ಈಶಾನ್ಯ ಉತ್ಸವದಲ್ಲಿ ಭಾಗವಹಿಸಿದ್ದಕ್ಕಾಗಿ, ಸಿನಿಮಾ ಹಾಗೂ ಸಾರ್ವಜನಿಕ ಕಾರ್ಯಕ್ರಮಗಳಿಗೆ ನಟಿ ಸೋಮಾ ಲೈಶ್ರಾಮ್ ಬ್ಯಾನ್!
ಇಂಫಾಲ್: ಮಣಿಪುರಿ ನಟಿ ಸೋಮಾ ಲೈಶ್ರಾಮ್ ಅವರು ಇತ್ತೀಚೆಗೆ ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸಿದ ನಂತರ ಇಂಫಾಲ್ ಮೂಲದ ಸಂಸ್ಥೆಯಿಂದ ಸಿನಿಮಾಗಳಲ್ಲಿ ನಟಿಸಲು ಮತ್ತು ಸಾರ್ವಜನಿಕ ಕಾರ್ಯಕ್ರಮಗಳಿಗೆ ಹಾಜರಾಗದಂತೆ ನಿರ್ಬಂಧಿಸಲಾಗಿದೆ. ಇದನ್ನು ತೀವ್ರವಾಗಿ ಪ್ರತಿಭಟಿಸಿರುವ ಅವರು ತಮ್ಮ ರಾಜ್ಯದ ವಿರುದ್ಧ ಏನನ್ನೂ ಮಾಡಿಲ್ಲ ಎಂದು ಹೇಳಿದ್ದಾರೆ.
ಮಣಿಪುರದಲ್ಲಿ ನಡೆಯುತ್ತಿರುವ ಹಿಂಸಾಚಾರದ ನಡುವೆ ದೆಹಲಿಯಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಕ್ಕಾಗಿ ಸಿವಿಲ್ ಸೊಸೈಟಿ ಗ್ರೂಪ್ ಕಂಗ್ಲೇಪಕ್ ಕನ್ಬಾ ಲೂಪ್ ಸೋಮಾ ಲೈಶ್ರಾಮ್ ಮೇಲೆ ಈ ನಿಷೇಧವನ್ನು ವಿಧಿಸಿದೆ. ಈ ಬೆಳವಣಿಗೆಯಿಂದ ನಾನು ಆಘಾತಕ್ಕೊಳಗಾಗಿದ್ದೇನೆ. ಅಲ್ಲದೆ ನಿರಾಶೆಗೊಂಡಿದ್ದೇನೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ ವೀಡಿಯೊದಲ್ಲಿ ಲೈಶ್ರಾಮ್ ಹೇಳಿದ್ದಾರೆ.
ನಾನು ಇದನ್ನು ಬಲವಾಗಿ ವಿರೋಧಿಸುತ್ತೇನೆ. ಓರ್ವ ಕಲಾವಿದೆಯಾಗಿ ಮತ್ತು ಸಾಮಾಜಿಕ ಪ್ರಭಾವಶಾಲಿಯಾಗಿ, ನನಗೆ ಎಲ್ಲಿ ಬೇಕಾದರೂ ಮತ್ತು ಯಾವಾಗ ಬೇಕಾದರೂ ಮಾತನಾಡಲು ನನಗೆ ಎಲ್ಲ ಹಕ್ಕಿದೆ. ನಾನು ನನ್ನ ರಾಜ್ಯ ಮತ್ತು ನನ್ನ ತಾಯಿನಾಡಿನ ವಿರುದ್ಧ ಏನನ್ನೂ ಮಾಡಿಲ್ಲ ಎಂದು 100ಕ್ಕೂ ಹೆಚ್ಚು ಮಣಿಪುರಿ ಚಿತ್ರಗಳಲ್ಲಿ ನಟಿಸಿರುವ ಲೈಶ್ರಾಮ್ ಹೇಳಿದ್ದಾರೆ.
