ಓಣಂ ಹಬ್ಬಕ್ಕೆಂದು ಊರಿಗೆ ಬಂದಿದ್ದ ಮೂವರು ಸಹೋದರಿಯರು ತಂದೆ ಎದುರೇ ದುರಂತ ಸಾವು!
ಪಲಕ್ಕಾಡ್: ಓಣಂ ಹಬ್ಬದ ಸಂಭ್ರಮಾಚರಣೆಗೆಂದು ಊರಿಗೆ ಬಂದಿದ್ದ ಮೂವರು ಸಹೋದರಿಯರು ತಂದೆಯೇ ಮುಂದೆಯೇ ದುರಂತ ಸಾವಿಗೀಡಾದ ಹೃದಯ ವಿದ್ರಾವಕ ಘಟನೆ ಕೇರಳದ ಪಲಕ್ಕಾಡ್ ಜಿಲ್ಲೆಯಲ್ಲಿ ನಡೆದಿದೆ.
ಮೃತರನ್ನು ನಶಿದಾ (26) ರಮ್ಶಿನಾ (23) ಮತ್ತು ರಿನ್ಶಿ (18) ಎಂದು ಗುರುತಿಸಲಾಗಿದೆ. ಇವರು ಪಲಕ್ಕಾಡ್ ಜಿಲ್ಲೆಯ ಮನ್ನಾರ್ಕಾಡು ತಾಲೂಕಿನ ಕೊಟ್ಟೊಪ್ಪಡಂ ಮೂಲದ ನಿವಾಸಿಗಳು. ಕಣ್ಣ ಮುಂದೆಯೇ ಮೂವರು ಮಕ್ಕಳು ನೀರು ಪಾಲಾಗಿದ್ದು, ತಂದೆಯನ್ನು ಭಾರೀ ಆಘಾತಕ್ಕೆ ದೂಡಿದೆ.
ಮದುವೆಯಾದ ರಮ್ಶಿನಾ ಮತ್ತು ನಶಿದಾ ಓಣಂ ಹಬ್ಬದ ಹಿನ್ನೆಲೆಯಲ್ಲಿ ತವರು ಮನೆಗೆ ಬಂದಿದ್ದರು. ಅವರ ಸಹೋದರ ಮೂತ್ರಪಿಂಡ ಕಸಿ ಶಸ್ತ್ರಚಿಕಿತ್ಸೆಯ ನಂತರ ಹಾಸಿಗೆ ಹಿಡಿದಿದ್ದಾರೆ. ಮೂತ್ರಪಿಂಡದ ದಾನಿಯಾಗಿರುವ ಅವರ ತಾಯಿಯೂ ಸಹ ಹಾಸಿಗೆ ಹಿಡಿದಿದ್ದಾರೆ. ಇಬ್ಬರಿಗೂ ಚಿಕಿತ್ಸೆ ಮುಂದುವರಿದಿರುವುದರಿಂದ ತಂದೆಯೇ ಮನೆಯ ಎಲ್ಲ ಕೆಲಸಗಳನ್ನು ನೋಡಿಕೊಳ್ಳುತ್ತಿದ್ದರು. ತಂದೆಯೊಂದಿಗೆ ಮೂವರು ಹೆಣ್ಣುಮಕ್ಕಳು ಸ್ನಾನಕ್ಕೆ ಮತ್ತು ಬಟ್ಟೆ ಒಗೆಯಲೆಂದು ಭೀಮನಾಡಿನ ಹೊಂಡಕ್ಕೆ ತೆರಳಿದ್ದರು.
ಈ ವೇಳೆ ಸಹೋದರಿಯೊಬ್ಬಳು ಆಕಸ್ಮಿಕವಾಗಿ ಕೆರೆಗೆ ಜಾರಿ ಬಿದ್ದಿದ್ದಾಳೆ. ಅಲ್ಲಿಯೇ ಇದ್ದ ಇನ್ನಿಬ್ಬರು ಸಹೋದರಿಯರು ಆಕೆಯನ್ನು ಉಳಿಸಲೆಂದು ಕೆರೆಗೆ ಹಾರಿದರು. ಆದರೆ ಪ್ರಯತ್ನ ವ್ಯರ್ಥವಾಯಿತು. ಮೂವರು ಸಹ ಕೆರೆಯಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಕಣ್ಣೆದುರಲ್ಲೇ ಮೂವರು ಮಕ್ಕಳು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದನ್ನು ಕಂಡು ಬೆಚ್ಚಿಬಿದ್ದ ತಂದೆ ಆ ಬಗ್ಗೆ ಮಾತನಾಡಲು ಕಷ್ಟಪಟ್ಟರು.
