ಸಲಿಂಗ ವಿವಾಹಕ್ಕೆ ಕಾನೂನು ಮಾನ್ಯತೆ ಇಲ್ಲ: ಮಹತ್ವದ ತೀರ್ಪು ಪ್ರಕಟಿಸಿದ ಸುಪ್ರೀಂ ಕೋರ್ಟ್
ನವದೆಹಲಿ: ಭಾರತದಲ್ಲಿ ಸಲಿಂಗ ವಿವಾಹಕ್ಕೆ ಕಾನೂನು ಮಾನ್ಯತೆ ನೀಡಬೇಕೆಂದು ಕೋರಿ ಸಲ್ಲಿಸಲಾದ ಅರ್ಜಿಗಳಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಇಂದು ಮಹತ್ವದ ತೀರ್ಪು ಪ್ರಕಟಿಸಿದ್ದು, ಸಲಿಂಗ ವಿವಾಹಕ್ಕೆ ಯಾವುದೇ ಕಾನೂನು ಮಾನ್ಯತೆ ಇಲ್ಲ. ಲೈಂಗಿಕ ದೃಷ್ಟಿಕೋನದ ಆಧಾರದ ಮೇಲೆ ಹಕ್ಕನ್ನು ನಿರ್ಬಂಧಿಸಲು ಸಾಧ್ಯವಿಲ್ಲ, ಎಂದು ಸುಪ್ರೀಂ ಕೋರ್ಟ್ ಹೇಳಿದೆ.
2018ರಲ್ಲಿ ಸಲಿಂಗ ವಿವಾಹವನ್ನು ಅಪರಾಧ ಎಂದು ಸುಪ್ರೀಂ ಕೋರ್ಟ್ ಪ್ರಕಟಿಸಿದ ತೀರ್ಪನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಲಾಗಿತ್ತು. ಇದಕ್ಕೂ ಮುನ್ನ ಮೇ ತಿಂಗಳಲ್ಲಿ 10 ದಿನಗಳ ಕಾಲ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯವು ವಾದ-ಪ್ರತಿವಾದವನ್ನು ಸುದೀರ್ಘವಾಗಿ ಆಲಿಸಿದ ನಂತರ ತೀರ್ಪನ್ನು ಕಾಯ್ದಿರಿಸಿತ್ತು. ಸಲಿಂಗ ವಿವಾಹಕ್ಕೆ ಕಾನೂನು ಮಾನ್ಯತೆ ನೀಡಬೇಕೆಂದು ಕೋರಿ ಸುಪ್ರೀಂ ಕೋರ್ಟ್ಗೆ 20 ಅರ್ಜಿಗಳು ಸಲ್ಲಿಕೆಯಾಗಿದ್ದು, ಇಂದು ತೀರ್ಪನ್ನು ಪ್ರಕಟಿಸಲಾಗಿದೆ.
ಅರ್ಜಿದಾರರ ವಾದವೇನು?
ವಿಚಾರಣೆ ಸಂದರ್ಭದಲ್ಲಿ ಅರ್ಜಿದಾರರು, ಭಾರತವು ವಿವಾಹ ಆಧರಿತ ಸಂಸ್ಕೃತಿಯಾಗಿದೆ, ಬೇರೆ ದಂಪತಿಗೆ ನೀಡಲಾಗುವ ಸ್ಥಾನಮಾನವನ್ನೇ ಸಲಿಂಗ ದಂಪತಿಗೆ ನೀಡಬೇಕು. ಆರ್ಥಿಕ, ಬ್ಯಾಂಕಿಂಗ್ ಹಾಗೂ ವಿಮಾ, ವೈದ್ಯಕೀಯ, ಪಿತ್ರಾರ್ಜಿತ, ದತ್ತು ಸ್ವೀಕಾರ ಮತ್ತು ಬಾಡಿಗೆ ತಾಯ್ತನದ ವಿಚಾರಗಳಲ್ಲೂ ಅಂಥದ್ದೇ ಅವಕಾಶ ನೀಡಬೇಕು ಎಂದು ಕೇಳಿದ್ದಾರೆ. ವಿಶೇಷ ವಿವಾಹದ ಅಡಿಯಲ್ಲಿ ಗುರುತಿಸಬೇಕು, ಮೂಲಭೂತ ಹಕ್ಕುಗಳಿಗೆ ಸಂಬಂಧಿಸಿದೆ, ಪ್ರಕರಣ ಸಾಂವಿಧಾನಿಕ ವ್ಯವಸ್ಥೆಗೆ ಸಂಬಂಧಿಸಿದ್ದಲ್ಲ ಎಂದು ಅರ್ಜಿದಾರರು ವಾದ ಮಂಡಿಸಿದ್ದರು.
ಸಲಿಂಗ ವಿವಾಹಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ಗೆ ಸಲ್ಲಿಸಲಾಗಿದ್ದ ಅರ್ಜಿಗಳ ವಿಚಾರಣೆ ನಡೆಸಿದ ಐವರು ನ್ಯಾಯಮೂರ್ತಿಗಳ ಸಾಂವಿಧಾನಿಕ ಪೀಠವು ನಾಲ್ಕು ಪ್ರತ್ಯೇಕ ತೀರ್ಪನ್ನು ನೀಡಿದೆ. ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್, ಸಂಜಯ್ ಕಿಶನ್ ಕೌಲ್, ಎಸ್. ರವೀಂದ್ರ ಭಟ್, ಹಿಮಾ ಕೊಹ್ಲಿ, ಪಿ.ಎಸ್. ನರಸಿಂಹ ತಮ್ಮ ಅನಿಸಿಕೆಗಳನ್ನು ಮಂಡಿಸಿದ್ದಾರೆ.
