ಮೂಡಿಗೆರೆ : ನಾಲ್ಕು ದಿನಗಳಿಂದ ನಾಪತ್ತೆಯಾಗಿದ್ದ ಕಾಲೇಜು ವಿದ್ಯಾರ್ಥಿನಿ ಸೃಷ್ಟಿ ಬಾವಿಯಲ್ಲಿ ಶವವಾಗಿ ಪತ್ತೆ..!
ಮೂಡಿಗೆರೆ : ಕಳೆದ ನಾಲ್ಕು ದಿನಗಳಿಂದ ನಾಪತ್ತೆಯಾಗಿದ್ದ ಕಾಲೇಜು ವಿದ್ಯಾರ್ಥಿನಿಯ ಶವ ಬಾವಿಯಲ್ಲಿ ಪತ್ತೆಯಾಗಿದೆ. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕು ಗೋಣಿಬೀಡು ಠಾಣೆ ವ್ಯಾಪ್ತಿಯ ಜಿ.ಹೊಸಳ್ಳಿ ಗ್ರಾಮದಲ್ಲಿ ಮೊನ್ನೆ ಗುರುವಾರ ಸಂಜೆಯಿಂದ ಸೃಷ್ಟಿ ಎಂಬ ಯುವತಿ ಕಾಣೆಯಾಗಿದ್ದಳು.
ಕಾಣೆಯಾಗಿದ್ದ ಯುವತಿಗಾಗಿ ತೀವ್ರ ಹುಡುಕಾಟ ನಡೆಸಲಾಗಿತ್ತು. ಭಾನುವಾರ ಗ್ರಾಮದ ಕುಡಿಯುವ ನೀರು ಯೋಜನೆಯ ಬಾವಿಯಲ್ಲಿ ಯುವತಿಯ ಶವ ಪತ್ತೆಯಾಗಿದೆ. ಜಿ.ಹೊಸಳ್ಳಿ ಗ್ರಾಮದ ಕೃಷ್ಣಮೂರ್ತಿ ಎನ್ನುವವರ ಪುತ್ರಿ ಸೃಷ್ಟಿ(19ವರ್ಷ) ಹಾಸನದ ಮಹಿಳಾ ಕಾಲೇಜಿನಲ್ಲಿ ಪದವಿ ವ್ಯಾಸಂಗ ಮಾಡುತ್ತಿದ್ದರು. ಹಾಸ್ಟೆಲ್ ನಿಂದ ಕಾಲೇಜಿಗೆ ಹೋಗುತ್ತಿದ್ದರು ಎಂದು ತಿಳಿದು ಬಂದಿದೆ. ಕಳೆದ ವಾರ ಮನೆಗೆ ಬಂದಿದ್ದ ಸೃಷ್ಟಿ ಡಿಸೆಂಬರ್ 21 ರ ಗುರುವಾರ ಸಂಜೆ ಇದ್ದಕ್ಕಿದ್ದಂತೆ ಮನೆಯಿಂದ ನಾಪತ್ತೆಯಾಗಿದ್ದಳು.
ಸೃಷ್ಟಿಗಾಗಿ ಸುತ್ತಮುತ್ತಲ ಪ್ರದೇಶಗಳಲ್ಲಿ ತೀವ್ರ ಹುಡುಕಾಟ ನಡೆಸಲಾಗಿತ್ತು ಆದರೆ ಪತ್ತೆಯಾಗಿರಲಿಲ್ಲ. ಭಾನುವಾರ ಗ್ರಾಮದ ಕುಡಿಯುವ ನೀರಿನ ಮೋಟರ್ ಅಳವಡಿಸಿರುವ ಬಾವಿಯಲ್ಲಿ ಯುವತಿಯ ಶವ ತೇಲುತ್ತಿರುವುದನ್ನು ವಾಟರ್ ಮ್ಯಾನ್ ಗಮನಿಸಿ ಮಾಹಿತಿ ನೀಡಿದ್ದಾರೆ. ಗೋಣಿಬೀಡು ಠಾಣೆಯಲ್ಲಿ ದೂರು ದಾಖಲಾಗಿದೆ.ಸೃಷ್ಟಿ ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ. ಸೃಷ್ಟಿ ತಂದೆ ತಾಯಿ ಮತ್ತು ಇಬ್ಬರು ಸಹೋದರರನ್ನು ಅಗಲಿದ್ದಾರೆ ಹಾಸನದ ವುಮೆನ್ಸ್ ಕಾಲೇಜಿನಲ್ಲಿ ಪ್ರಥಮ ವರ್ಷದ ಪದವಿ ವ್ಯಾಸಂಗ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.
ಹಾಸನ -ಹೇಮಾವತಿ ನದಿ ನೀರಿನಲ್ಲಿ ಮುಳುಗಿ ಸಾವನಪ್ಪಿದ ನಿತ್ಯ..!!
ಹಾಸನ ಡಿಸೆಂಬರ್ 25: ಅಂಜನೇಯ ಸ್ವಾಮಿ ದರ್ಶನ ಮಾಡಿ ಹೇಮಾವತಿ ನದಿ ಹಿನ್ನೀರಿನಲ್ಲಿ ಆಟವಾಡುತ್ತಿದ್ದ ಯುವತಿಯೊಬ್ಬಳು ಆಕಸ್ಮಿಕವಾಗಿ ಮುಳುಗಿ ಮೃತಪಟ್ಟ ಘಟನೆ ಹಾಸನ ತಾಲೂಕಿನ ಗೊರೂರಿನ ಹೇಮಾವತಿ ಜಲಾಶಯದ ಹಿನ್ನೀರಿನಲ್ಲಿ ನಡೆದಿದೆ.
ಮೃತ ಯುವತಿಯನ್ನು ಗೊರೂರು ಅರಳಿಕಟ್ಟೆ ಗ್ರಾಮದ ಗಿರೀಶ್ ಎಂಬವರ ಪುತ್ರಿ ನಿತ್ಯ (19) ಎಂದು ಗುರುತಿಸಲಾಗಿದೆ.
ಹನುಮ ಜಯಂತಿ ಪೂಜೆಗಾಗಿ ಸಂಬಂಧಿಕರೊಂದಿಗೆ ಗ್ರಾಮದ ಆಂಜನೇಯಸ್ವಾಮಿ ದೇವಸ್ಥಾನಕ್ಕೆ ಯುವತಿ ತೆರಳಿದ್ದಳು. ಈ ವೇಳೆ ಪೂಜೆ ಸಲ್ಲಿಸಿ ಹೇಮಾವತಿ ಹಿನ್ನೀರಿನಲ್ಲಿ ಆಟವಾಡುತ್ತಿದ್ದಾಗ ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾಳೆ. ಯುವತಿಯ ಮೃತದೇಹಕ್ಕಾಗಿ ಅಗ್ನಿಶಾಮಕದಳದಿಂದ ಶೋಧಕಾರ್ಯ ನಡೆಯುತ್ತಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗೊರೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.