ಗಗನಕ್ಕೇರಿದ ಈರುಳ್ಳಿ ಬೆಲೆ ; ದಿಡೀರ್ ಹೆಚ್ಚಾಗಲು ಕಾರಣವೇನು?
ಪ್ರತಿ ವರ್ಷವೂ ಹಬ್ಬದ ಸೀಸನ್ ಸಮೀಪಿಸುತ್ತಿದ್ದಂತೆ ಈರುಳ್ಳಿ ಬೆಲೆಯಲ್ಲಿ ಏರಿಳಿತ ಕಂಡು ಬರುತ್ತದೆ. ಈ ವರ್ಷವೂ ಹಬ್ಬದ ಸೀಸನ್‌ಗೂ ಮುನ್ನ ಈರುಳ್ಳಿ ಬೆಲೆ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದೆ. ಇದು ಸಾಮಾನ್ಯ ಜನರಲ್ಲಿ ಆತಂಕಕ್ಕೆ ಕಾರಣವಾಗಿದೆ.
ಕಳೆದ ಹದಿನೈದು ದಿನಗಳಲ್ಲಿ, ಈರುಳ್ಳಿಯ ಅತ್ಯಂತ ಹೆಚ್ಚಿನ ಬೆಲೆಯನ್ನು ನೋಡಿ ಭಾರತದಾದ್ಯಂತದ ಜನರು ಆತಂಕಕ್ಕೆ ಒಳಗಾಗಿದ್ದಾರೆ. ಕೆಲ ತಿಂಗಳ ಹಿಂದೆ ಈರುಳ್ಳಿ ಬೆಲೆ ಕೆಜಿಗೆ 5- 10 ರೂಪಾಯಿ ಆಗಿತ್ತು. ಆದರೆ ಈಗ ಬೆಲೆಯು 100 ರೂಪಾಯಿಗೆ ಸಮೀಪಿಸಿದೆ. ಆದರೆ ಈ ಬೆಲೆ ಏರಿಕೆಗೆ ಕಾರಣವೇನು ತಿಳಿದಿದೆಯೇ?, ಇಲ್ಲಿದೆ ವಿವರ ಮುಂದೆ ಓದಿ…
ಈರುಳ್ಳಿ ಏಕೆ ದುಬಾರಿಯಾಗುತ್ತಿದೆ?
ಈರುಳ್ಳಿ ಬೆಲೆ ಏರಿಕೆಗೆ ಕೇವಲ ಒಂದು ಅಂಶವು ಪರಿಣಾಮ ಬೀರಿರುವುದು ಅಲ್ಲ. ಹಲವಾರು ಅಂಶಗಳು ನಾವು ದಿನ ನಿತ್ಯ ಬಳಕೆ ಮಾಡುವ ಈ ಆಹಾರ ಪದಾರ್ಥದ ಬೆಲೆಯನ್ನು ಹೆಚ್ಚಿಸಿದೆ. ಅತೀ ಪ್ರಮುಖವಾದ ಕಾರಣಗಳಲ್ಲಿ, ಬೇಡಿಕೆ ಹಾಗೂ ಸರಬರಾಜಿನ ನಡುವಿನ ಅಂತರ ಕಡಿಮೆಯಾಗಿರುವುದು, ಕೃಷಿ ವಿಳಂಬವಾಗಿದೆ.
ವರದಿ ಪ್ರಕಾರ ಮೊದಲ ಕಾರಣ ಬೇಡಿಕೆ ಮತ್ತು ಪೂರೈಕೆಯಲ್ಲಿನ ಅಂತರವಾಗಿದೆ. ಈರುಳ್ಳಿಯನ್ನು ಬೆಳೆಯುವ ಅನೇಕ ರೈತರು, ಹೆಚ್ಚಿನ ಹಣವನ್ನು ಗಳಿಸಲು ಬಯಸುವ ಕಾರಣದಿಂದ ಅವುಗಳನ್ನು ಅಂತರರಾಷ್ಟ್ರೀಯ ಮಾರುಕಟ್ಟೆಗೆ ಮಾರಾಟ ಮಾಡುತ್ತಿದ್ದಾರೆ. ಇದು ದೇಶದಲ್ಲಿ ಪೂರೈಕೆಯ ಕೊರತೆಯನ್ನು ಉಂಟುಮಾಡಿದೆ.
