ಉಡುಪಿಯಲ್ಲಿ ನಾಲ್ವರ ಕೊಲೆ ಪ್ರಕರಣ; ಫೇಸ್ಬುಕ್ನಲ್ಲಿ ಪ್ರಚೋದನಕಾರಿ ಪೋಸ್ಟ್ - ಕೇಸ್ ದಾಖಲು!
ಉಡುಪಿ, ನ.20: ಉಡುಪಿಯಲ್ಲಿ ಒಂದೇ ಕುಟುಂಬದ ನಾಲ್ವರ ಬರ್ಬರ ಕೊಲೆ (Udupi 4 Murder) ಪ್ರಕರಣ ಸಂಬಂಧ ಹಫೀಜ್ ಎಂಬಾತ ಫೇಸ್ಬುಕ್ನಲ್ಲಿ ಪ್ರಚೋದನಾಕಾರಿ ಪೋಸ್ಟ್ಗಳನ್ನು ಹಂಚಿಕೊಂಡಿದ್ದಾನೆ. ಈ ಹಿನ್ನೆಲೆ ಶಿವಮೊಗ್ಗ ಮೂಲದ ಹಫೀಜ್ ಮೊಹಮ್ಮದ್ ವಿರುದ್ಧ ಉಡುಪಿ ಸೆನ್ ಪೊಲೀಸ್ ಠಾಣೆಯಲ್ಲಿ ಸುಮೋಟೋ ಕೇಸ್ (Suo Moto Case) ದಾಖಲಾಗಿದೆ. ಅಪರಾಧ ಕೃತ್ಯಕ್ಕೆ ಪ್ರಚೋದನೆ, ಸಾರ್ವಜನಿಕ ಶಾಂತಿ ಕದಡುವ ಸಂಬಂಧ ಪೋಸ್ಟ್ ಹಿನ್ನೆಲೆ ಐಪಿಸಿ 155, 505(2) ಕಾಯ್ದೆಯಡಿ ಸುಮೋಟೊ ಕೇಸ್ ದಾಖಲಿಸಲಾಗಿದೆ.
ಉಡುಪಿ ನೇಜಾರಿನ ನಾಲ್ವರ ಕೊಲೆ ಪ್ರಕರಣ ಸಂಬಂಧ ಹಫೀಜ್ ಮೊಹಮದ್ ಎಂಬಾತ ತನ್ನ ಫೇಸ್ಬುಕ್ ಖಾತೆಯಲ್ಲಿ ಪ್ರಚೋದನಾಕಾರಿ ಪೋಸ್ಟ್ಗಳನ್ನು ಹಂಚಿಕೊಂಡಿದ್ದಾನೆ. ಪ್ರಿಪರೇಶನ್ ಇಲ್ಲದೇ ಪ್ರವೀಣ್ ಚೌಗಲೆಯನ್ನು ಕೊಲ್ಲುವ ಒಂದು ಸುಲಭದ ದಾರಿಯನ್ನು ನೇಜಾರಿನವರು ಕಳೆದುಕೊಂಡರು ಎಂದು ಘಟನೆ ಉಲ್ಲೇಖಿಸಿ, ಪೋಸ್ಟ್ ಹಾಕಿದ್ದಾನೆ. ಅಪರಾಧ ಕೃತ್ಯಕ್ಕೆ ಪ್ರಚೋದನೆ, ಸಾರ್ವಜನಿಕ ಶಾಂತಿ ಕದಡುವ ಸಂಬಂಧ ಪೋಸ್ಟ್ ಹಿನ್ನೆಲೆ ಐಪಿಸಿ 155, 505(2) ಕಾಯ್ದೆಯಡಿ ಸುಮೋಟೊ ಕೇಸ್ ದಾಖಲಿಸಲಾಗಿದೆ. ಕೇಸ್ ದಾಖಲಿಸಿ, ಹಫೀಜ್ ಮೊಹಮದ್ ಕುರಿತು ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಘಟನೆ ಹಿನ್ನೆಲೆ
ನವೆಂಬರ್ 12 ದೀಪಾವಳಿಯ ಮೊದಲ ದಿನ ಇಡೀ ಊರು ಎಣ್ಣೆ ಸ್ನಾನ ಮಾಡಿ ಹೊಸ ಬಟ್ಟೆ ತೊಟ್ಟು ದೀಪಾವಳಿಯ ಆಚರಣೆಗೆ ಎದ್ದು ನಿಂತಿತ್ತು. ಆ ಸಂದರ್ಭದಲ್ಲಿ ರಿಕ್ಷಾದಲ್ಲಿ ಬಂದ ದುಷ್ಕರ್ಮಿ ಉಡುಪಿಯ ನೇಜಾರು ನಗರದ ಅಲ್ ಆಸೀಮ್ ಮನೆಗೆ ನುಗ್ಗಿ ಮನೆಯೊಡತಿ ಹಸೀನಾ, 11ವರ್ಷದ ಬಾಲಕ ಅಫ್ನಾನ್, ಇಬ್ಬರು ಹೆಣ್ಣು ಮಕ್ಕಳಾದ ಅಯ್ನಾಝ್ ಮತ್ತು ಹಾಸೀಂ ಎಂಬುವವರನ್ನು ಬರ್ಬರವಾಗಿ ಕೊಲೆ ಮಾಡಿ ಪರಾರಿಯಾಗಿದ್ದ. ಆರೋಪಿಯನ್ನ ಮನೆಗೆ ಬಿಟ್ಟಿದ್ದ ರಿಕ್ಷಾ ಚಾಲಕ ಶಾಮ್ ಹೇಳಿಕೆ ಮತ್ತು ಎರಡು ಸಿಸಿ ಕ್ಯಾಮೆರಾ ಫೋಟೇಜ್ ಆಧಾರದ ಮೇಲೆ ತನಿಖೆ ಆರಂಭಿಸಿದ ಪೊಲೀಸರು ಕೊನೆಗೂ ಆರೋಪಿಯನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.
ಉಡುಪಿಯ ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಪ್ರವೀಣ್ ಅರುಣ್ ಚೌಗುಲೆ ತಾನು ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ. ಕೊಲೆಗೆ ಮೂರು ಕಾರಣ ಇದೆ ಎಂದು ಹೇಳಿಕೆ ನೀಡಿದ್ದಾನೆ. ಟಾರ್ಗೆಟ್ ಅಯ್ನಾಝ್ ಮಾತ್ರ ಆಗಿದ್ದಳು.
ಅಯ್ನಾಝ್ ಮತ್ತು ಪ್ರವೀಣ್ ಚೌಗುಲೆ ನಡುವಿನ ಸಂಬಂಧಗಳ ಬಗ್ಗೆ ತನಿಖೆ ಮಾಡುತ್ತಿದ್ದೇವೆ. ತಡೆಯಲು ಬಂದವರಿಂದ ತಪ್ಪಿಸಿಕೊಳ್ಳಲು ಮತ್ತು ಸಾಕ್ಷ್ಯ ನಾಶ ಮಾಡುವ ಸಲುವಾಗಿ ಎಲ್ಲರನ್ನೂ ಕೊಲೆ ಮಾಡಿರುವ ಬಗ್ಗೆ ಆರೋಪಿ ಹೇಳಿಕೆ ನೀಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.