Srinivas Poojary: ಸಿಎಂ ವಿರುದ್ಧ ಗಾಂಧಿ ಪ್ರತಿಮೆ ಎದುರು ಸಂಸದ ಕೋಟಾ ಶ್ರೀನಿವಾಸ್ ಪೂಜಾರಿ ಮೌನ ಪ್ರತಿಭಟನೆ
ಬೆಂಗಳೂರು: ತಮ್ಮ ಮೇಲೆ ಸದನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭ್ರಷ್ಟಾಚಾರದ ಆರೋಪ ಮಾಡಿದ್ದರ ವಿರುದ್ಧ ಸಂಸದ ಕೋಟ ಶ್ರೀನಿವಾಸ್ ಪೂಜಾರಿ (MP Kota Srinivas Poojary) ವಿಧಾನಸೌಧದ ಗಾಂಧಿ ಪ್ರತಿಮೆ ಎದುರು ಸೋಮವಾರ ಮೌನ ಪ್ರತಿಭಟನೆ ನಡೆಸಿದರು.
ಕೋಟ ಶ್ರೀನಿವಾಸ್ ಪೂಜಾರಿಗೆ ಮೇಲ್ಮನೆ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಶಾಸಕ ಸುರೇಶ್ ಕುಮಾರ್, ಪರಿಷತ್ ಸದಸ್ಯರಾದ ಎನ್.ರವಿಕುಮಾರ್, ಪ್ರತಾಪ್ ಸಿಂಹ ನಾಯಕ್, ಶಾಂತಾರಾಮ್ ಬುದ್ನಿ ಸಾಥ್ ನೀಡಿದರು.
”ನನ್ನ ಮೇಲಿನ ಆರೋಪ ಹಿಂಪಡೆಯಿರಿ, ಇಲ್ಲವೇ ಸಿಬಿಐ ತನಿಖೆಗೆ ಕೊಡಿ” ಎಂದು ಆಗ್ರಹಿಸಿ ಶ್ರೀನಿವಾಸ್ ಪೂಜಾರಿ ಧರಣಿ ನಡೆಸಿದರು. ಭಿತ್ತಿ ಪತ್ರ ಪ್ರದರ್ಶನದ ಮೂಲಕ ಮೌನವಾಗಿ ಪ್ರತಿಭಟಿಸಿದರು. ಈ ಹಿಂದೆ ಕೋಟಾ ಶ್ರೀನಿವಾಸ್ ಪೂಜಾರಿ ಹಿಂದುಳಿದ ವರ್ಗಗಳ ಇಲಾಖೆಯ ಸಚಿವರಾಗಿದ್ದಾಗ ಬೋವಿ ನಿಗಮದಲ್ಲಿ ಭ್ರಷ್ಟಾಚಾರ ಆಗಿದೆ ಎಂದು ಸಿಎಂ ಆರೋಪಿಸಿದ್ದರು.
ಪ್ರತಿಭಟನೆ ಬಳಿಕ ಮಾತನಾಡಿದ ಕೋಟಾ ಶ್ರೀನಿವಾಸ್ ಪೂಜಾರಿ, ಒಂದು ವಾರದ ಕೆಳಗೆ ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದೆ. ಸದನದ ಒಳಗೆ, ಹೊರಗೂ ಪ್ರಸ್ತಾಪ ಮಾಡಿದ್ದರು. ನಾನು ಯಾವುದೇ ಖಾತೆ ನಿಭಾಯಿಸಿದ್ದರೂ 1 ರೂ. ಭ್ರಷ್ಟಾಚಾರ ಮಾಡಿಲ್ಲ. ಒಂದು ವೇಳೆ ಭ್ರಷ್ಟಾಚಾರ ಮಾಡಿದ್ದರೇ ಸಿಬಿಐಗೆ ವಹಿಸಿ ಎಂದು ಪತ್ರ ಬರೆದಿದ್ದೆ. ಸಿಬಿಐಗೆ ವಹಿಸದಿದ್ದರೆ ವಿಧಾನಸೌಧದ ಗಾಂಧಿ ಪ್ರತಿಮೆ ಎದುರು ಪ್ರತಿಭಟನೆ ಮಾಡುವುದಾಗಿ ಹೇಳಿದ್ದೆ. ಪತ್ರಕ್ಕೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಹೀಗಾಗಿ ನಿನ್ನೆಯೂ ಮತ್ತೊಂದು ಪತ್ರ ಸಿಎಂಗೆ ಬರೆದಿದ್ದೇನೆ ಎಂದರು.
ನಿಮ್ಮ ಅಧಿಕಾರಿಗಳೇ ನನ್ನ ಮೇಲಿನ ಭ್ರಷ್ಟಾಚಾರ ಸಾಬೀತುಪಡಿಸಿದರೆ ನಾನು ಕ್ಷಮೆಗೆ ಸಿದ್ಧ ಎಂದಿದ್ದೇನೆ” ಎಂದರು.
ಸದನದ ಒಳಗೆ ನಿಂತು ನನ್ನನ್ನು ನಾನು ಸಮರ್ಥಿಸಿಕೊಳ್ಳಲು ಅವಕಾಶ ಇಲ್ಲ. ನಾನು ಸಂಸದನಾದ ಕಾರಣ ಇದು ಸಾಧ್ಯವಾಗಲಿಲ್ಲ. ನನ್ನ ಮೇಲೆ ಮಾಡಿರುವ ಆರೋಪವನ್ನು ಹಿಂಪಡೆಯಬೇಕು, ಇಲ್ಲವಾದರೆ ಸಿಬಿಐ ತನಿಖೆಗೆ ವಹಿಸುವಂತೆ ಕೋಟಾ ಶ್ರೀನಿವಾಸ್ ಪೂಜಾರಿ ಒತ್ತಾಯಿಸಿದರು. ಸಿಎಂ ವಿರುದ್ಧ ಮಾನನಷ್ಟ ಮೊಕದ್ದಮೆ ಹಾಕುವ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಆ ಬಗ್ಗೆ ಯೋಚನೆ ಮಾಡಿ ತೀರ್ಮಾನಿಸುತ್ತೇನೆ ಎಂದು ತಿಳಿಸಿದರು.
