ದೇಶಾದ್ಯಂತ ಹವಾಮಾನ ಪ್ರಭಾವ ; ಉತ್ತರಪ್ರದೇಶ ಮತ್ತು ಬಿಹಾರದಲ್ಲಿ ಬಿಸಿಗಾಳಿಗೆ 100ಕ್ಕೂ ಅಧಿಕ ಮಂದಿ ಸಾವು - ಹಲವೆಡೆ ಮಳೆ!
ನವದೆಹಲಿ (ಜೂನ್ 19, 2023): ಒಂದು ಕಡೆ ರಾಜ್ಯದಲ್ಲಿ ಜೂನ್ ತಿಂಗಳು 3 ವಾರ ಆಗುತ್ತಾ ಬಂದ್ರೂ ಮಳೆನೇ ಶುರುವಾಗಿಲ್ಲ ಅನ್ನೋದು ಬಹುತೇಕ ಎಲ್ಲ ರೈತರ ಹಾಗೂ ಜನಸಾಮಾನ್ಯರ ಅಳಲು. ಆದರೆ, ದೇಶದ ಹಲವು ರಾಜ್ಯಗಳಲ್ಲಿ ಮುಂಗಾರು ಆಗಮಿಸುವ ಮೊದಲೇ ಮಳೆ ಹೆಚ್ಚಾಗಿದೆ. ಇನ್ನು, ಕೆಲವೆಡೆ ಬಿಸಿಗಾಳಿಗೆ 100 ಕ್ಕೂ ಹೆಚ್ಚು ಜನ ಬಲಿಯಾಗಿದ್ದಾರೆ.
ಹೌದು, ಹವಾಮಾನ ವೈಪರೀತ್ಯ ದೇಶದ ಮೇಲೂ ಪರಿಣಾಮ ಬೀರುತ್ತಿದೆ. ಕೆಲ ರಾಜ್ಯಗಳಲ್ಲಿ ವಿಪರೀತ ಉಷ್ಣ ತಾಪಮಾನ ಹಾಗೂ ಉಷ್ಣ ಮಾರುತಗಳ ಹಾವಳಿ ಹೆಚ್ಚಾಗಿದೆ. ಇನ್ನು, ಕೆಲ ರಾಜ್ಯಗಳಲ್ಲಿ ಮುಂಗಾರು ಪ್ರವೇಶವಾಗದಿದ್ದರೂ ವರುಣನ ಆರ್ಭಟ ಹೆಚ್ಚಾಗಿದೆ. ಉತ್ತರಪ್ರದೇಶ ಹಾಗೂ ಬಿಹಾರದಲ್ಲಿ ಬಿಸಿಗಾಳಿಗೆ 100 ಕ್ಕೂ ಅಧಿಕ ಮಂದಿ ಬಲಿಯಾಗಿದ್ದಾರೆ. ಈ ಪೈಕಿ ಯುಪಿಯ ಬಲ್ಲಿಯಾದ ಸರ್ಕಾರಿ ಜಿಲ್ಲಾಸ್ಪತ್ರೆಯಲ್ಲೇ 3 ದಿನದಲ್ಲಿ 54 ಮಂದಿ ಮೃತಪಟ್ಟಿದ್ದಾರೆ.
ಉತ್ತರ ಪ್ರದೇಶದ ಬಲ್ಲಿಯಾ ಜಿಲ್ಲಾ ಆಸ್ಪತ್ರೆಯಲ್ಲಿ ಕಳೆದ ಮೂರು ದಿನಗಳಲ್ಲಿ 54 ಜನರು ಮೃತಪಟ್ಟಿದ್ದಾರೆ ಮತ್ತು ಸುಮಾರು 400 ಜನರು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದೂ ವರದಿಯಾಗಿದೆ. ಇನ್ನು, ಸಾವಿಗೆ ಬೇರೆ ಬೇರೆ ಕಾರಣಗಳಿದ್ದರೂ, ತೀವ್ರ ಶಾಖವೂ ಒಂದು ಕಾರಣ ಆಗಿರಬಹುದು ಎಂದು ವೈದ್ಯರು ಸಹ ಹೇಳಿದ್ದಾರೆ. ಅಲ್ಲದೆ, ತೀವ್ರ ಶಾಖದ ಹೊಡೆತದಿಂದಾಗಿ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಹೆಚ್ಚುತ್ತಿದೆ ಎಂದೂ ಅವರು ಹೇಳಿದರು. ತೀವ್ರವಾದ ಶಾಖದ ಅಲೆಯು ಉತ್ತರ ಪ್ರದೇಶವನ್ನು ಆವರಿಸಿದ್ದು, ಹೆಚ್ಚಿನ ಸ್ಥಳಗಳು 40 ಡಿಗ್ರಿಗೂ ಅಧಿಕ ತಾಪಮಾನವನ್ನು ನೋಡುತ್ತವೆ.