ಸ್ವದೇಶಿ ಈರುಳ್ಳಿಯ ಅಂತರರಾಷ್ಟ್ರೀಯ ಮಾರಾಟವನ್ನು ನಿಯಂತ್ರಿಸಲು, ಸರ್ಕಾರವು ಶೇಕಡ 40 ರಷ್ಟು ರಫ್ತು ತೆರಿಗೆಯನ್ನು ಪರಿಚಯಿಸಿದೆ. ಅದು ಈ ಹಿಂದೆ ಶೂನ್ಯವಾಗಿತ್ತು. ಈರುಳ್ಳಿ ರಫ್ತಿಗೆ ಕನಿಷ್ಠ ರಫ್ತು ಬೆಲೆಯನ್ನು (ಎಂಇಪಿ) ಪ್ರತಿ ಟನ್‌ಗೆ 66.730 ರೂಪಾಯಿ ನಿಗದಿಪಡಿಸಲಾಗಿದೆ. ಡಿಸೆಂಬರ್ 31ರವರೆಗೆ ಯಾವುದೇ ವ್ಯಾಪಾರಿ ಇದಕ್ಕಿಂತ ಕಡಿಮೆ ಬೆಲೆಗೆ ಈರುಳ್ಳಿ ರಫ್ತು ಮಾಡುವಂತಿಲ್ಲ.
ಈರುಳ್ಳಿ ಬೆಲೆ ಏರಿಕೆ: ಕಾರಣ
ಈರುಳ್ಳಿ ಬೆಲೆ ಏರಿಕೆಗೆ ಎರಡನೆ ಪ್ರಮುಖ ಕಾರಣವೆಂದರೆ ಕೃಷಿಯಲ್ಲಿನ ವಿಳಂಬವಾಗಿದೆ. ಹಿರಿಯ ಸರ್ಕಾರಿ ಅಧಿಕಾರಿಯೊಬ್ಬರು ನೀಡಿರುವ ಮಾಹಿತಿ ಪ್ರಕಾರ ಪ್ರತಿಕೂಲ ಹವಾಮಾನದ ಕಾರಣ ಖಾರಿಫ್ ಈರುಳ್ಳಿ ಬಿತ್ತನೆಯಲ್ಲಿ ವಿಳಂಬವಾಗಿದೆ. “ಬಿತ್ತನೆ ವಿಳಂಬವಾದ ಕಾರಣ ಬೆಳೆ ತಡವಾಯಿತು. ಇದು ದೇಶದಲ್ಲಿ ಈರುಳ್ಳಿ ಬೆಲೆ ಏರಿಕೆಗೆ ಪ್ರಮುಖ ಕಾರಣ,” ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸರ್ಕಾರ ಏನು ಮಾಡುತ್ತಿದೆ?
ಗ್ರಾಹಕ ವ್ಯವಹಾರಗಳ ಕಾರ್ಯದರ್ಶಿ ರೋಹಿತ್ ಕುಮಾರ್ ಸಿಂಗ್ ಆಗಸ್ಟ್ ಮಧ್ಯದಿಂದ, ಬಫರ್ ಈರುಳ್ಳಿಯನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದೆ ಮತ್ತು ಮತ್ತಷ್ಟು ಬೆಲೆ ಏರಿಕೆಯನ್ನು ತಡೆಯಲು ಸರ್ಕಾರವು ಅವುಗಳ ರಿಟೇಲ್ ವಿತರಣೆಯನ್ನು ಹೆಚ್ಚಿಸುತ್ತಿದೆ ಎಂದು ಹೇಳಿದರು.
ಬಫರ್ ಈರುಳ್ಳಿಯನ್ನು ರಾಷ್ಟ್ರೀಯ ಸಹಕಾರಿ ಗ್ರಾಹಕರ ಒಕ್ಕೂಟ (ಎನ್‌ಸಿಸಿಎಫ್) ಮತ್ತು ನ್ಯಾಷನಲ್ ಅಗ್ರಿಕಲ್ಚರಲ್ ಕೋಆಪರೇಟಿವ್ ಮಾರ್ಕೆಟಿಂಗ್ ಫೆಡರೇಶನ್ ಆಫ್ ಇಂಡಿಯಾ ಲಿಮಿಟೆಡ್ (ಎನ್‌ಎಎಫ್‌ಇಡಿ) ಮೂಲಕ ಕೆಜಿಗೆ ಕೇವಲ 25 ರೂಪಾಯಿಗೆ ಲಭ್ಯವಾಗುವಂತೆ ಮಾಡಲಾಗುತ್ತಿದೆ. ಈ ಹಣಕಾಸು ವರ್ಷದಲ್ಲಿ, ಗ್ರಾಹಕ ವ್ಯವಹಾರಗಳ ಸಚಿವಾಲಯವು 5 ಲಕ್ಷ ಟನ್‌ಗಳ ಬಫರ್ ಈರುಳ್ಳಿ ದಾಸ್ತಾನು ನಿರ್ವಹಿಸುತ್ತಿದೆ. ಮುಂದಿನ ದಿನಗಳಲ್ಲಿ ಹೆಚ್ಚುವರಿಯಾಗಿ 2 ಲಕ್ಷ ಟನ್ ಈರುಳ್ಳಿಯನ್ನು ಸಂಗ್ರಹಿಸಲು ಉದ್ದೇಶಿಸಿದೆ.