ಅರ್ಜುನ ಪ್ರಶಸ್ತಿ ಸ್ವೀಕರಿಸಿದ ಮೊಹಮ್ಮದ್ ಶಮಿ..!
ಭಾರತ ತಂಡದ ವೇಗದ ಬೌಲರ್ ಮೊಹಮ್ಮದ್ ಶಮಿ (Mohammed Shami) ದೇಶದ 2ನೇ ಅತ್ಯುನ್ನತ ಕ್ರೀಡಾ ಗೌರವ ಅರ್ಜುನ ಪ್ರಶಸ್ತಿ ಸ್ವೀಕರಿಸಿದ್ದಾರೆ. ದೆಹಲಿಯಲ್ಲಿ ಇಂದು ನಡೆದ ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಶಮಿ ಅರ್ಜುನ ಪ್ರಶಸ್ತಿ ಸ್ವೀಕರಿಸಿದರು. 2023 ರ ಏಕದಿನ ವಿಶ್ವಕಪ್ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದ ಶಮಿ ಅವರನ್ನು ಈ ಬಾರಿಯ ಅರ್ಜುನ ಪ್ರಶಸ್ತಿಗೆ ಬಿಸಿಸಿಐ ಶಿಫಾರಸ್ಸು ಮಾಡಿತ್ತು. ಅದರಂತೆ ಇದೀಗ ಟೀಮ್ ಇಂಡಿಯಾ ಆಟಗಾರ ಭಾರತದ 2ನೇ ಅತ್ಯುನ್ನತ ಕ್ರೀಡಾ ಗೌರವಕ್ಕೆ ಪಾತ್ರರಾಗಿದ್ದಾರೆ.
ಈ ಬಾರಿಯ ವಿಶ್ವಕಪ್ನಲ್ಲಿ ಟೀಮ್ ಇಂಡಿಯಾ ಪರ ಮೊಹಮ್ಮದ್ ಶಮಿ ಕೇವಲ 7 ಪಂದ್ಯಗಳನ್ನಾಡಿದ್ದರು. ಈ ವೇಳೆ 10.70 ರ ಸರಾಸರಿಲ್ಲಿ ಒಟ್ಟು 24 ವಿಕೆಟ್ ಕಬಳಿಸಿದ್ದರು. ಈ ಮೂಲಕ ಟೂರ್ನಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿ ಹೊರಹೊಮ್ಮಿದ್ದರು. ಶಮಿ ಅವರ ಈ ಅಮೋಘ ಪ್ರದರ್ಶನದಿಂದಾಗಿ ಟೀಮ್ ಇಂಡಿಯಾ ಏಕದಿನ ವಿಶ್ವಕಪ್ನಲ್ಲಿ ಫೈನಲ್ಗೇರಿತ್ತು.
#WATCH | Delhi: Mohammed Shami received the Arjuna Award from President Droupadi Murmu at the National Sports Awards. pic.twitter.com/znIqdjf0qS
— ANI (@ANI) January 9, 2024
ಆದರೆ ನಿರ್ಣಾಯಕ ಪಂದ್ಯದಲ್ಲಿ ಮುಗ್ಗರಿಸುವ ಮೂಲಕ ವಿಶ್ವಕಪ್ ಕಿರೀಟ ಮುಡಿಗೇರಿಸಿಕೊಳ್ಳುವ ಅವಕಾಶ ಭಾರತ ತಂಡ ಕೈ ತಪ್ಪಿಸಿಕೊಂಡಿತು. ಅತ್ತ ಟೂರ್ನಿಯುದ್ದಕ್ಕೂ ಅತ್ಯುತ್ತಮ ಪ್ರದರ್ಶನ ನೀಡಿದ ಶಮಿಯ ಸಾಧನೆಯನ್ನು ಪರಿಗಣಿಸಿ ಅರ್ಜುನ ಪ್ರಶಸ್ತಿಗೆ ಅವರ ಹೆಸರನ್ನು ಶಿಫಾರಸ್ಸು ಮಾಡಲಾಗಿತ್ತು. ಅದರಂತೆ ಇದೀಗ ಟೀಮ್ ಇಂಡಿಯಾ ಆಟಗಾರ ಅರ್ಜುನ ಪ್ರಶಸ್ತಿ ಸ್ವೀಕರಿಸಿದ್ದಾರೆ.
ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿ:
ಬ್ಯಾಡ್ಮಿಂಟನ್ ತಾರೆಗಳಾದ ಚಿರಾಗ್ ಶೆಟ್ಟಿ ಮತ್ತು ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ ದೇಶದ ಅತ್ಯುನ್ನತ ಕ್ರೀಡಾ ಪ್ರಶಸ್ತಿ ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಗೌರವಕ್ಕೆ ಪಾತ್ರರಾಗಿದ್ದಾರೆ. 2023 ರಲ್ಲಿ ಬ್ಯಾಡ್ಮಿಂಟನ್ ಕ್ಷೇತ್ರದಲ್ಲಿ ಭಾರತದ ಕೀರ್ತಿ ಪತಾಕೆಯನ್ನು ಮುಗಿಲೆತ್ತರಕ್ಕೇರಿಸಿದ್ದ ಈ ಜೋಡಿಗೆ ಖೇಲ್ ರತ್ನ ಪ್ರಶಸ್ತಿ ನೀಡುವ ಮೂಲಕ ರಾಷ್ಟ್ರಪತಿ ದ್ರೌಪದಿ ಮರ್ಮು ಗೌರವಿಸಿದರು.
ಈ ಬಾರಿ ಅರ್ಜುನ ಪ್ರಶಸ್ತಿ ಪಡೆದ ಕ್ರೀಡಾಪಟುಗಳು:
- ಓಜಸ್ ಪ್ರವೀಣ್ ಡಿಯೋಟಾಲೆ (ಆರ್ಚರಿ)
- ಅದಿತಿ ಗೋಪಿಚಂದ್ ಸ್ವಾಮಿ (ಆರ್ಚರಿ)
- ಶ್ರೀಶಂಕರ್ (ಅಥ್ಲೆಟಿಕ್ಸ್)
- ಪಾರುಲ್ ಚೌಧರಿ (ಅಥ್ಲೆಟಿಕ್ಸ್)
- ಮೊಹಮ್ಮದ್ ಹುಸಾಮುದ್ದೀನ್ (ಬಾಕ್ಸರ್)
- ಆರ್ ವೈಶಾಲಿ (ಚೆಸ್)
- ಮೊಹಮ್ಮದ್ ಶಮಿ (ಕ್ರಿಕೆಟ್)
- ಅನುಷ್ ಅಗರ್ವಾಲ್ (ಇಕ್ವಿಸ್ಟ್ರಿಯನ್)
- ದಿವ್ಯಾಕೃತಿ ಸಿಂಗ್ (ಈಕ್ವೆಸ್ಟ್ರಿಯನ್ ಡ್ರೆಸ್ಸೇಜ್)
- ದೀಕ್ಷಾ ದಾಗರ್ (ಗಾಲ್ಫ್)
- ಕೃಷ್ಣ ಬಹದ್ದೂರ್ ಪಾಠಕ್ (ಹಾಕಿ)
- ಸುಶೀಲಾ ಚಾನು (ಹಾಕಿ)
- ಪವನ್ ಕುಮಾರ್ (ಕಬಡ್ಡಿ)
- ರಿತು ನೇಗಿ (ಕಬಡ್ಡಿ)
- ನಸ್ರೀನ್ (ಖೋ-ಖೋ)
- ಪಿಂಕಿ (ಲಾನ್ ಬಾಲ್)
- ಐಶ್ವರ್ಯ ಪ್ರತಾಪ್ ಸಿಂಗ್ ತೋಮರ್ (ಶೂಟಿಂಗ್)
- ಇಶಾ ಸಿಂಗ್ (ಶೂಟಿಂಗ್)
- ಹರಿಂದರ್ ಪಾಲ್ ಸಿಂಗ್ (ಸ್ಕ್ವಾಷ್)
- ಐಹಿಕಾ ಮುಖರ್ಜಿ (ಟೇಬಲ್ ಟೆನಿಸ್)
- ಸುನಿಲ್ ಕುಮಾರ್ (ಕುಸ್ತಿ)
- ಆಂಟಿಮ್ ಪಂಘಲ್ (ಕುಸ್ತಿ)
- ರೋಶಿಬಿನಾ ದೇವಿ (ವುಶು)
- ಶೀತಲ್ ದೇವಿ (ಪ್ಯಾರಾ ಆರ್ಚರಿ)
- ಅಜಯ್ ಕುಮಾರ್ (ಅಂಧರ ಕ್ರಿಕೆಟ್)
- ಪ್ರಾಚಿ ಯಾದವ್ (ಪ್ಯಾರಾ ಕೆನೋಯಿಂಗ್)