ತನ್ನ ಮಕ್ಕಳನ್ನು ರಕ್ಷಿಸಲು ತಂದೆಯ ಹತಾಶ ಪ್ರಯತ್ನವನ್ನು ನೋಡಿ, ಹತ್ತಿರದಲ್ಲಿದ್ದ ವಲಸೆ ಕಾರ್ಮಿಕರು, ಸ್ಥಳೀಯರಿಗೆ ಮಾಹಿತಿ ನೀಡಿದರು. ಅಷ್ಟೊತ್ತಿಗಾಗಲೇ ತಡವಾಗಿತ್ತು. ನಿರ್ಜನ ಪ್ರದೇಶವಾಗಿದ್ದರಿಂದ ರಕ್ಷಣೆಯೂ ವಿಳಂಬವಾಯಿತು. ಸ್ಥಳೀಯರು ಮೂವರು ಸಹೋದರಿಯರನ್ನು ಹೊರತೆಗೆದು ಮನ್ನಾರ್ಕಾಡು ಖಾಸಗಿ ಆಸ್ಪತ್ರೆಗೆ ಕರೆದೊಯ್ದರೂ ಪ್ರಾಣ ಉಳಿಸಲಾಗಲಿಲ್ಲ. ಮರಣೋತ್ತರ ಪರೀಕ್ಷೆ ಬಳಿಕ ಮೃತದೇಹವನ್ನು ಸಂಬಂಧಿಕರಿಗೆ ಹಸ್ತಾಂತರಿಸಲಾಗಿದೆ.
ಭೀಕರ ಅಗ್ನಿ ಅವಘಡ: ಇಬ್ಬರು ಮಕ್ಕಳು ಸೇರಿ ತಾಯಿಯೂ ಸುಟ್ಟುಕರಕಲು..
ರಾಂಬನ್: ತಡರಾತ್ರಿ ಸಂಭವಿಸಿದ ಅಗ್ನಿ ಅವಘಡದಲ್ಲಿ ಮಹಿಳೆ ಮತ್ತು ಆಕೆಯ ಇಬ್ಬರು ಪುತ್ರಿಯರು ಸುಟ್ಟು ಕರಕಲಾದ ಘಟನೆ ಜಮ್ಮು ಮತ್ತು ಕಾಶ್ಮೀರದ ರಾಂಬನ್ ಜಿಲ್ಲೆಯ ಬಿಂಗಾರಾ ಗ್ರಾಮದಲ್ಲಿ ನಡೆದಿದೆ.
ಘಟನೆಯಲ್ಲಿ ನಜ್ಮಾ ಬೇಗಂ ಮತ್ತು ಆಕೆಯ ಇಬ್ಬರು ಪುತ್ರಿಯರಾದ ಇಕ್ರಾ ಮತ್ತು ಅಸ್ಮಾ ಸ್ಥಳದಲ್ಲೇ ಮೃತಪಟ್ಟರೆ, ಆಕೆಯ ಪತಿ ಇಬ್ರಾಹಿಂ ಮತ್ತು ಮಿರ್ಜಾ ಬೇಗಂ ಗಾಯಗೊಂಡಿದ್ದಾರೆ. ಧೋಕ್‌ನಲ್ಲಿ ಮೂರು ತಾತ್ಕಾಲಿಕ ಗುಡಿಸಲುಗಳು ಬೆಂಕಿಗೆ ಆಹುತಿಯಾಗಿದ್ದು, ಬೆಂಕಿಗೆ ಕಾರಣ ಇನ್ನೂ ತಿಳಿದುಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಜಾನುವಾರುಗಳನ್ನು ಮೇಯಿಸಲು, ಸ್ಥಳೀಯ ಜನರು ಧೋಕ್ ಎಂದು ಕರೆಯಲ್ಪಡುವ ಪರ್ವತಗಳ ಮೇಲೆ ತಾತ್ಕಾಲಿಕ ಮನೆಗಳನ್ನು ನಿರ್ಮಿಸಿ ಇಲ್ಲಿಯೇ ವಾಸಿಸುತ್ತಾರೆ.ಈ ಘಟನೆಯಲ್ಲಿ ಐದು ಗುಡಿಸಲುಗಳು ಧ್ವಂಸವಾಗಿದ್ದು, ಜೀವಹಾನಿಯ ಬಗ್ಗೆ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ದುಃಖ ವ್ಯಕ್ತಪಡಿಸಿದ್ದಾರೆ.
ರಾಂಬನ್‌ನ ಬಿಂಗಾರಾ ಗ್ರಾಮದಲ್ಲಿ ನಡೆದ ಅಗ್ನಿ ದುರಂತದಲ್ಲಿ ಅಮೂಲ್ಯ ಜೀವಗಳನ್ನು ಕಳೆದುಕೊಂಡಿದ್ದರಿಂದ ತೀವ್ರ ದುಃಖವಾಗಿದೆ. ದುಃಖತಪ್ತ ಕುಟುಂಬಕ್ಕೆ ನನ್ನ ಹೃತ್ಪೂರ್ವಕ ಸಂತಾಪ ಮತ್ತು ಗಾಯಾಳುಗಳು ಶೀಘ್ರ ಚೇತರಿಸಿಕೊಳ್ಳಲು ಪ್ರಾರ್ಥಿಸುತ್ತೇನೆ. ಸಾಧ್ಯವಿರುವ ಎಲ್ಲ ನೆರವು ನೀಡುವಂತೆ ಜಿಲ್ಲಾಡಳಿತಕ್ಕೆ ಸೂಚಿಸಲಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.