ಡಿಎಚ್‌ಒ ಕಚೇರಿಯಲ್ಲಿ ಎಣ್ಣೆ ಪಾರ್ಟಿ ; 7 ಜನ ಅಮಾನತು!
ಬೆಳಗಾವಿ: ನಗರದ ಟಿಳಕವಾಡಿಯ ವ್ಯಾಕ್ಸಿನ್ ಡಿಪೋ ಆವರಣದ ಜಿಲ್ಲಾ ಆರೋಗ್ಯಾಧಿಕಾರಿ ಕಾರ್ಯಾಲಯದ ಹಿಂದಿನ ಕಚೇರಿಯಲ್ಲೇ ಮದ್ಯದ ಪಾರ್ಟಿ ಮಾಡಿದ ಪ್ರಕರಣದಲ್ಲಿ 7 ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ.
ಡಿಎಚ್‌ಒ ಅವರ ಕಾರು ಚಾಲಕ ಮಂಜುನಾಥ ಪಾಟೀಲ, ಮಹೇಶ ಹಿರೇಮಠ, ರಮೇಶ ನಾಯಿಕ, ಸತ್ಯಪ್ಪ ತಮ್ಮನ್ನವರ, ಅನಿಲ ತಿಪ್ಪನ್ನವರ, ದೀಪಕ ಗಾವಡೆ, ಯಲ್ಲಪ್ಪ ಮುನ್ನವಳ್ಳಿ ಎಂಬ ನೌಕರರನ್ನು ಜಿಲ್ಲಾ ಆರೋಗ್ಯಾಧಿಕಾರಿ ಡಾ. ಮಹೇಶ ಕೋಣಿ ಅಮಾನತು ಮಾಡಿ ಬುಧವಾರ ಆದೇಶ ಹೊರಡಿಸಿದ್ದಾರೆ.
ಪಾರ್ಟಿ ಮಾಡಿರುವ ನೌಕರರಲ್ಲೇ ಒಬ್ಬರು ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಗಾಂಧಿ ಜಯಂತಿ ದಿನ ಕಚೇರಿಯಲ್ಲೇ ಗಾಂಧೀಜಿ ಭಾವಚಿತ್ರದ ಎದುರು ಕುಡಿದು ಕುಪ್ಪಳಿಸಿದ್ದಾರೆ. ಹಾಡು, ಡಾನ್ಸ್, ಹರಟೆ ಹೊಡೆದಿದ್ದಾರೆ. ಇದಕ್ಕೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ. ಗಾಂಧಿ ಜಯಂತಿ ದಿನ ಮದ್ಯ, ಮಾಂಸ ಮಾರಾಟ ನಿಷೇಧವಿರುತ್ತದೆ. ಆದರೆ, ಆರೋಗ್ಯ ಇಲಾಖೆ ಸಿಬ್ಬಂದಿ ಪಾರ್ಟಿ ಮಾಡಿರುವುದು ಆಕ್ರೋಶಕ್ಕೆ ಕಾರಣವಾಗಿದೆ.
ಇಲಾಖೆ ಕಚೇರಿಯಲ್ಲಿ ಏಳು ಜನ ಸಿಬ್ಬಂದಿ ಮದ್ಯ ಸೇವಿಸಿರುವುದು ಕಂಡುಬಂದಿದ್ದು, ಅವರನ್ನು ಅಮಾನತು ಮಾಡಲಾಗಿದೆ. ಆದರೆ, ಗಾಂಧಿ ಜಯಂತಿಗಿಂತ ಮೊದಲು ಈ ಪಾರ್ಟಿ ನಡೆದಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ಮಹೇಶ ಕೋಣಿ ತಿಳಿಸಿದ್ದಾರೆ.
ಗ್ಯಾರಂಟಿಗಳಿಂದ ಜನರಿಗೆ ಸಂಕಷ್ಟ
ರಾಯಬಾಗ: ಬಿಜೆಪಿ ಸರ್ಕಾರ ಬಡವರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಜಾರಿಗೆ ತಂದಿದ್ದ ಹಲವು ಯೋಜನೆಗಳನ್ನು ಕಾಂಗ್ರೆಸ್ ಸರ್ಕಾರ ಬಂದ್ ಮಾಡಿದೆ ಎಂದು ಶಾಸಕ ಡಿ.ಎಂ.ಐಹೊಳೆ ಆರೋಪಿಸಿದರು.
ತಾಲೂಕಿನ ಬಾವನಸವದತ್ತಿ ಗ್ರಾಮದಲ್ಲಿ ಕರ್ನಾಟಕ ಆದಿಜಾಂಬವ ಅಭಿವದ್ಧಿ ನಿಗಮದ ಸಮದ್ಧಿ ಯೋಜನೆಯಡಿ ಮಂಜೂರಾದ ಬಟ್ಟೆ ಅಂಗಡಿ ಉದ್ಘಾಟಿಸಿ ಮಾತನಾಡಿದ ಅವರು, ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳಿಂದ ರೈತರು ಮತ್ತು ಸಾರ್ವಜನಿಕರು ಕಷ್ಟ ಅನುಭವಿಸುವಂತಾಗಿದೆ. ಸರ್ಕಾರ ಸಮರ್ಪಕ ವಿದ್ಯುತ್ ನೀಡದ್ದರಿಂದ ಬೆಳೆಗಳು ಕಮರಿ ಹೋಗುತ್ತಿವೆ. ವಾರದಲ್ಲಿ ಸರಿಯಾಗಿ ವಿದ್ಯುತ್ ನೀಡದಿದ್ದಲ್ಲಿ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು.
ಓಂಕಾರ ಆಶ್ರಮದ ಶಿವಶಂಕರ ಸ್ವಾಮೀಜಿ, ನಿಗಮದ ಜಿಲ್ಲಾ ವ್ಯವಸ್ಥಾಪಕ ನಿರ್ದೇಶಕ ಬಸವರಾಜ ಚಣ್ಣನವರ, ಗ್ರಾಪಂ ಅಧ್ಯಕ್ಷ ರಾಮಚಂದ್ರ ಕಾಟೆ, ಅನಿಲ ಹಂಜೆ, ಮಹಾವೀರ ಪಾಟೀಲ, ಅಜಿತ ಖೇಮಲಾಪುರೆ, ಸದಾಶಿವ ಘೋರ್ಪಡೆ, ಮಹೇಶ ಕರಮಡಿ, ಸತ್ಯಪ್ಪ ಭೀಷ್ಟೆ, ಭೈರು ಚೌಗಲೆ, ಅಜಿತ ಕುಂಬಾರ, ದೇವೇಂದ್ರ ಗಾಂಜೆ ಇತರರಿದ್ದರು.