Olympics: ಫೈನಲ್‌ನಿಂದ ವಿನೇಶ್ ಫೋಗಟ್ ಅನರ್ಹ; ಚಿನ್ನದ ಕನಸು ನುಚ್ಚುನೂರು
Olympics: ಭಾರತಕ್ಕೆ ಮಹಿಳೆಯರ ಕುಸ್ತಿ ವಿಭಾಗದಲ್ಲಿ ಚಿನ್ನದ ಪದಕ ಸಿಗುತ್ತದೆ ಎಂದು ಕನಸು ಕಾಣುತ್ತಿದ್ದ ಕೋಟ್ಯಂತರ ಜನರ ಆಸೆ ನುಚ್ಚುನೂರಾಗಿದೆ. ಪ್ಯಾರಿಸ್ ಒಲಿಂಪಿಕ್ಸ್ (Olympics) ನಲ್ಲಿ ಫೈನಲ್ ಪ್ರವೇಶಿಸಿದ್ದ ಕುಸ್ತಿಪಟು ವಿನೇಶ್ ಫೋಗಟ್ ಅಧಿಕ ತೂಕದ ಕಾರಣಕ್ಕಾಗಿ ಮಹಿಳೆಯರ 50 ಕೆಜಿ ಕುಸ್ತಿಯಿಂದ ಅನರ್ಹಗೊಂಡಿದ್ದಾರೆ.
ಮಹಿಳಾ ಕುಸ್ತಿ 50 ಕೆಜಿ ವಿಭಾಗದಿಂದ ವಿನೇಶ್ ಫೋಗಟ್ ಅವರನ್ನು ಅನರ್ಹಗೊಳಿಸಿದ ಸುದ್ದಿಯನ್ನು ಭಾರತೀಯ ತಂಡವು ವಿಷಾದದಿಂದ ಹಂಚಿಕೊಂಡಿದೆ.
ರಾತ್ರಿಯಿಡೀ ತಂಡವು ಅತ್ಯುತ್ತಮ ಪ್ರಯತ್ನಗಳ ಹೊರತಾಗಿಯೂ, ಇಂದು ಬೆಳಗ್ಗೆ 50 ಕೆಜಿಗಿಂತ ಕೆಲವು ಗ್ರಾಂಗಳಷ್ಟು ಅಧಿಕ ತೂಕ ಹೊಂದಿದ್ದರು. ಈ ಸಂದರ್ಭದಲ್ಲಿ ಅವರ ಖಾಸಗಿತನವನ್ನು ಗೌರವಿಸಿ ಅವರ ಜೊತೆ ನಿಲ್ಲುತ್ತದೆ ಎಂದು ಭಾರತೀಯ ಒಲಿಂಪಿಕ್ಸ್ ಅಸೋಸಿಯೇಷನ್ ತಿಳಿಸಿದೆ.
ದೂರು ನೀಡಲು ಭಾರತ ನಿರ್ಧಾರ: ಕೇವಲ ಕೂದಲೆಳೆ ಅಂತರದಲ್ಲಿ ಫೈನಲ್ ಪಂದ್ಯ ಆಡುವುದರಿಂದ ವಿನೇಶ್ ಫೋಗಟ್ ಅವಕಾಶ ಕಳೆದುಕೊಂಡಿದ್ದು, ಅವರ ಅನರ್ಹತೆ ಪ್ರಶ್ನಿಸಿ ದೂರು ನೀಡಲು ಭಾರತ ಒಲಿಂಪಿಕ್ಸ್ ಅಸೋಸಿಯೇಷನ್ ನಿರ್ಧರಿಸಿದೆ.
