ಬೆಂಗಳೂರಿಗೆ ಮೋದಿ –ಆ.26ಕ್ಕೆ ಇಸ್ರೋ ಕೇಂದ್ರ ಕಚೇರಿಗೆ ಭೇಟಿ!
ಬೆಂಗಳೂರು: ವಿಕ್ರಂ ಲ್ಯಾಂಡರ್ ಅನ್ನು ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿಸಿ ಜಗತ್ತಿಗೆ ಸಾಧ್ಯವಾಗದ ಸಾಧನೆಯನ್ನು ಇದೀಗ ಇಸ್ರೋ (ISRO) ಮಾಡಿ ತೋರಿಸಿದೆ. ಈ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ (Narendra Modi) ಆಗಸ್ಟ್ 26ರಂದು ಬೆಳಗ್ಗೆ ಬೆಂಗಳೂರಿಗೆ (Bengaluru) ಭೇಟಿ ನೀಡಲಿದ್ದು, ಇಸ್ರೋ ಕೇಂದ್ರ ಕಚೇರಿಗೆ ತೆರಳಿ ವಿಜ್ಞಾನಿಗಳನ್ನು ಅಭಿನಂದಿಸಲಿದ್ದಾರೆ.
ಬ್ರಿಕ್ಸ್ ಶೃಂಗಸಭೆ ಹಿನ್ನೆಲೆ ನರೇಂದ್ರ ಮೋದಿ ಸದ್ಯ ದಕ್ಷಿಣ ಆಫ್ರಿಕಾದಲ್ಲಿ ಪ್ರವಾಸದಲ್ಲಿದ್ದಾರೆ. ಸಭೆಯ ನಡುವೆಯೂ ಮೋದಿ ಚಂದ್ರಯಾನ (Chandrayaan-3) ಲ್ಯಾಂಡಿಂಗ್ ಪ್ರಕ್ರಿಯೆಯನ್ನು ಲೈವ್ ಆಗಿ ವೀಕ್ಷಿಸಿದ್ದರು. ಯಶಸ್ವಿ ಲ್ಯಾಂಡಿಂಗ್ ಬಳಿಕ ವಿಜ್ಞಾನಿಗಳನ್ನು ಅಭಿನಂದಿಸಿದ್ದರು.
ವಿಕ್ರಂ ಲ್ಯಾಂಡರ್ ಚಂದ್ರನ ಮೇಲೆ ಇಳಿದ ಬಳಿಕ ಇಸ್ರೋ ಅಧ್ಯಕ್ಷ ಸೋಮನಾಥ್ ಜೊತೆ ಮೋದಿ ದೂರವಾಣಿ ಮೂಲಕ ವೈಯಕ್ತಿಕವಾಗಿ ಮಾತುಕತೆ ನಡೆಸಿದ್ದರು. ಆದರೂ ಮೋದಿ ಇದೀಗ ಬೆಂಗಳೂರಿಗೆ ಬರಲಿದ್ದು, ಇಸ್ರೋ ಕಚೇರಿಗೆ ತೆರಳಿ ಅಭಿನಂದನೆ ಸಲ್ಲಿಸಲು ನಿರ್ಧರಿಸಿದ್ದಾರೆ. ಅತ್ಯುನ್ನತ ಸಾಧನೆ ಮಾಡಿದ ವಿಜ್ಞಾನಿಗಳಿಗೆ ಗೌರವ ನೀಡಲಿದ್ದಾರೆ.
