ವಾಟ್ಸಪ್ ನಲ್ಲಿ ಹೊಸ ಫೀಚರ್ ; HD ಕ್ವಾಲಿಟಿ ಫೋಟೋ ಆಯ್ಕೆ- ಇಲ್ಲಿದೆ ಮಾಹಿತಿ
ಮೆಟಾ ಒಡೆತನದ ಪ್ರಸಿದ್ಧ ಮೆಸೇಜಿಂಗ್ ಅಪ್ಲಿಕೇಷನ್ ವಾಟ್ಸ್ಆ್ಯಪ್ (WhatsApp) ಬಳಕೆದಾರರಿಗೆ ಒಂದರ ಹಿಂದೆ ಒಂದರಂತೆ ಆಕರ್ಷಕ ಫೀಚರ್ಗಳನ್ನು ಬಿಡುಗಡೆ ಮಾಡುತ್ತಿದೆ. ಈಗಾಗಲೇ ಅನೇಕ ನೂತನ ಫೀಚರ್ಗಳ ಬಗ್ಗೆ ಘೋಷಣೆ ಮಾಡಿರುವ ವಾಟ್ಸ್ಆ್ಯಪ್ ವಾರಕ್ಕೊಂದು ಆಯ್ಕೆಯನ್ನು ಪರಿಚಯಿಸುತ್ತದೆ. ಇದೀಗ ಬಳಕೆದಾರರ ಬಹುದಿನಗಳ ಬೇಡಿಕೆಯ ಹೆಚ್ಡಿ ಫೋಟೋ ಕಳುಹಿಸುವ ಆಯ್ಕೆ ನೀಡಲು ಮುಂದಾಗಿದೆ. ವಾಟ್ಸ್ಆ್ಯಪ್ ಶೀಘ್ರದಲ್ಲೇ ಬಳಕೆದಾರರಿಗೆ HD ಗುಣಮಟ್ಟದಲ್ಲಿ ಫೋಟೋಗಳನ್ನು ಕಳುಹಿಸಲು ಅವಕಾಶ ನೀಡುತ್ತದೆ ಎಂದು ಮೆಟಾ-ಮಾಲೀಕತ್ವದ ಮೆಸೇಜಿಂಗ್ ಕಂಪನಿಯು ಘೋಷಿಸಿದೆ.
ವಾಟ್ಸ್ಆ್ಯಪ್ನ ಈ ಹೊಸ ಫೀಚರ್, ಬಳಕೆದಾರರು HD (2000×3000 ಪಿಕ್ಸೆಲ್‌ಗಳು) ಅಥವಾ ಸ್ಟ್ಯಾಂಡರ್ಡ್ (1365×2048 ಪಿಕ್ಸೆಲ್‌ಗಳು) ಗುಣಮಟ್ಟದಲ್ಲಿ ಫೋಟೋಗಳನ್ನು ಕಳುಹಿಸಲು ಅವಕಾಶ ನೀಡುತ್ತದೆ. ಇದು ಇಂಟರ್ನೆಟ್ ವೇಗದ ಮೇಲೆ ಅವಲಂಬಿಸಿದೆ. ಇಂಟರ್ನೆಟ್ ನಿಧಾನವಾಗಿದ್ದರೆ HD ನಲ್ಲಿರುವ ಫೋಟೋಗಳನ್ನು ಕಳುಹಿಸಲು ಅಥವಾ ಲೋಡ್ ಮಾಡಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಈ HD ಫೋಟೋಗಳು ಹೆಚ್ಚು ಎಮ್ಬಿಯಿಂದ ಕೂಡಿರುತ್ತದೆ.
