯಿಸನ್’ ಹೆಸರಿನ ಕನ್ನಡ ಸಿನಿಮಾದಲ್ಲಿ ವಿಶೇಷ ಹಾಡಿಗೆ ಹೆಜ್ಜೆ ಹಾಕಿದ್ದರು. ತೆಲುಗು, ಬೋಜ್ಪುರಿ ಸಿನಿಮಾಗಳಲ್ಲಿ ಪೂನಂ ನಟಿಸಿದ್ದಾರೆ. 2018ರಲ್ಲಿ ರಿಲೀಸ್ ಆದ ‘ದಿ ಜರ್ನಿ ಆಫ್ ಕರ್ಮ’ ಸಿನಿಮಾದಲ್ಲಿ ಅವರು ನಟಿಸಿದ್ದರು. ಆ ಬಳಿಕ ಸಿನಿಮಾಗಳಲ್ಲಿ ಅವರು ಬಣ್ಣ ಹಚ್ಚಿಲ್ಲ.
ಧಾರಾವಾಹಿ ಹಾಗೂ ರಿಯಾಲಿಟಿ ಶೋಗಳಲ್ಲೂ ಪೂನಂ ಕಾಣಿಸಿಕೊಂಡಿದ್ದಾರೆ. 2022ರಲ್ಲಿ ಪ್ರಸಾರ ಕಂಡ ‘ಲಾಕ್ಅಪ್’ ಶೋನಲ್ಲಿ ಸ್ಪರ್ಧಿ ಆಗಿ ಪೂನಂ ಕಾಣಿಸಿಕೊಂಡಿದ್ದರು. ಅವರು ಏಳನೇ ಸ್ಥಾನದಲ್ಲಿ ಎಲಿಮಿನೇಟ್ ಆದರು. ಹಲವು ವಿವಾದಗಳನ್ನು ಕೂಡ ಅವರು ಮಾಡಿಕೊಂಡಿದ್ದರು. ಈಗ ಅವರು ನಿಧನ ಹೊಂದಿದರು ಎಂದರೆ ಅದನ್ನು ನಂಬೋಕೆ ಫ್ಯಾನ್ಸ್ಗೆ ಆಗುತ್ತಿಲ್ಲ.