ವಿನೇಶ್ ಫೋಗಟ್ಗೆ ಬಿಗ್ ಶಾಕ್
ಭಾರತೀಯ ಒಲಿಂಪಿಕ್ಸ್ ಸಂಸ್ಥೆ ಕೂಡ ವಿನೇಶ್ ಫೋಗಟ್ ಅನರ್ಹತೆಯನ್ನು ಖಚಿತಪಡಿಸಿದೆ. ವಿನೇಶ್ ಫೋಗಟ್ ಅವರು 50 ಕೆಜಿ ತೂಕ ವಿಭಾಗದಲ್ಲಿ ಸ್ಪರ್ಧಿಸಿದ್ದರು. ಆದರೆ ಅವರ ತೂಕ ನಿಗದಿತ ಮಿತಿಗಿಂತ ಹೆಚ್ಚಿರುವುದರಿಂದ ಅವರನ್ನು ಕುಸ್ತಿ ಪಂದ್ಯದಿಂದ ಅನರ್ಹಗೊಳಿಸಲಾಗಿದೆ. ವಿನೇಶ್ ಇಂದು ಮಧ್ಯಾಹ್ನ 12:45 ಕ್ಕೆ ಯುಎಸ್ಎ ಕುಸ್ತಿಪಟು ವಿರುದ್ಧ ಚಿನ್ನದ ಪದಕದ ಪಂದ್ಯವನ್ನು ಆಡಬೇಕಾಗಿತ್ತು. ಆದರೆ ನಿನ್ನೆ ನಡೆದ ತೂಕ ಪರೀಕ್ಷೆಯಲ್ಲಿ ವಿನೇಶ್ ಅವರ ತೂಕ ನಿಗದಿಗಿಂತ ಹೆಚ್ಚಿತ್ತು. ಹೀಗಾಗಿ ತಂಡವು ರಾತ್ರಿಯಿಡೀ ಅವರ ತೂಕವನ್ನು ಕಡಿಮೆ ಮಾಡಲು ಪ್ರಯತ್ನಿಸಿತು. ಆದರೆ ಇಂದು ಬೆಳಿಗ್ಗೆ ನಡೆದ ತೂಕ ಪರೀಕ್ಷೆಯಲ್ಲಿ ಅವರ ತೂಕವು 50 ಕೆಜಿಗಿಂತ ಸ್ವಲ್ಪ ಹೆಚ್ಚಿತ್ತು. ಹೀಗಾಗಿ ಅವರನ್ನು ಅನರ್ಹಗೊಳಿಸಲಾಗಿದೆ.
ವಿನೇಶ್‌ಗೆ ಯಾವುದೇ ಪದಕ ಸಿಗುವುದಿಲ್ಲ..!
ಫೈನಲ್ ಸ್ಪರ್ಧೆಗೂ ಮುನ್ನ ವಿನೇಶ್ ಫೋಗಟ್ ಅನರ್ಹಗೊಂಡಿರುವುದರಿಂದಾಗಿ ಇದೀಗ 50 ಕೆ.ಜಿ. ವಿಭಾಗದಲ್ಲಿ ಯಾವುದೇ ಕುಸ್ತಿಪಟು ಬೆಳ್ಳಿ ಪದಕ ಪಡೆಯಲು ಸಾಧ್ಯವಾಗುವುದಿಲ್ಲ. ಉಳಿದಂತೆ ಈ ವಿಭಾಗದಲ್ಲಿ ವಿನೇಶ್ ಅವರೊಂದಿಗೆ ಫೈನಲ್ನಲ್ಲಿ ಸ್ಪರ್ಧಿಸಬೇಕಿದ್ದ ಅಮೆರಿಕದ ಕುಸ್ತಿಪಟುಗೆ ಚಿನ್ನದ ಪದಕ ಸಿಗಲಿದೆ. ಆದರೆ ಚೊಚ್ಚಲ ಪದಕದ ನಿರೀಕ್ಷೆಯಲ್ಲಿದ್ದ ವಿನೇಶ್ ಅವರಿಗೆ ಯಾವುದೇ ಪದಕ ಸಿಗುವುದಿಲ್ಲ.
ವಾಸ್ತವವಾಗಿ ಈ ಹಿಂದೆ 53 ಕೆಜಿ ವಿಭಾಗದಲ್ಲಿ ಭಾಗವಹಿಸುತ್ತಿದ್ದ ವಿನೇಶ್, 50 ಕೆಜಿ ವಿಭಾಗದಲ್ಲಿ ಅರ್ಹತೆ ಪಡೆಯಲು ಅಧಿಕ ತೂಕದ ಸಮಸ್ಯೆ ಎದುರಿಸುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ, ಅವರು ಒಲಿಂಪಿಕ್ ಅರ್ಹತಾ ಪಂದ್ಯಗಳಲ್ಲಿಯೂ ಇದೇ ರೀತಿಯ ಸಮಸ್ಯೆಯನ್ನು ಎದುರಿಸಬೇಕಾಯಿತು. ಆದರೆ ಅತ್ಯಂತ ಕಡಿಮೆ ಅಂತರದಿಂದ ಒಲಿಂಪಿಕ್ಸ್ ಅರ್ಹತಾ ಸುತ್ತಿಗೆ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು.
ವಿನೇಶ್‌ಗೆ ಸಮಾಧಾನ ಹೇಳಿದ ಮೋದಿ:
ನೀವು ಚಾಂಪಿಯನ್‌ಗಳಲ್ಲಿ ಚಾಂಪಿಯನ್ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಕುಸ್ತಿಪಟು ವಿನೇಶ್ ಫೋಗಟ್ (Vinesh Phogat) ಅವರಿಗೆ ಸಮಾಧಾನ ಹೇಳಿದ್ದಾರೆ. ಮಹಿಳೆಯರ 50 ಕೆಜಿ ಕುಸ್ತಿ ಫ್ರೀಸ್ಟೈಲ್ ವಿಭಾಗದ ಫೈನಲ್ ಸ್ಪರ್ಧೆಯಿಂದ ವಿನೇಶ್ ಫೋಗಟ್ ಅನರ್ಹತೆಗೊಂಡ ಬೆನ್ನಲ್ಲೇ ಮೋದಿ ಅವರು ಎಕ್ಸ್‌ನಲ್ಲಿ ಸಮಾಧಾನ ಹೇಳಿ ಬೆಂಬಲ ವ್ಯಕ್ತಪಡಿಸಿದ್ದಾರೆ.
