ದೇವರ ಅವತಾರ ತಾಳಿದ ಜೂ. ಎನ್‌ಟಿಆರ್; ಬರ್ತ್‌ಡೇ ಪ್ರಯುಕ್ತ ರಿವೀಲ್ ಆಯ್ತು ಸಿನಿಮಾ ಶೀರ್ಷಿಕೆ
ಯಂಗ್ ಟೈಗರ್ ಜೂ. ಎನ್‌ಟಿಆರ್ (Jr NTR) ಅಭಿಮಾನಿಗಳು ಕಾತರದಿಂದ ನೋಡುತ್ತಿರುವ ಸಮಯ ಬಂದಿದೆ. ಕೊನೆಗೂ ತಾರಕ್ -ಕೊರಟಾಲ ಶಿವ (Koratala Shiva) ಕಾಂಬಿನೇಷನ್ ನಲ್ಲಿ ತಯಾರಾಗುತ್ತಿರುವ ಚಿತ್ರಕ್ಕೆ ಟೈಟಲ್ ಫೈನಲ್ ಆಗಿದೆ. ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಕೂಡ ಬಿಡುಗಡೆಯಾಗಿದೆ. ಎಲ್ಲರ ನಿರೀಕ್ಷೆಯಂತೆ #NTR30 ಚಿತ್ರಕ್ಕೆ “ದೇವರ” (Devara) ಎಂಬ ಟೈಟಲ್ ಇಡಲಾಗಿದೆ. ಅಂದಹಾಗೆ ಈ ಚಿತ್ರದಲ್ಲಿ ಜೂ. ಎನ್‌ಟಿಆರ್‌ಗೆ ನಾಯಕಿಯಾಗಿ ಜಾನ್ವಿ ಕಪೂರ್ ನಟಿಸುತ್ತಿದ್ದಾರೆ. ಬಾಲಿವುಡ್ ನಟ ಸೈಫ್ ಅಲಿಖಾನ್ ಈ ಚಿತ್ರದಲ್ಲಿ ಖಳನಟನಾಗಿ ಕಾಣಿಸಿಕೊಳ್ಳಲಿದ್ದಾರೆ.
ಇಂದು (ಮೇ 20) ಎನ್‌ಟಿಆರ್ 40ನೇ ವಸಂತಕ್ಕೆ ಕಾಲಿರಿಸಿದ್ದಾರೆ. ಈ ವಿಶೇಷ ಸಂದರ್ಭದಲ್ಲಿ ಚಿತ್ರತಂಡದ ವತಿಯಿಂದ ದೇವರ ಚಿತ್ರದ ಲುಕ್ ಬಿಡುಗಡೆ ಮಾಡಲಾಗಿದೆ. ಚಿತ್ರದ ಫಸ್ಟ್ ಲುಕ್ ಪೋಸ್ಟರ್‌ನಲ್ಲಿ ಜೂ. ಎನ್‌ಟಿಆರ್ ರಗಡ್ ಅವತಾರದಲ್ಲಿ ಕಾಣಿಸಿಕೊಂಡಿದ್ದು, ಅಭಿಮಾನಿ ವಲಯದಲ್ಲಿ ಸಂಭ್ರಮ ಮನೆ ಮಾಡಿದೆ.
ಪೋಸ್ಟರ್‌ನಲ್ಲಿ ಕಪ್ಪು ವರ್ಣದ ಲುಂಗಿ ಧರಿಸಿ, ಕೈಯಲ್ಲಿ ಆಯುಧ ಹಿಡಿದು, ಖಡಕ್ ಲುಕ್‌ನಲ್ಲಿ ಎದುರಾಗಿದ್ದಾರೆ ತಾರಕ್. ಇತ್ತ ಸಮುದ್ರದ ಅಲೆಗಳು ತೀರವನ್ನು ತೊಳೆಯುತ್ತಿದ್ದರೆ, ಮತ್ತೊಂದೆಡೆ ಅದೇ ತೀರಕ್ಕೆ ದುಷ್ಟರ ನೆತ್ತರು ಸೇರುತ್ತಿದೆ. ಹೀಗೆ ಹಲವು ಕೌತುಕಗಳಿಂದ ಪೋಸ್ಟರ್ ಮತ್ತಷ್ಟು ಮಗದಷ್ಟು ಕುತೂಹಲ ಮೂಡಿಸುವಂತಿದೆ. ಪೋಸ್ಟರ್ ಹೀಗಿರುವಾಗ ಟೀಸರ್, ಟ್ರೇಲರ್ ಅದ್ಯಾವ ಮಟ್ಟದಲ್ಲಿ ಇರಬಹುದು ಎಂದು ಅವರ ಫ್ಯಾನ್ಸ್ ಈಗಿನಿಂದಲೇ ಊಹಿಸುತ್ತಿದ್ದಾರೆ.
ಎನ್‌ಟಿಆರ್ ಆರ್ಟ್ಸ್ ಮತ್ತು ಯುವಸುಧಾ ಆರ್ಟ್ಸ್ ಬ್ಯಾನರ್‌ನಲ್ಲಿ ಸುಧಾಕರ್ ಮಿಕ್ಕಿಲಿನೇನಿ, ಹರಿಕೃಷ್ಣ ಕೆ ಈ ಚಿತ್ರ ನಿರ್ಮಿಸುತ್ತಿದ್ದಾರೆ. ಕೊರಟಾಲ ಶಿವ ನಿರ್ದೇಶನದ ಈ ಚಿತ್ರಕ್ಕೆ ಅನಿರುದ್ಧ್ ಸಂಗೀತ ನೀಡಲಿದ್ದಾರೆ.
ಸಾಬು ಸಿರಿಲ್ ಕಲಾ ನಿರ್ದೇಶನ, ರತ್ನವೇಲು ಛಾಯಾಗ್ರಹಣ, ಶ್ರೀಕರ ಪ್ರಸಾದ್ ಸಂಕಲನವಿದೆ. ಶೀಘ್ರದಲ್ಲೇ ರೆಗ್ಯುಲರ್ ಶೂಟಿಂಗ್ ಶುರುವಾಗಲಿದೆ. ಮುಂದಿನ ವರ್ಷ ಏಪ್ರಿಲ್ 5 ರಂದು ಚಿತ್ರ ತೆರೆಗೆ ಬರಲಿದೆ. ತೆಲುಗು ಅಲ್ಲದೆ, ಹಿಂದಿ, ತಮಿಳು, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿಯೂ ಚಿತ್ರ ಬಿಡುಗಡೆಯಾಗಲಿದೆ.