ಮೆಟಾ ಸಿಇಒ ಮಾರ್ಕ್ ಜುಕರ್‌ಬರ್ಗ್ ಕೂಡ ಫೇಸ್‌ಬುಕ್‌ನಲ್ಲಿ ಈ ಹೊಸ ಅಪ್ಡೇಟ್ ಬಗ್ಗೆ ಹಂಚಿಕೊಂಡಿದ್ದಾರೆ. “ವಾಟ್ಸ್ಆ್ಯಪ್ನಲ್ಲಿ ಫೋಟೋಗಳನ್ನು ಹಂಚಿಕೊಳ್ಳುವುದು ಇದೀಗ ಅಪ್‌ಗ್ರೇಡ್ ಆಗಿದೆ. ಈಗ ನೀವು HD ನಲ್ಲಿ ಫೋಟೋ ಕಳುಹಿಸಬಹುದು,” ಎಂದು ಬರೆದುಕೊಂಡಿದ್ದಾರೆ. ಈ ಆಯ್ಕೆ ಎಂಡ್-ಟು-ಎಂಡ್ ಎನ್ಕ್ರಿಪ್ಟ್ ಆಗಿದೆ ಎಂದು ಮೆಟಾ ಹೇಳಿದೆ. ಮುಂದಿನ ಕೆಲವು ವಾರಗಳಲ್ಲಿ ಎಚ್‌ಡಿ ಫೋಟೋ ಆಯ್ಕೆ ಜಾಗತಿಕವಾಗಿ ಎಲ್ಲರಿಗೂ ಸಿಗಲಿದೆಯಂತೆ.
want to see life in HD? ✨ now the choice to send HD photos in chat is up to you. pic.twitter.com/z0gE7tIAuo
— WhatsApp (@WhatsApp) August 17, 2023
ಒಂದೇ ವಾಟ್ಸ್ಆ್ಯಪ್ನಲ್ಲಿ ಅನೇಕ ಅಕೌಂಟ್:
ಶೀಘ್ರದಲ್ಲೇ ವಾಟ್ಸ್ಆ್ಯಪ್ ತನ್ನ ಬಳಕೆದಾರರಿಗೆ ಒಂದು ವಾಟ್ಸ್ಆ್ಯಪ್ ಅಪ್ಲಿಕೇಶನ್‌ನಲ್ಲಿ ಅನೇಕ ವಾಟ್ಸ್ಆ್ಯಪ್ ಖಾತೆಗಳನ್ನು ಸ್ವಿಚ್ ರೀತಿಯಲ್ಲಿ ತೆರೆಯಲು ಅವಕಾಶ ಮಾಡಿಕೊಡಲಿದೆ. ಈಗಾಗಲೇ ಈ ಆಯ್ಕೆ ಇನ್ಸ್ಟಾಗ್ರಾಮ್ ಮತ್ತು ಫೇಸ್‌ಬುಕ್‌ನಲ್ಲಿ ಇದೆ. ಪ್ರಸ್ತುತ, ವಾಟ್ಸ್ಆ್ಯಪ್ ಬಳಕೆದಾರರಿಗೆ ಒಂದು ಮೊಬೈಲ್ನಲ್ಲಿ ಒಂದು ಖಾತೆಯೊಂದಿಗೆ ಲಾಗ್ ಇನ್ ಮಾಡಲು ಮಾತ್ರ ಅನುಮತಿಸುತ್ತದೆ. ಆದ್ದರಿಂದ, ವಿಭಿನ್ನ ಫೋನ್ ಸಂಖ್ಯೆಗಳೊಂದಿಗೆ ಎರಡು ವಾಟ್ಸ್ಆ್ಯಪ್ ಖಾತೆಗಳನ್ನು ಬಳಸುವ ಬಳಕೆದಾರರು ಎರಡು ಮೊಬೈಲ್ಗಳನ್ನು ಬಳಸಬೇಕಾಗುತ್ತದೆ. ಈ ವೈಶಿಷ್ಟ್ಯವು ಪ್ರಸ್ತುತ ಕೆಲವು ಬೀಟಾ ಪರೀಕ್ಷಕರಿಗೆ ಲಭ್ಯವಿದೆ ಮತ್ತು ಮುಂಬರುವ ವಾರಗಳಲ್ಲಿ ಹೆಚ್ಚಿನ ಬಳಕೆದಾರರಿಗೆ ಹೊರತರಲಾಗುವುದು ಎಂದು ವರದಿಗಳು ಹೇಳಿದೆ.