ಮುಡಾ ಹಗರಣ: ಸಿದ್ದರಾಮಯ್ಯ ರಾಜೀನಾಮೆಗೆ ಲೆಹರ್ ಸಿಂಗ್ ಆಗ್ರಹ
ನವದೆಹಲಿ: ಸಂಸತ್ತಿನಲ್ಲಿ ನಡೆಯುತ್ತಿರುವ ಬಜೆಟ್ 2024-25ರ ಮೇಲಿನೆ ಚರ್ಚೆಯ ಸಂದರ್ಭದಲ್ಲಿ ರಾಜ್ಯಸಭೆಯಲ್ಲಿ ಮಾಡಿದ ತಮ್ಮ ತೀಕ್ಷ್ಣ ಭಾಷಣದಲ್ಲಿ, ಬಿಜೆಪಿ ಸಂಸದ ಲೆಹರ್ ಸಿಂಗ್ ಸಿರೋಯಾ, ವಾಲ್ಮೀಕಿ ನಿಗಮ ಹಗರಣ ಹಾಗೂ MUDA ಭೂಹಗರಣದ ಭ್ರಷ್ಟಾಚಾರ ಆರೋಪ ಹೊತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡಲೇ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ. ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ದುರುಪಯೋಗ ಮತ್ತು ಮುಡಾ ಹಗರಣ ಕುರಿತಂತೆ ಕರ್ನಾಟಕದ ಮುಖ್ಯಮಂತ್ರಿಗಳ ಮೇಲಿರುವ ಗಂಭೀರ ಭ್ರಷ್ಟಾಚಾರ ಆರೋಪಗಳನ್ನು ಲೆಹರ್ ಸಿಂಗ್ ಎತ್ತಿ ತೋರಿಸಿದರು.
“ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ದಲಿತರ ಕಲ್ಯಾಣಕ್ಕಾಗಿ ಉದ್ದೇಶಿಸಲಾದ 187 ಕೋಟಿ ರೂ.ಗಳನ್ನು ಅಕ್ರಮವಾಗಿ ವರ್ಗಾಯಿಸಲಾಗಿದ್ದು, ನವದೆಹಲಿಯ ಕಾಂಗ್ರೆಸ್ ನಾಯಕತ್ವದ ಆದೇಶದ ಮೇರೆಗೆ ತೆಲಂಗಾಣ, ಆಂಧ್ರಪ್ರದೇಶಗಳ ಮೂಲಕ ಆ ಪಕ್ಷ ಬಳಸಿಕೊಂಡಿದೆ. ನಿಷ್ಪಕ್ಷಪಾತ ತನಿಖೆ ಮೂಲಕ ಈ ಅಕ್ರಮ ವರ್ಗಾವಣೆಗಳ ನಿಜವಾದ ವ್ಯಾಪ್ತಿ ಬಹಿರಂಗವಾಗಲಿದೆ” ಎಂದು ಲಹರ್ ಸಿಂಗ್ ಪ್ರತಿಪಾದಿಸಿದರು. ಒಂದು ವೇಳೆ ಸದನದಲ್ಲಿ ತಾವು ಹೇಳಿದ ವಿಷಯಗಳು ಸುಳ್ಳು ಎನ್ನುವುದು ಸಾಬೀತಾದರೆ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಲೆಹರ್ ಸಿಂಗ್ ನುಡಿದರು.
ದಲಿತರೊಬ್ಬರಿಗೆ ಸೇರಿದ ಭೂಮಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸಂಬಂಧಿ ಪಡೆದುಕೊಂಡು, ನಂತರ ಅದನ್ನು ಮುಖ್ಯಮಂತ್ರಿಗಳ ಪತ್ನಿಗೆ ಉಡುಗೊರೆಯಾಗಿ ನೀಡಲಾಗಿದೆ. ನಂತರ ನಡೆದ ಬೆಳವಣಿಗೆಗಳಲ್ಲಿ, ಬದಲಿಯಾಗಿ ಮುಖ್ಯಮಂತ್ರಿಗಳ ಪತ್ನಿ ಪ್ರಶ್ನಾರ್ಹ ಸಂದರ್ಭಗಳಲ್ಲಿ ಮೈಸೂರಿನ ಐಷಾರಾಮಿ ಪ್ರದೇಶದಲ್ಲಿ 14 ದೊಡ್ಡ ನಿವೇಶನಗಳನ್ನು ಪಡೆದಿದ್ದಾರೆ. ಈಗ ಮುಖ್ಯಮಂತ್ರಿಗಳು ತಮ್ಮ ಸರ್ಕಾರದಿಂದಲೇ 62 ಕೋಟಿ ರೂ. ಆರ್ಥಿಕ ಪರಿಹಾರ ನೀಡುವಂತೆ ಕೇಳಿರುವುದು ನಾಚಿಕೆಗೇಡಿನ ಸಂಗತಿ ಎಂದು ಸಂಸದರು ಹೇಳಿದರು.