ನ್ಯಾಯಾಲಯ ಹೇಳಿದ್ದೇನು?
ಸಲಿಂಗ ವಿವಾಹಕ್ಕೆ ಒಪ್ಪಿಗೆ ನೀಡುತ್ತಿಲ್ಲ ಎಂಬ ಕಾರಣದಿಂದ ವಿಶೇಷ ವಿವಾಹ ಕಾಯ್ದೆಯನ್ನು ರದ್ದುಪಡಿಸಲು ಸಾಧ್ಯವಿಲ್ಲ. ಸಲಿಂಗ ವಿವಾಹ ಮಾನ್ಯತೆಯ ವಿಚಾರದಲ್ಲಿ ಸಂಸತ್ತು ತೀರ್ಮಾನಿಸಬೇಕು. ಹೊಸ ವಿವಾಹ ವ್ಯವಸ್ಥೆಯನ್ನು ರಚಿಸುವಂತೆ ಸಂಸತ್ತು ಅಥವಾ ಸರ್ಕಾರವನ್ನು ನಾವು ಒತ್ತಾಯಿಸಲು ಸಾಧ್ಯವಿಲ್ಲ. ವಿಶೇಷ ವಿವಾಹ ಕಾಯ್ದೆಯ (SMA) ಸೆಕ್ಷನ್ 4 ಸಲಿಂಗ ದಂಪತಿಗಳನ್ನು ಒಳಗೊಂಡಿಲ್ಲ ಎಂಬ ಕಾರಣಕ್ಕೆ ಅಸಾಂವಿಧಾನಿಕ ಎಂದು ಪರಿಗಣಿಸಲಾಗುವುದಿಲ್ಲ ಎಂದು ಮುಖ್ಯ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್ ಹೇಳಿದ್ದಾರೆ.
ನ್ಯಾಯಾಲಯವು ಶಾಸಕಾಂಗದ ವ್ಯಾಪ್ತಿಯಲ್ಲಿ ಪ್ರವೇಶಿಸದಂತೆ ಎಚ್ಚರಿಕೆ ವಹಿಸಿದ್ದೇವೆ. ವಿವಾಹ ವ್ಯವಸ್ಥೆಯೊಳಗೆ ಪ್ರವೇಶಿಸುವ ಹಕ್ಕಿನಲ್ಲಿ, ವ್ಯಕ್ತಿಯು ಇನ್ನೊಬ್ಬ ಸಂಗಾತಿಯನ್ನು ಆಯ್ಕೆ ಮಾಡುವ ಹಕ್ಕು ಮತ್ತು ಆ ವಿವಾಹವನ್ನು ಶಾಸನವು ಗುರುತಿಸುವ ಹಕ್ಕು ಎರಡನ್ನೂ ಒಳಗೊಂಡಿದೆ. ಪ್ರತಿಯೊಬ್ಬರಿಗೂ ತಮ್ಮ ಸಂಗಾತಿಯನ್ನು ಆಯ್ಕೆ ಮಾಡುವ ಹಕ್ಕಿದೆ, ಸರ್ಕಾರವು ಸಲಿಂಗ ಸಂಬಂಧಗಳಿಗೆ ಕಾನೂನು ಸ್ಥಾನಮಾನ ನೀಡಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಲಿಂಗ ದಂಪತಿಗೆ ತಾರತಮ್ಯ ಮಾಡದಂತೆ ನೋಡಿಕೊಳ್ಳಬೇಕು.
ಮಕ್ಕಳ ದತ್ತು ಸ್ವೀಕಾರದ ಕುರಿತು
ಅವಿವಾಹಿತ ದಂಪತಿಗಳು ಮಗುವನ್ನು ದತ್ತು ತೆಗೆದುಕೊಳ್ಳುವುದನ್ನು ತಡೆಯುವ ನಿಬಂಧನೆಗಳು ತಪ್ಪು. ಭಿನ್ನಲಿಂಗೀಯ ದಂಪತಿ ಮಾತ್ರ ಉತ್ತಮ ಪೋಷಕರಾಗಬಹುದು ಎಂದು ಕಾನೂನು ಹೇಳುವುದಿಲ್ಲ, ತಾರತಮ್ಯಕ್ಕೆ ಕಾರಣವಾಗುತ್ತದೆ ಎಂದು ಸಿಜೆಐ ಡಿ.ವೈ. ಚಂದ್ರಚೂಡ್ ತಮ್ಮ ತೀರ್ಪಿನಲ್ಲಿ ಹೇಳಿದ್ದಾರೆ.
ವಿಶ್ವದ 34 ದೇಶಗಳಲ್ಲಿ ಸಲಿಂಗಕಾಮಿ ವಿವಾಹಗಳನ್ನು ಗುರುತಿಸಲಾಗಿದೆ. ಇದರಲ್ಲಿ ಕೆನಡಾ, ಅಮೆರಿಕ, ಬ್ರೆಜಿಲ್, ಅರ್ಜೆಂಟೀನಾ, ಬ್ರಿಟನ್, ಜರ್ಮನಿ, ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಮುಂತಾದ ದೇಶಗಳು ಸೇರಿವೆ.