ಪ್ರಧಾನಿ ಮೋದಿ ಅವರು ಭಾರತೀಯ ಒಲಿಂಪಿಕ್ ಅಸೋಸಿಯೇಷನ್ (ಐಒಎ) ಅಧ್ಯಕ್ಷೆ ಪಿಟಿ ಉಷಾ ಅವರ ಜೊತೆ ದೂರವಾಣಿ ಕರೆ ಮಾಡಿ ಈ ಬಗ್ಗೆ ಮಾತನಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ವಿನೇಶ್, ನೀವು ಚಾಂಪಿಯನ್‌ಗಳಲ್ಲಿ ಚಾಂಪಿಯನ್! ನೀವು ಭಾರತದ ಹೆಮ್ಮೆ ಮತ್ತು ಪ್ರತಿಯೊಬ್ಬ ಭಾರತೀಯರಿಗೂ ಸ್ಫೂರ್ತಿ. ಇಂದಿನ ಹಿನ್ನಡೆ ನೋವು ತಂದಿದೆ. ಪದಗಳು ನಾನು ಅನುಭವಿಸುತ್ತಿರುವ ಹತಾಶೆಯ ಅರ್ಥವನ್ನು ವ್ಯಕ್ತಪಡಿಸಬಹುದು ಎಂದು ನಾನು ಬಯಸುತ್ತೇನೆ. ಸವಾಲುಗಳನ್ನು ಎದುರಿಸುವುದು ಯಾವಾಗಲೂ ನಿಮ್ಮ ಸ್ವಭಾವವಾಗಿದೆ. ಮತ್ತೆ ಶಕ್ತಿಶಾಲಿಯಾಗಿ ಮರಳಿ ಬನ್ನಿ. ನಾವು ನಿಮ್ಮ ಜೊತೆ ಇದ್ದೇವೆ. ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಕುಸ್ತಿಪಟು ವಿನೇಶ್ ಫೋಗಟ್ (Vinesh Phogat) ಅವರಿಗೆ ಸಮಾಧಾನ ಹೇಳಿದ್ದಾರೆ.
ತೂಕ ಇಳಿಸಲು ವಿನೇಶ್ ಹೋರಾಟ ಹೇಗಿತ್ತು?
ಮಾಹಿತಿಯ ಪ್ರಕಾರ, ಮಂಗಳವಾರ ರಾತ್ರಿ ಪರೀಕ್ಷಿಸಿದಾಗ ವಿನೇಶ್ ಫೋಗಟ್ ಅವರ ತೂಕ 2 ಕೆಜಿ ಹೆಚ್ಚಿತ್ತು. ಹೀಗಾಗಿ ಈ ತೂಕವನ್ನು ಕಡಿಮೆ ಮಾಡಲು ವಿನೇಶ್ ಇಡೀ ರಾತ್ರಿ ನಿದ್ರೆ ಮಾಡದೆ ಶ್ರಮಿಸಿದ್ದಾರೆ. ವರದಿ ಪ್ರಕಾರ, ಸೆಮಿ-ಫೈನಲ್ ಪಂದ್ಯವನ್ನು ಗೆದ್ದಾಗ ವಿನೇಶ್ ಅವರ ತೂಕ 52 ಕೆಜಿ ಇತ್ತು. ನಂತರ ತನ್ನ ತೂಕವನ್ನು 2 ಕೆಜಿಯಷ್ಟು ಕಡಿಮೆ ಮಾಡಲು ವಿನೇಶ್ ಇಡೀ ರಾತ್ರಿ ಶ್ರಮಿಸಿದ್ದಾರೆ.
ಮಾಧ್ಯಮ ವರದಿಗಳ ಪ್ರಕಾರ, ಸೆಮಿಫೈನಲ್‌ನಲ್ಲಿ ಗೆದ್ದ ನಂತರ ವಿನೇಶ್ ಫೋಗಟ್ ವಿಶ್ರಾಂತಿ ಪಡೆದಿಲ್ಲ. ರಾತ್ರಿಯಿಡೀ ಎಚ್ಚರದಿಂದಿದ್ದ ಅವರು ತನ್ನ ಹೆಚ್ಚುವರಿ ತೂಕವನ್ನು ಕಡಿಮೆ ಮಾಡಲು ಪ್ರಯತ್ನಿಸಿದ್ದಾರೆ. ಸ್ಪೋರ್ಟ್ಸ್ ಸ್ಟಾರ್ ವರದಿ ಪ್ರಕಾರ, ವಿನೇಶ್ ಫೋಗಟ್ ತೂಕ ಇಳಿಸಿಕೊಳ್ಳಲು ಸೈಕ್ಲಿಂಗ್, ಸ್ಕಿಪ್ಪಿಂಗ್ ಮೊರೆ ಹೋಗಿದ್ದಾರೆ.
