ಜಿಂಬಾಬ್ವೆಯಲ್ಲಿ ವಿಮಾನ ಪತನ ; ಭಾರತದ ಕೋಟ್ಯದೀಶ್ವರ ಹಾಗೂ ಗಣಿ ಉದ್ಯಮಿ ಮತ್ತು ಅವರ ಪುತ್ರ ದುರ್ಮರಣ!
ನವದೆಹಲಿ: ನೈಋತ್ಯ ಜಿಂಬಾಬ್ವೆಯ (Zimbabwe) ವಜ್ರದ ಗಣಿ (Diamond Mine) ಬಳಿ ಸಂಭವಿಸಿದ ಖಾಸಗಿ ವಿಮಾನ ಅಪಘಾತದಲ್ಲಿ (Plane Crash) ಭಾರತದ ಕೋಟ್ಯದೀಶ್ವರ ಹಾಗೂ ಗಣಿ ಉದ್ಯಮಿ ಹರ್ಪಾಲ್ ರಾಂಧವಾ (Harpal Randhawa) ಹಾಗೂ ಅವರ ಪುತ್ರ ಅಮೆರ್ ಸೇರಿದಂತೆ 6 ಜನರು ಮೃತಪಟ್ಟಿದ್ದಾರೆ. ಉದ್ಯಮಿ ಹರ್ಪಾಲ್ ರಾಂಧವಾ ಅವರು ರಿಯೋಝಿಮ್ (RioZim Company) ಎಂಬ ಕಂಪನಿಯನ್ನು ಹೊಂದಿದ್ದು, ಚಿನ್ನ, ಕಲ್ಲಿದ್ದಲು ಜತೆಗೆ ನಿಕ್ಕೆಲ್ ಮತ್ತು ತಾಮ್ರದ ಗಣಿಕೆಯನ್ನು ನಡೆಸುತ್ತದೆ.
ಹರ್ಪಾಲ್ ರಾಂಧವಾ ಮತ್ತು ಅಮೇರ್ ಹಾಗೂ ಇತರ ನಾಲ್ವರು ಪ್ರಯಾಣಿಸುತ್ತಿದ್ದ ಖಾಸಗಿ ವಿಮಾನವು ‘ತಾಂತ್ರಿಕ ದೋಷ’ದಿಂದಾಗಿ ಪತನಗೊಂಡಿದೆ ಎಂದು ವರದಿಗಳು ತಿಳಿಸಿವೆ. iHarare ವೆಬ್‌ಸೈಟ್ ಪ್ರಕಾರ, ರಾಂಧವಾ ಅವರ ಮಗ ಮತ್ತು ಇತರ ನಾಲ್ವರು ಪ್ರಯಾಣಿಸುತ್ತಿದ್ದ ವಿಮಾನವು ಮಶಾವಾದ ಜ್ವಾಮಹಂಡೆ ಪ್ರದೇಶದಲ್ಲಿ ಪತನಗೊಂಡಿದೆ. ವಿಮಾನದಲ್ಲಿದ್ದವರು ಎಲ್ಲರೂ ಮೃತಪಟ್ಟಿದ್ದಾರೆ.
ಹರ್ಪಾಲ್ ರಾಂಧವಾ ಅವರು ರಿಯೋಝಿಮ್ ಕಂಪನಿಯ ಮಾಲೀಕರಾಗಿದ್ದಾರೆ. ಈ ಕಂಪನಿಯು ಬಂಗಾರ ಮತ್ತು ಕಲ್ಲಿದ್ದಲು ಜತೆಗೆ ನಿಕ್ಕೆಲ್ ಮತ್ತು ತಾಮ್ರದ ಗಣಿಗಾರಿಕೆ ನಡೆಸುತ್ತದೆ. ರಿಯೋಜಿಮ್ ಒಡೆತನದ ಸೆಸ್ನಾ 206 ವಿಮಾನದಲ್ಲಿ ಹರ್ಪಾಲ್ ರಾಂಧವಾ ಹಾಗೂ ಅವರ ಪುತ್ರ ಪ್ರಯಾಣಿಸುತ್ತಿದ್ದರು. ಅವರು ಹರಾರೆಯಿಂದ ಮುರೋವಾ ವಜ್ರದ ಗಣಿಗೆ ತಮ್ಮ ಖಾಸಗಿ ವಿಮಾನದಲ್ಲಿ ಪ್ರಯಾಣಿಸುತ್ತಿದ್ದರು. ಈ ವೇಳೆ ವಿಮಾನ ಪತನವಾಗಿದೆ.
ತಾಂತ್ರಿಕ ದೋಷವನ್ನು ಎದುರಿಸಿದ ವಿಮಾನವು, ಜ್ವಾಮಹಂಡೆ ಪ್ರದೇಶದ ಪೀಟರ್ ಹೊಲದಲ್ಲಿ ನೆಲಕ್ಕೆ ಅಪ್ಪಳಿಸುವ ಮುನ್ನ ಆಕಾಶದಲ್ಲೇ ಹೊತ್ತಿ ಉರಿದಿದೆ. ಈ ವಿಮಾನವು ಸಿಂಗಲ್ ಎಂಜಿನ್ ಹೊಂದಿತ್ತು.
ವಿಮಾನ ದುರಂತದಲ್ಲಿ ಮೃತಪಟ್ಟವರ ಎಲ್ಲ ಹೆಸರಗಳನ್ನು ಇನ್ನೂ ಬಿಡುಗಡೆ ಮಾಡಿಲ್ಲ. ಆದರೆ ರಾಂಧವಾ ಅವರ ಸ್ನೇಹಿತರಾಗಿದ್ದ ಪತ್ರಕರ್ತ ಮತ್ತು ಚಲನಚಿತ್ರ ನಿರ್ಮಾಪಕ ಹೋಪ್‌ವೆಲ್ ಚಿನೋನೊ ಅವರುವ ರಾಂಧವಾ ಅವರ ಸಾವನ್ನು ಖಚಿತಪಡಿಸಿದ್ದಾರೆ. ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಆರು ಜನರ ಪೈಕಿ ನಾಲ್ವರು ವಿದೇಶಿಗರಾಗಿದ್ದು, ಇಬ್ಬರು ಜಿಂಬಾಬ್ವೆ ಪ್ರಜೆಗಳಾಗಿದ್ದಾರೆ ಎಂಬ ಪೊಲೀಸರ ಹೇಳಿಕೆಯನ್ನು ಉಲ್ಲೇಖಿಸಿ ದಿ ಹೆರಾಲ್ಡ್ ವರದಿ ಮಾಡಿದೆ.