ಮುಖ್ಯ ಕಾರ್ಯದರ್ಶಿಗಳ ಸಮಾವೇಶದಲ್ಲಿ ಭಾಗವಹಿಸಲಿರುವ ಪ್ರಧಾನಿ ಮೋದಿ
ನವದೆಹಲಿ: ರಾಜ್ಯ ಸರ್ಕಾರಗಳು ಮತ್ತು ಕೇಂದ್ರ ಸರ್ಕಾರಗಳ ನಡುವಣ ಸಹಭಾಗಿತ್ವವವನ್ನು ವೃದ್ಧಿಸುವ ದೃಷ್ಟಿಯಿಂದ ಮಖ್ಯವೆನಿಸಿರುವ ಮುಖ್ಯ ಕಾರ್ಯದರ್ಶಿಗಳ ಸಮಾವೇಶದ ಅಧ್ಯಕ್ಷತೆಯನ್ನು ಇಂದೂ ಸಹ ಪ್ರಧಾನಿ ನರೇಂದ್ರ ಮೋದಿ (Narendra Modi) ವಹಿಸಲಿದ್ದಾರೆ. ದೆಹಲಿಯಲ್ಲಿ ನಡೆಯುತ್ತಿರುವ ಸಮಾವೇಶದಲ್ಲಿ ಶುಕ್ರವಾರ ಸಹ ಪ್ರಧಾನಿ ಭಾಗವಹಿಸಿದ್ದಾರೆ. ಇದು ಮುಖ್ಯ ಕಾರ್ಯದರ್ಶಿಗಳ ಎರಡನೇ ಸಮಾವೇಶವಾಗಿದ್ದು, ಈ ಹಿಂದೆ 2022ರ ಜೂನ್ನಲ್ಲಿ ಧರ್ಮಶಾಲಾದಲ್ಲಿ ಮೊದಲ ಸಮಾವೇಶ ನಡೆದಿತ್ತು. ರಾಷ್ಟ್ರ ರಾಜಧಾನಿಯಲ್ಲಿ ಜನವರಿ 5ರಿಂದ ಆರಂಭಗೊಂಡಿರುವ ಸಮಾವೇಶದ ಮುಖ್ಯ ಅಜೆಂಡಾ, ರಾಜ್ಯಗಳ ಸಹಭಾಗಿತ್ವದೊಂದಿಗೆ ಸುಸ್ಥಿರ ಆರ್ಥಿಕ ಬೆಳವಣಿಗೆ ಸಾಧಿಸುವ ಬಗ್ಗೆ ಸ್ಪಷ್ಟ ರೂಪುರೇಷೆ ಹೊಂದುವುದಾಗಿದೆ.
ಕೇಂದ್ರ ಸರ್ಕಾರದ ಪ್ರತಿನಿಧಿಗಳು, ಮುಖ್ಯ ಕಾರ್ಯದರ್ಶಿಗಳು ಮತ್ತು ಎಲ್ಲಾ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳ ಹಿರಿಯ ಅಧಿಕಾರಿಗಳು ಮತ್ತು ಡೊಮೇನ್ ತಜ್ಞರನ್ನು ಒಳಗೊಂಡ 200 ಕ್ಕೂ ಹೆಚ್ಚು ಅಧಿಕಾರಿಗಳು ಸಮಾವೇಶದಲ್ಲಿ ಭಾಗವಹಿಸಿದ್ದಾರೆ ಎಂದು ಪ್ರಧಾನಮಂತ್ರಿ ಕಾರ್ಯಾಲಯ ತಿಳಿಸಿದೆ.
ಪರಸ್ಪರ ನಂಬಿಕೆಯ ಆಧಾರದ ಮೇಲೆ ಬೆಳವಣಿಗೆ ಸಾಧಿಸುವುದು, ಉದ್ಯೋಗ ಸೃಷ್ಟಿ ಮತ್ತು ಅಂತರ್ಗತ ಮಾನವ ಅಭಿವೃದ್ಧಿಯ ಜತೆಗೆ ಅಭಿವೃದ್ಧಿ ಹೊಂದಿದ ದೇಶವನ್ನಾಗಿ ಭಾರತವನ್ನು ರೂಪಿಸಲು ಈ ಸಮ್ಮೇಳನವು ಅಡಿಪಾಯ ಹಾಕಲಿದೆ ಎಂದು ಪಿಎಂ ಹೇಳಿದೆ.
ಸಮನ್ವಯತೆಯೇ ಪ್ರಗತಿಗೆ ಆಧಾರ ಸ್ತಂಭ
ಈ ಮಹತ್ವದ ಸಮಾವೇಶದ ಮೂಲಕ ಸಹಕಾರಿ ಒಕ್ಕೂಟ, ಕೇಂದ್ರ ಸಚಿವಾಲಯಗಳು ಮತ್ತು ರಾಜ್ಯದ ಅನೇಕ ಇಲಾಖೆಗಳು ಸಮನ್ವಯವಾಗಿ ಕೆಲಸ ಮಾಡುತ್ತಿದೆ. ಇದು ನವ ಭಾರತದ ಅಭಿವೃದ್ಧಿ ಮತ್ತು ಪ್ರಗತಿಗೆ ಅಗತ್ಯವಾದ ಆಧಾರಸ್ತಂಭವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಹೇಳಿದ್ದರು.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಒಟ್ಟಾಗಿ ಕೆಲಸ ಮಾಡುತ್ತಿರುವುದಕ್ಕೆ ಈ ಸಮಾವೇಶ ಒಂದು ಉತ್ತಮ ಉದಾಹರಣೆಯಾಗಿದೆ. ಸರ್ಕಾರದ ಕಾರ್ಯಕ್ರಮಗಳು ಮತ್ತು ಯೋಜನೆಗಳ ಒಮ್ಮುಖದ ಮೂಲಕ ದೇಶದಾದ್ಯಂತ ಅತ್ಯಂತ ಹಿಂದುಳಿದ ಜಿಲ್ಲೆಗಳ ಅಭಿವೃದ್ಧಿ ಮಾಡಲು ಕಾರ್ಯನಿರ್ವಹಿಸಬೇಕಿದೆ ಎಂದು ಪ್ರಧಾನಮಂತ್ರಿ ಕಚೇರಿ ಮೂಲಗಳು ತಿಳಿಸಿವೆ.