ಅಷ್ಟೇ ಅಲ್ಲ, ತೂಕ ಇಳಿಸುವ ಸಲುವಾಗಿ ವಿನೇಶ್ ತನ್ನ ತಲೆ ಕೂದಲು ಮತ್ತು ಉಗುರುಗಳನ್ನು ಸಹ ಕತ್ತರಿಸಿದ್ದಾರೆ. ಇದು ಸಾಲದೆಂಬಂತೆ ತನ್ನ ದೇಹದ ರಕ್ತವನ್ನು ಸಹ ಹೊರತೆಗೆಸಿದ್ದಾರೆ. ಇದರಿಂದಾಗಿ ಅವರ ಕೇವಲ 1 ರಾತ್ರಿಯಲ್ಲಿ 1 ಕೆಜಿ. 850 ಗ್ರಾಂ ತೂಕವನ್ನು ಕಡಿಮೆ ಮಾಡಿದ್ದಾರೆ. ಆದರೆ ನಿಗದಿತ ತೂಕಕ್ಕಿಂತ ಕೇವಲ 150 ಗ್ರಾಂ ಹೆಚ್ಚಿದ್ದರಿಂದ ಅವರನ್ನು ಅನರ್ಹಗೊಳಿಸಲಾಗಿದೆ.
ಕುಸ್ತಿಯಲ್ಲಿ, ಯಾವುದೇ ಕುಸ್ತಿಪಟುವಿಗೆ ಕೇವಲ 100 ಗ್ರಾಂ ಹೆಚ್ಚುವರಿ ತೂಕದ ಭತ್ಯೆಯನ್ನು ನೀಡಲಾಗುತ್ತದೆ. ಅರ್ಥಾತ್, ವಿನೇಶ್ 50 ಕೆಜಿ, 100 ಗ್ರಾಂ ತೂಕ ಹೊಂದಿದ್ದರೆ, ಅವರು ಚಿನ್ನದ ಪದಕದ ಪಂದ್ಯವನ್ನು ಆಡಲು ಸಾಧ್ಯವಾಗುತ್ತಿತ್ತು.
ಆದರೆ ಅವಳ ತೂಕ 50 ಗ್ರಾಂ ಹೆಚ್ಚಿದ್ದರಿಂದಾಗಿ ಅವಳ ಒಲಿಂಪಿಕ್ ಪದಕ ಗೆಲ್ಲುವ ಕನಸು ಭಗ್ನಗೊಂಡಿದೆ. ಕುಸ್ತಿಯಲ್ಲಿ, ಪಂದ್ಯಗಳ ಮೊದಲು ಕುಸ್ತಿಪಟುಗಳನ್ನು ತೂಕ ಮಾಡಲಾಗುತ್ತದೆ. ಇದಲ್ಲದೇ 2 ದಿನಗಳ ಕಾಲ ಇದೇ ವಿಭಾಗದಲ್ಲಿ ಕುಸ್ತಿಪಟು ತನ್ನ ತೂಕವನ್ನು ಕಾಯ್ದುಕೊಳ್ಳಬೇಕಾಗಿದ್ದರೂ ವಿನೇಶ್‌ಗೆ ಸಾಧ್ಯವಾಗಲಿಲ್ಲ.
ಇದೀಗ ಫೋಗಾಟ್ ಅನರ್ಹರಾಗಿರುವುದರಿಂದ ಅವರಿಗೆ ಬೆಳ್ಳಿ ಪದಕವೂ ಸಿಗುವುದಿಲ್ಲ. ಹೀಗಾಗಿ 50 ಕೆಜಿ ವಿಭಾಗದಲ್ಲಿ ಚಿನ್ನ ಮತ್ತು ಕಂಚಿನ ಪದಕ ನೀಡಲಾಗುತ್ತದೆ. ಅಂದರೆ ಅಮೆರಿಕದ ಕುಸ್ತಿಪಟು ಸಾರಾ ಹಿಲ್ಡೆಬ್ರಾಂಡ್ ಫೈನಲ್ ಪಂದ್ಯವನ್ನು ಆಡದೇ ಚಿನ್ನ ಪಡೆಯಲ್ಲಿದ್ದಾರೆ. ಆದರೆ ಕಂಚಿನ ಪದಕಕ್ಕಾಗಿ ಪಂದ್ಯ ನಡೆಯಲಿದೆ.