ಹಣ ಪಡೆಯುವಾಗ ಸ್ಕೂಲ್ ಪ್ರಿನ್ಸಿಪಾಲ್ ಲೋಕಾಯುಕ್ತ ಬಲೆಗೆ!
ಬೆಂಗಳೂರು (ಮೇ.31): ಬೆಂಗಳೂರಿನಲ್ಲಿ ಸ್ಕೂಲ್ ಪ್ರಿನ್ಸಿಪಾಲ್ ಲೋಕಾಯುಕ್ತ ಬಲೆ ಬಿದ್ದಿದ್ದಾನೆ. ಲೋಕಾಯುಕ್ತ ಅಧಿಕಾರಿಗಳಿಂದ ಪ್ರಿನ್ಸಿಪಾಲ್ ನಾರಾಯಾಣ್ ಟ್ರ್ಯಾಪ್ ಆಗಿದ್ದು, ದಿವ್ಯಾ ಎಂಬುವವರಿಂದ 5 ಸಾವಿರ ಹಣ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾನೆ. ರಾಜಾಜಿನಗರದಲ್ಲಿರುವ ಬಸವೇಶ್ವರ ಬಾಲಕರ ಪೌಢಶಾಲೆಯಲ್ಲಿ ಈ ಘಟನೆ ನಡೆದಿದ್ದು, ಪ್ರಿನ್ಸಿಪಾಲ್ 9 ನೇ ತರಗತಿ ಫಲಿತಾಂಶ ತಡೆ ಹಿಡಿದಿದ್ದ ಹೀಗಾಗಿ ಪಾಸ್ ಮಾಡಿ ಟಿ.ಸಿ.ನೀಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದ. ಈ ಹಿನ್ನೆಲೆಯಲ್ಲಿ ಐದು ಸಾವಿರ ಹಣ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಲೋಕಾ ಬಲೆಗೆ ಬಿದ್ದಿದ್ದಾನೆ. ಡಿವೈಎಸ್ಪಿ ಬಸವರಾಜ್ ನೇತೃತ್ವದಲ್ಲಿ ಟ್ರ್ಯಾಪ್ ಕಾರ್ಯಾಚರಣೆ ನಡೆದಿದೆ.
ಲೋಕಾಯುಕ್ತ ಬಲೆಗೆ ಪಿಡಿಒ
ಹುಬ್ಬಳ್ಳಿ: ಗ್ರಾಮಸ್ಥರೊಬ್ಬರ ಕೆಲಸ ಮಾಡಿಕೊಡಲು ಹಣದ ಬೇಡಿಕೆ ಇಟ್ಟಿದ್ದ ತಾಲೂಕಿನ ಅದರಗುಂಚಿ ಗ್ರಾಪಂ ಪಿಡಿಒನನ್ನು ಲೋಕಾಯುಕ್ತ ಅಧಿಕಾರಿಗಳು ಸೋಮವಾರ ತಮ್ಮ ಖೆಡ್ಡಾಕ್ಕೆ ಕೆಡವಿದ್ದಾರೆ.
ಅದರಗುಂಚಿ ಗ್ರಾಪಂ ಪಿಡಿಒ ಮಕ್ತುಂಸಾಬ ಕರಡಿಗುಡ್ಡದ ಎಂಬುವರೇ ಲೋಕಾಯುಕ್ತ ಬಲೆ ಬಿದ್ದವರು. ಗ್ರಾಮದಲ್ಲಿ ಇ-ಸ್ವತ್ತು ಮಾಡಿಕೊಡಲು ಹಣದ ಬೇಡಿಕೆ ಇಟ್ಟಿದ್ದ ಹಿನ್ನೆಲೆಯಲ್ಲಿ ಗ್ರಾಮಸ್ಥರೊಬ್ಬರು ಲೋಕಾಯುಕ್ತ ಮೊರೆ ಹೋಗಿದ್ದರು. ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಲೋಕಾಯುಕ್ತ ಅಧಿಕಾರಿಗಳು ಪಿಡಿಒನನ್ನು ಬಲೆಗೆ ಕೆಡವಿದ್ದಾರೆ.
ಗ್ರಾಪಂನಲ್ಲಿಯೇ ಪಿಡಿಒ ಕರಡಿಗುಡ್ಡದ ಅವರನ್ನು ಸುದೀರ್ಘ ವಿಚಾರಣೆಗೆ ಒಳಪಡಿಸಿದರು. ರಾತ್ರಿಯವರೆಗೂ ವಿಚಾರಣೆಗೆ ಒಳಪಡಿಸಿದರಲ್ಲದೇ ಗ್ರಾಪಂದಲ್ಲಿನ ಇ-ಸ್ವತ್ತು ಕಡತಗಳನ್ನು ಮತ್ತು ಇತರೆ ಮಾಹಿತಿ ಕಲೆ ಹಾಕಿದರು. ಈ ವೇಳೆ ಗ್ರಾಪಂ ಬಳಿ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಜಮೆಯಾಗಿದ್ದರಿಂದ ಕೆಲ ಹೊತ್ತು ಗೊಂದಲ ವಾತಾವರಣ ಸಹ ನಿರ್ಮಾಣಗೊಂಡಿತ್ತು.