ಬೆಂಗಳೂರಿಗೆ ಜನವರಿ 19 ಕ್ಕೆ ಪ್ರಧಾನಿ ಮೋದಿ; ಬಿಜೆಪಿ ಕಾರ್ಯಕರ್ತರಿಗೆ ಪಾಲ್ಗೊಳ್ಳಲು ಅವಕಾಶ?
ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ (PM Modi) ಅವರು ಇದೇ ಶುಕ್ರವಾರ (ಜನವರಿ 19) ಬೆಂಗಳೂರಿಗೆ (Bengaluru) ಭೇಟಿ ನೀಡಲಿದ್ದಾರೆ. ಈ ವೇಳೆ ಪ್ರಧಾನಿ ಸ್ವಾಗತಕ್ಕೆ ಕಾರ್ಯಕರ್ತರಿಗೆ ಅವಕಾಶ ನೀಡಲು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ (BY Vijayendra) ಉದ್ದೇಶಿಸಿದ್ದು, ಪ್ರಮುಖರ ಜತೆ ಚರ್ಚೆ ಮಾಡುತ್ತಿದ್ದಾರೆ ಎಂದು ತಿಳಿದು ಬಂದಿದೆ. ಜತೆಗೆ ಲೋಕಸಭಾ ಚುನಾವಣೆ (Lok Sabha Election 2024) ಸಮೀಪ ಇರುವ ಕಾರಣ, ಮೋದಿ ರೋಡ್ ಶೋ (Modi roadshow) ನಡೆಸುವ ಬಗ್ಗೆಯೂ ಚಿಂತನೆ ನಡೆಸಿದ್ದು, ಪ್ರಧಾನಿ ಕಾರ್ಯಾಲಯದಿಂದ ಒಪ್ಪಿಗೆಗೆ ಕಾಯಲಾಗುತ್ತಿದೆ ಎನ್ನಲಾಗಿದೆ.
ಪ್ರಧಾನಿಯವರ ಭೇಟಿ ಹಿನ್ನೆಲೆಯಲ್ಲಿ ಇದೇ 19ರಂದು ನಿಗದಿಪಡಿಸಲಾಗಿದ್ದ ಬಿಜೆಪಿ ರಾಜ್ಯ ಕಾರ್ಯಕಾರಿ ಸಭೆಯನ್ನು (BJP state executive meeting) ಮುಂದೂಡಲಾಗಿದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್ ತಿಳಿಸಿದರು.
ನಗರದ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಮಂಗಳವಾರ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಪಿ. ರಾಜೀವ್, ಬೆಂಗಳೂರಿನ ಏರೋಸ್ಪೇಸ್ ಇಂಜಿನಿಯರಿಂಗ್ ಸ್ಪೆಷಾಲಿಟಿ, ಇಂಡಿಯಾ ಇಂಜಿನಿಯರಿಂಗ್ ಆ್ಯಂಡ್ ಟೆಕ್ನಾಲಜಿ ಸೆಂಟರ್ (ಬಿಐಇಟಿಸಿ) ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಬರುವ ಕಾರಣ ಈ ಬದಲಾವಣೆಯನ್ನು ಮಾಡಲಾಗಿದೆ ಎಂದು ತಿಳಿಸಿದರು.
ಸ್ವಾಗತಕ್ಕೆ ಕಾರ್ಯಕರ್ತರ ಬಳಕೆ
ಪ್ರಧಾನಿ ನರೇಂದ್ರ ಮೋದಿ ಅವರ ಭೇಟಿ ವೇಳೆ ಪಕ್ಷದ ಕಾರ್ಯಕರ್ತರನ್ನು ಸ್ವಾಗತಕ್ಕೆ ಬಳಸಿಕೊಳ್ಳುವ ಕುರಿತು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಪ್ರಮುಖರ ಜತೆ ಚರ್ಚೆ ಮಾಡುತ್ತಿದ್ದಾರೆ ಎಂದು ಪಿ. ರಾಜೀವ್ ವಿವರಿಸಿದರು.
ಸಭೆ ನಡೆಸಿರುವ ಬಿ.ವೈ. ವಿಜಯೇಂದ್ರ
ಪ್ರಧಾನಿಯವರು ಬೆಂಗಳೂರಿಗೆ ಭೇಟಿ ನೀಡುವ ಸಂಬಂಧ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಪಕ್ಷದ ಪ್ರಧಾನ ಕಾರ್ಯದರ್ಶಿಗಳ ಜತೆ ಸೋಮವಾರ ಸಂಜೆ ಸಮಾಲೋಚನೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಆದರೆ, ಅಂದು ಪ್ರಧಾನಿಯವರ ಪ್ರವಾಸ ಪಟ್ಟಿ ಹೇಗಿದೆ? ಸ್ವಾಗತಕ್ಕೆ ಯಾರನ್ನೆಲ್ಲ ಬಳಸಿಕೊಳ್ಳಬಹುದು? ರೋಡ್ ಶೋ ನಡೆಸಲು ಅನುಮತಿ ಸಿಗುತ್ತದೆಯೇ ಎಂಬಿತ್ಯಾದಿ ಮಾಹಿತಿಗಾಗಿ ಪ್ರಧಾನಿ ಕಾರ್ಯಾಲಯದ ಸೂಚನೆಯನ್ನು ಎದುರು ನೋಡಲಾಗುತ್ತಿದೆ.
ಏರೋಸ್ಪೇಸ್ ದೊಡ್ಡ ಕ್ಯಾಂಪಸ್
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಮೀಪ 43 ಎಕರೆ ವಿಶಾಲ ಪ್ರದೇಶದಲ್ಲಿ ಅಂತರಿಕ್ಷಯಾನ ತಂತ್ರಜ್ಞಾನ ಸಂಶೋಧನೆ ಮತ್ತು ಅಭಿವೃದ್ಧಿ ಕ್ಯಾಂಪಸ್ ತಲೆ ಎತ್ತಿದೆ. ಬೋಯಿಂಗ್ ಸಹಭಾಗಿತ್ವದ ಏರೋಸ್ಪೇಸ್ ಎಂಜಿನಿಯರಿಂಗ್ ಮತ್ತು ಟೆಕ್ನಾಲಜಿ ಕೇಂದ್ರ 2018ರಲ್ಲಿ ಕಾರ್ಯಾರಂಭಿಸಿದೆ. ಭಾರತದಲ್ಲಿ ಅಂತರಿಕ್ಷಯಾನ ವಾಣಿಜ್ಯಿಕ ಮತ್ತು ರಕ್ಷಣಾ ಕ್ಷೇತ್ರವು ವಿಪುಲ ಅವಕಾಶಗಳನ್ನು ಸೃಷ್ಟಿಸಿದ್ದು, ಕಳೆದ ವರ್ಷವಷ್ಟೇ 1600 ಕೋಟಿ ರೂ ಬಂಡವಾಳವನ್ನು ಹೂಡಿಕೆ ಬಿಐಇಟಿಸಿ ಸಾಮರ್ಥ್ಯ ವಿಸ್ತರಿಸಿದ್ದು, ಅಂದಾಜು ಐದು ಸಾವಿರ ಉದ್ಯೋಗ ಅವಕಾಶಗಳು ಸೃಷ್ಟಿಯಾಗಿವೆ.