ಹಠಾತ್ ಸಾವುಗಳು ಮತ್ತು ರೋಗಿಗಳು ಜ್ವರ, ಉಸಿರಾಟದ ತೊಂದರೆ ಮತ್ತು ಇತರ ಸಮಸ್ಯೆಗಳಿಂದ ಆಸ್ಪತ್ರೆಗಳಿಗೆ ದಾಖಲಾಗುತ್ತಿದ್ದು, ಇದರಿಂದ ಆಸ್ಪತ್ರೆ ತುಂಬುತ್ತಿದೆ. ಇದು ತನ್ನ ಸಿಬ್ಬಂದಿಯನ್ನು ಎಚ್ಚರದಿಂದಿರುವಂತೆ ಮಾಡಿದೆ. ಜೂನ್ 15 ರಂದು 23 ರೋಗಿಗಳು, 16 ರಂದು 20 ರೋಗಿಗಳು ಹಾಗೂ 17 ರಂದು ಅಂದರೆ ನಿನ್ನೆ 11 ರೋಗಿಗಳು ಮೃತಪಟ್ಟಿದ್ದಾರೆ ಎಂದು ಬಲ್ಲಿಯಾ ಜಿಲ್ಲಾ ಆಸ್ಪತ್ರೆಯ ಪ್ರಭಾರಿ ವೈದ್ಯಕೀಯ ಅಧೀಕ್ಷಕ ಎಸ್.ಕೆ. ಯಾದವ್ ತಿಳಿಸಿದ್ದಾರೆ.
ಇನ್ನೊಂದೆಡೆ, ಉತ್ತರ ಪ್ರದೇಶದ ನೋಯ್ಡಾ, ತಮಿಳುನಾಡು, ರಾಜಸ್ಥಾನ, ಅಸ್ಸಾಂ ರಾಜ್ಯಗಳಲ್ಲಿ ವರುಣನ ಆರ್ಭಟ ಹೆಚ್ಚಾಗಿದೆ. ಬಿಪೊರ್ಜೊಯ್ ಚಂಡಮಾರುತದ ಕಾರಣದಿಂದ ರಾಜಸ್ಥಾನದ ಜೈಸಲ್ಮೇರ್, ಅಜ್ಮೀರ್ ಸೇರಿದಂತೆ ಹಲವು ಭಾಗದಲ್ಲಿ ಮಳೆಯಾಗುತ್ತಿದೆ. ಅಜ್ಮೀರ್ನ ಜವಾಹರಲಾಲ್ ನೆಹರು ಆಸ್ಪತ್ರೆ ಜಲಾವೃತವಾಗಿದೆ.
ತಮಿಳುನಾಡಿನ ಚೆನ್ನೈ, ತಿರುವಳ್ಳುವರ್, ಕಾಂಚಿಪುರಂ, ಚೆಂಗಲ್ಪಟ್ಟು ಸೇರಿದಂತೆ ಹಲವೆಡೆ ಮಳೆಯಾಗಿದ್ದು ಶಾಲಾ ಕಾಲೇಜುಗಳಿಗೆ ರಜೆ ಘೋಷಣೆಯಾಗಿದೆ. ಜತೆಗೆ, ಹಿಮಾಚಲ ಪ್ರದೇಶದ ಧರ್ಮಶಾಲಾದಲ್ಲಿ ನಿನ್ನೆ ಸಂಜೆಯಿಂದ ಮಳೆ ಸುರಿಯುತ್ತಿದ್ದು, ಧೌಲಾಧರ್ ಪರ್ವತಗಳ ಪ್ರಸಿದ್ಧ ಪ್ರವಾಸಿ ತಾಣವಾದ ಕರೇರಿ ಸರೋವರದಲ್ಲಿ ಸುಮಾರು 2 ಡಜನ್ ಪ್ರವಾಸಿಗರು ಸಿಲುಕಿರುವ ಸಂಭವವಿದೆ.
ಹಾಗೆ, ಅಸ್ಸಾಂ ರಾಜ್ಯದಲ್ಲಿ ಮಳೆಯ ಪ್ರಮಾಣ ಹೆಚ್ಚಾಗಿದ್ದು, ಪ್ರವಾಹ ಪರಿಸ್ಥಿತಿ ಎದುರಾಗಿದೆ. ಒಟ್ಟಾರೆ, ನಿರಂತರ ಮಳೆಯಿಂದಾಗಿ ಬಹುತೇಕ ಭಾಗಗಳಲ್ಲಿ ನೀರಿನ ಮಟ್ಟ ಹೆಚ್ಚಳವಾಗಿದ್ದು, ದೇಶಾದ್ಯಂತ ಸದ್ಯ ಉಂಟಾಗಿರೋ ಹವಾಮಾನ ಪರಿಸ್ಥಿತಿ ಭವಿಷ್ಯದಲ್ಲಿ ಇನ್ನೂ ಯಾವ ಮಟ್ಟಕ್ಕೆ ಮುಟ್ಟುತ್ತದೋ ಕಾಣದಾಗಿದೆ.