ಈಶಾನ್ಯ ಉತ್ಸವದಲ್ಲಿ ಮಣಿಪುರವನ್ನು ಶೋಸ್ಟಾಪರ್ ಆಗಿ ಪ್ರತಿನಿಧಿಸಲು ನನ್ನನ್ನು ಕರೆದಾಗ, ನಾನು ನನ್ನ ರಾಜ್ಯವನ್ನು ಬೆಂಬಲಿಸುವ ಮತ್ತು ಅಲ್ಲಿದ್ದ ಸಾವಿರಾರು ಜನರಲ್ಲಿ (ಹಿಂಸಾಚಾರದ ಹಿಂದಿನ ಕಾರಣದ ಬಗ್ಗೆ) ಜಾಗೃತಿ ಮೂಡಿಸುವ ಉದ್ದೇಶವನ್ನು ಹೊಂದಿದ್ದೆ ಎಂದು 31 ವರ್ಷದ ನಟ ಹೇಳಿದರು.
ಲೈಶ್ರಾಮ್ ಮೇಲಿನ ನಿಷೇಧವನ್ನು ಸಾರ್ವಜನಿಕರು ಮತ್ತು ಚಲನಚಿತ್ರ ಸಂಘಗಳು ವ್ಯಾಪಕವಾಗಿ ಖಂಡಿಸಿವೆ. ಫಿಲ್ಮ್ ಫೋರಂ ಮಣಿಪುರದ ಉನ್ನತ ಅಧಿಕಾರಿಯೊಬ್ಬರನ್ನು ಸಂಪರ್ಕಿಸಿದಾಗ, ಇಂತಹ ಹಸ್ತಕ್ಷೇಪ ದುರದೃಷ್ಟಕರ ಮತ್ತು ಅನಗತ್ಯ ಎಂದು ಹೇಳಿದರು.
ಮೇ 3ರಂದು ಮಣಿಪುರದಲ್ಲಿ ಜಾತಿ ಹಿಂಸಾಚಾರ ಪ್ರಾರಂಭವಾದಾಗಿನಿಂದ 175ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದು ನೂರಾರು ಜನರು ಗಾಯಗೊಂಡಿದ್ದಾರೆ. ಪರಿಶಿಷ್ಟ ಪಂಗಡದ ಸ್ಥಾನಮಾನಕ್ಕಾಗಿ ಬಹುಸಂಖ್ಯಾತ ಮೈತೀ ಸಮುದಾಯದ ಬೇಡಿಕೆಯನ್ನು ಪ್ರತಿಭಟಿಸಲು ಗುಡ್ಡಗಾಡುಗಳಲ್ಲಿ ನೆಲೆಸಿರುವವರು ‘ಬುಡಕಟ್ಟು ಒಗ್ಗಟ್ಟಿನ ಮೆರವಣಿಗೆ’ ನಡೆಸಿದ್ದರು.
ಮಣಿಪುರದ ಜನಸಂಖ್ಯೆಯ ಶೇಕಡ 53 ರಷ್ಟಿರುವ ಮೈತೈಗಳು ಇಂಫಾಲ್ ಕಣಿವೆಯಲ್ಲಿ ವಾಸಿಸುತ್ತಿದ್ದಾರೆ. ಆದರೆ ನಾಗಾಗಳು ಮತ್ತು ಕುಕಿಗಳು ಸೇರಿದಂತೆ ಬುಡಕಟ್ಟು ಜನಾಂಗದವರು ಶೇಕಡಾ 40 ರಷ್ಟಿದ್ದಾರೆ ಮತ್ತು ಹೆಚ್ಚಾಗಿ ಗುಡ್ಡಗಾಡು ಜಿಲ್ಲೆಗಳಲ್ಲಿ ವಾಸಿಸುತ್ತಿದ್ದಾರೆ.