ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳನ್ನು ನಿಷೇಧಿಸಿ ಇಲೆಕ್ಟ್ರಿಕ್ ವಾಹನ ರಸ್ತೆಗಿಳಿಸಲು ಪ್ಲ್ಯಾನ್; ನಿತಿನ್ ಗಡ್ಕರಿ
ನವದೆಹಲಿ: ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳ ಬಳಕೆ ಹೆಚ್ಚಿಸಲು ಫೇಮ್ II ಯೋಜನೆಯಡಿ ಕೇಂದ್ರ ಸರ್ಕಾರ ಹಲವು ಸೌಲಭ್ಯಗಳನ್ನು ನೀಡಿದೆ. ಇತ್ತ ಇಂಧನ ವಾಹನಗಳ ಮೇಲಿನ ನಿಯಮ ಮತ್ತಷ್ಟು ಬಿಗಿಗೊಳಿಸಿದೆ. ಬಿಎಸ್6 ಎಮಿಶನ್ ಎಂಜಿನ್, ಹಳೇ ವಾಹನ ಗುಜುರಿ ನೀತಿ ಸೇರಿದಂತೆ ಹಲವು ಯೋಜನೆಗಳ ಮೂಲಕ ದೇಶದ ಮಾಲಿನ್ಯ ಹಾಗೂ ಜಾಗತಿಕ ತಾಪಮಾನ ಏರಿಕೆ ನಿಯಂತ್ರಿಸಲು ಹಂತ ಹಂತವಾಗಿ ಕ್ರಮಗಳನ್ನು ಕೈಗೊಳ್ಳುತ್ತಿದೆ. ಇದರ ನಡುವೆ ಕೇಂದ್ರ ಸರ್ಕಾರ ಮಹತ್ವದ ಪ್ಲಾನ್ ಬಹಿರಂಗಪಡಿಸಿದೆ. ದೇಶದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ವಾಹನ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಿ ಎಲೆಕ್ಟ್ರಿಕ್ ಹಾಗೂ ಹೈಬ್ರಿಡ್ ವಾಹನಕ್ಕೆ ಹೆಚ್ಚಿನ ಉತ್ತೇಜನ ನೀಡಲು ಕೇಂದ್ರ ಸರ್ಕಾರ ಮುಂದಾಗಿದೆ. ಈ ಕುರಿತು ಕೇಂದ್ರ ರಸ್ತೆ ಮತ್ತು ಸಾರಿಗೆ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.
ಹಸಿರು ಆರ್ಥಿಕತೆಯ ಭಾಗವಾಗಿ ಭಾರತದವನ್ನು ಜಾಗತಿಕ ಮಟ್ಟದಲ್ಲಿ ಪರಿಸರ ಪೂರಕ ದೇಶವಾಗಿ ಪರಿವರ್ತಿಸಲು ಕೇಂದ್ರ ಸರ್ಕಾರ ಎಲ್ಲಾ ಪ್ರಯತ್ನ ಮಾಡುತ್ತಿದೆ. ಇದರ ಭಾಗವಾಗಿ ದೇಶದಲ್ಲಿನ ಹೈಬ್ರಿಡ್ ವಾಹನಗಳ ಮೇಲಿನ ಜಿಎಸ್‌ಟಿ ಕಡಿತಗೊಳಿಸುವ ಯೋಜನೆಯನ್ನು ನಿತಿನ್ ಗಡ್ಕರಿ ಹೇಳಿದ್ದಾರೆ. ಇದೇ ವೇಳೆ ಮಾಧ್ಯಮದ ಪ್ರಶ್ನೆಗಳಿಗೆ ಉತ್ತರಿಸುವ ವೇಳೆ, ದೇಶದಲ್ಲಿ ಶೇಕಡಾ 100 ರಷ್ಟು ಪೆಟ್ರೋಲ್ ಹಾಗೂ ಡೀಸೆಲ್ ವಾಹನ ಬಳಕೆ ತೊಡೆದು ಹಾಕಲಾಗುತ್ತದೆ. ಭವಿಷ್ಯದಲ್ಲಿ ಈ ಯೋಜನೆಗಳು ಜಾರಿಗೆ ಬರಲಿದೆ ಎಂದಿದ್ದಾರೆ.
