ನಾಳೆ ಕರ್ನಾಟಕದಲ್ಲಿ ಸರ್ಕಾರಿ ರಜೆ ಇಲ್ಲ ; ಸಿದ್ಧರಾಮಯ್ಯ ಸ್ಪಷ್ಟನೆ..!
ನಾಳೆ (ಜನವರಿ 22) ಅಯೊಧ್ಯೆಯ ರಾಮಮಂದಿರದಲ್ಲಿ ರಾಮಲಲ್ಲಾ ವಿಗ್ರಹ ಪ್ರತಿಷ್ಠಾಪನೆ ಕಾರ್ಯಕ್ರಮ ನಡೆಯಲಿದೆ. ಹೀಗಾಗಿ ನಾಳೆ(ಸೋಮವಾರ) ಕರ್ನಾಟಕದಲ್ಲಿ ಸರ್ಕಾರಿ ರಜೆ ಘೋಷಿಸಬೇಕೆಂದಯ ಬಿಜೆಪಿ ಆಗ್ರಹಿಸಿದೆ. ಆದ್ರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಜೆ ಘೋಷಣೆ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇದರೊಂದಿಗೆ ಸರ್ಕಾರಿ ರಜೆ ಬಗ್ಗೆ ಸಿಎಂ ಸಿದ್ದರಾಮಯ್ಯನವರು ತಮ್ಮ ನಿಲುವು ಪ್ರಕಟಿಸಿದ್ದಾರೆ.
ತುಮಕೂರಿನಲ್ಲಿ ಮಾತನಾಡಿದ ಸಿದ್ದರಾಮಯ್ಯ, ನಾಳೆ ಮುಜರಾಯಿ ದೇಗುಲಗಳಲ್ಲಿ ವಿಶೇಷ ಪೂಜೆ ನಡೆಯುತ್ತೆ. ಆದ್ರೆ, ಸರ್ಕಾರಿ ರಜೆ ಇಲ್ಲ. ನಾಳೆ ಮುಜರಾಯಿ ದೇಗುಲಗಳಲ್ಲಿ ದಾಸೋಹ, ಪಾನಕ-ಫಲಹಾರ ವ್ಯವಸ್ಥೆ ಬಗ್ಗೆ ನನಗೆ ಮಾಹಿತಿ ಇಲ್ಲ. ನಾಳೆ ಮಹದೇವಪುರದಲ್ಲಿ ರಾಮನ ದೇವಸ್ಥಾನ ಉದ್ಘಾಟನೆ ಮಾಡುತ್ತಿದ್ದೇನೆ. ಕಾರ್ಯಕ್ರಮಕ್ಕೆ ನನಗೆ ಆಹ್ವಾನ ನೀಡಿದ್ದಾರೆ. ಹೀಗಾಗಿ ದೇಗುಲ ಉದ್ಘಾಟಿಸುತ್ತೇನೆ ಎಂದು ಹೇಳಿದರು.
ರಾಮಲಲ್ಲಾ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮ ದಿನ ರಾಜ್ಯದಲ್ಲಿ ರಜೆ ಘೋಷಣೆ ಮಾಡಬೇಕು ಎಂದು ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಆಗ್ರಹಿಸಿದ್ದಾರೆ. ಈ ಸಂಬಂಧ ವಿಧಾನಪರಿಷತ್ ಪ್ರತಿಪಕ್ಷ ನಾಯಕ ಕೋಟ ಶ್ರೀನಿವಾಸ್ ಪೂಜಾರಿ ಸಿದ್ದರಾಮಯ್ಯನವರಿಗೆ ಪತ್ರ ಬರೆದು ಮನವಿ ಮಾಡಿಕೊಂಡಿದ್ದರು. ಅಲ್ಲದೇ ಹಿಂದೂಪರ ಸಂಘಟನೆಗಳು, ಬೆಂಗಳೂರು ವಕೀಲರ ಸಂಘವು ಸಹ ರಜೆ ನೀಡುವಂತೆ ಮನವಿ ಮಾಡಿತ್ತು. ಆದ್ರೆ, ಇದೀಗ ಅಂತಿಮವಾಗಿ ಸಿದ್ದರಾಮಯ್ಯನವರು ರಜೆ ಘೋಷಣೆ ಮಾಡುವುದಿಲ್ಲ ಎಂದು ತಮ್ಮ ನಿಲುವು ಪ್ರಕಟಿಸಿದ್ದಾರೆ.
ಈ ಮೊದಲು ಮಧ್ಯಮಗಳಿಗೆ ಜೊತೆ ಮಾತನಾಡಿದ್ದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಸಹ ಪರೋಕ್ಷವಾಗಿ ರಜೆ ಘೋಷಣೆ ಮಾಡುವುದಿಲ್ಲ ಎಂದು ಹೇಳಿದ್ದರು. ಈ ಸಂಬಂಧ ಡಿಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಸೇರಿದಂತೆ ಕೆಲ ಸಚಿವರು ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ಸ್ವಲ್ಪ ಸಮಉ ಚರ್ಚಿಸಿದ್ದರು ಎನ್ನಲಾಗಿದೆ. ಇದೀಗ ಅಂತಿಮವಾಗಿ ಸಿಎಂ ರಜೆ ಘೋಷಣೆ ಮಾಡುವುದಿಲ್ಲ ಎಂದು ಕಡ್ಡಿ ಮುರಿದಂತೆ ಹೇಳಿದ್ದಾರೆ. ಇದು ಹಿಂದೂ ಹಾಗೂ ಬಿಜೆಪಿ ನಾಯಕರ ಆಕ್ರೋಶಕ್ಕೆ ಕಾರಣವಾಗಿದೆ.
ಈಗಾಗಲೇ ಹಲವು ರಾಜ್ಯಗಳು ನಾಳೆ ಅರ್ಧ ದಿನ ಸರ್ಕಾರಿ ರಜೆ ಘೋಷಣೆ ಮಾಡಿವೆ. ಅದರಲ್ಲೂ ಕೇಂದ್ರ ಸರ್ಕಾರ ಸಹ ದೇಶವ್ಯಾಪಿ ತನ್ನ ಕಚೇರಿಗಳಿಗೆ ಅರ್ಧ ದಿನ ರಜೆ ಘೋಷಣೆ ಮಾಡಿದೆ.