ದೇಶದಲ್ಲಿ ಪೆಟ್ರೋಲ್ ಡೀಸೆಲ್ ವಾಹನ ತೊಡೆದು ಹಾಕುವುದು ಅಸಾಧ್ಯದ ಮಾತಲ್ಲ, ಇದು 100 ಪ್ರತಿಶತ ಸಾಧ್ಯವಿದೆ. ಹಸಿರು ಇಂಧನದ ಉತ್ತೇಜನ ಇದರ ಜೊತೆಗೆ ಈಗಾಗಲೇ ಕೈಗೊಂಡಿರುವ ಹಲವು ಯೋಜನೆಗಳ ಮೂಲಕ ಭಾರತದಲ್ಲಿ ಕ್ರಾಂತಿ ಸಾಧ್ಯವಿದೆ ಎಂದು ನಿತಿನ್ ಗಡ್ಕರಿ ಹೇಳಿದ್ದಾರೆ. ಪೆಟ್ರೋಲ್ ಡೀಸೆಲ್ ವಾಹನದಿಂದ ಸಂಪೂರ್ಣವಾಗಿ ಎಲೆಕ್ಟ್ರಿಕ್ , ಹೈಬ್ರಿಡ್ ಹಾಗೂ ಇತರ ಹಸಿರು ಇಂಧನ ವಾಹನಗಳ ಬಳಕೆ ಯಾವಾಗ ಎಂದು ದಿನಾಂಕ ಹೇಳಲು ಕಷ್ಟ. ಆದರೆ ಇದು ಸಾಧ್ಯ ಎಂದು ನಿತಿನ್ ಗಡ್ಕರಿ ಹೇಳಿದ್ದಾರೆ.
ಹೈಡ್ರೋಜನ್ ಇಂಧನ ಚಾಲಿತ ವಾಹನ, ಎಲೆಕ್ಟ್ರಿಕ್ ವಾಹನಗಳು ಇದೀಗ ಎಲ್ಲೆಡೆ ಕಾಣಸಿಗುತ್ತದೆ. ಹತ್ತು ಮನೆಗಳ ಪೈಕಿ ಕನಿಷ್ಠ 5 ಮನೆಗಳಲ್ಲಿ ಎಲೆಕ್ಟ್ರಿಕ್ ವಾಹನಗಳು ಕಾಣಸಿಗುತ್ತದೆ. ಈ ಹಿಂದೆ ಇದೆಲ್ಲವು ಅಸಾಧ್ಯ ಎಂದೇ ಹೇಳಲಾಗಿತ್ತು. ಆದರೆ ಇದೀಗ ಸಾಧ್ಯವಾಗಿದೆ. ಹೈಬ್ರಿಡ್ ವಾಹನಗಳ ಮೇಲಿನ ಜಿಎಸ್‌ಟಿ ದರವನ್ನು ಶೇಕಡಾ 5ಕ್ಕೆ ಇಳಿಸಲು ಹಾಗೂ ಫ್ಲೆಕ್ಸ್ ಎಂಜಿನ್( ಹೈಡ್ರೋಜನ್, ಎಥೆನಾಲ್ ಇಂಧನ ಬಳಕೆ)ವಾಹನಗಳ ಮೇಲಿನ ಜಿಎಸ್‌ಟಿಯನ್ನು ಶೇಕಡಾ 12ಕ್ಕೆ ಇಳಿಸಲು ಕೇಂದ್ರ ಹಣಕಾಸು ಸಚಿವಾಲಯಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ. ಈ ಪ್ರಸ್ತಾವನೆಗೆ ಅನುಮೋದನೆ ಸಿಕ್ಕರೆ, ದೇಶದಲ್ಲಿನ ಹೈಬ್ರಿಡ್, ಫ್ಲೆಕ್ಸ್ ಎಂಜಿನ್ ವಾಹನಗಳ ಬೆಲೆ ಇಳಿಕೆಯಾಗಲಿದೆ. ಇದು ಜನರಿಗೆ ಅನುಕೂಲವಾಗಲಿದೆ ಎಂದು ನಿತಿನ್ ಗಡ್ಕರಿ ಹೇಳಿದ್ದಾರೆ.