ಬುಧವಾರ ಚಂದ್ರಯಾನ-3 ವಿಕ್ರಮ್ ಲ್ಯಾಂಡರ್ ಚಂದ್ರನ ಅಂಗಳದಲ್ಲಿ ಯಶಸ್ವಿಯಾಗಿ ಲ್ಯಾಂಡಿಂಗ್ ಆಗುತ್ತಿದ್ದಂತೆಯೇ ತ್ರಿವರ್ಣ ಧ್ವಜವನ್ನು ಹಾರಿಸುವ ಮೂಲಕ ಪ್ರಧಾನಿ ಮೋದಿ ಸಂಭ್ರಮ ಹಂಚಿಕೊಂಡಿದ್ದರು. ಈ ವೇಳೆ ಮಾತನಾಡಿದ ಅವರು, ನಾನು ದಕ್ಷಿಣ ಆಫ್ರಿಕಾದಲ್ಲಿದ್ದೇನೆ. ಆದರೆ ನನ್ನ ಮನಸ್ಸು ಚಂದ್ರಯಾನ ಮೇಲಿತ್ತು. ಚಂದ್ರಯಾನ ಯಶಸ್ವಿ ಜನರಲ್ಲಿ ಹಬ್ಬದ ವಾತಾವರಣ ಸೃಷ್ಟಿಸಿದೆ. ನಾನು ನಮ್ಮ ಜನರ ಖುಷಿಯ ಸಮಯದಲ್ಲಿ ಭಾಗಿಯಾಗಿದ್ದೇನೆ. ನಾನು ಇಸ್ರೋ ಮತ್ತು ದೇಶದ ವಿಜ್ಞಾನಿಗಳಿಗೆ ಧನ್ಯವಾದ ಸಲ್ಲಿಸುತ್ತೇನೆ ಎಂದು ಹೇಳಿದರು.
ಈಗ ಕರ್ನಾಟಕಕ್ಕೂ ಚಂದ್ರನಿಗೂ ನೇರ ಸಂಪರ್ಕ
ಬೆಂಗಳೂರು: ಇಸ್ರೋದ (ISRO) ಕೇಂದ್ರ ಕಚೇರಿ ಇರುವ ಬೆಂಗಳೂರು (Bengaluru) ಚಂದ್ರಯಾನ -3ರ (Chandrayaan-3) ಯಶಸ್ಸಿನಲ್ಲಿ ಮಹತ್ವದ ಪಾತ್ರ ನಿರ್ವಹಿಸಿದೆ. ರಾಕೆಟ್, ನೌಕೆಯ ಅಭಿವೃದ್ಧಿಯಿಂದ ಶುರುವಾಗಿ ಅದರ ಸಂಪೂರ್ಣ ನಿರ್ವಹಣೆ ಹಾಗೂ ಬಾಹ್ಯಾಕಾಶದಲ್ಲಿ ನೌಕೆಯ ಮೇಲೆ ಕಣ್ಗಾವಲಿರಿಸಿರುವುದು ಪೀಣ್ಯದಲ್ಲಿರುವ ಇಸ್ಟ್ರಾಕ್‍ನಿಂದ. ಈ ಕೇಂದ್ರವು ರಾಕೆಟ್ ಉಡ್ಡಯನದಿಂದ ಉಪಗ್ರಹ ಕಕ್ಷೆಗೆ ಸೇರಿಸುವುದು ಸೇರಿದಂತೆ ಅದರ ಜೀವಿತಾವಧಿಯ ಟ್ರ್ಯಾಕಿಂಗ್ ಮಾಡುತ್ತದೆ. ಈ ಮೂಲಕ ಉಪಗ್ರಹಕ್ಕೆ ಕಮಾಂಡ್ ಮಾಡುತ್ತದೆ.
ಮೋಕ್ಸ್ ಕೇಂದ್ರ ಉಡ್ಡಯನದ ಎಲ್ಲಾ ಮಾಪನಾಂಕಗಳ ಮೇಲೆ ನಿರಂತರವಾಗಿ ನಿಗಾ ಇಡುವ ಮೂಲಕ ಅವುಗಳು ಸರಿಯಾಗಿ ಕೆಲಸ ಮಾಡುತ್ತಿವೆಯೇ ಎಂಬುದನ್ನು ದಾಖಲಿಸುತ್ತದೆ.
ಚಂದ್ರಯಾನ-3 ಉಡ್ಡಯನದ ಬಳಿಕ ಭೂಮಿ ಕಕ್ಷೆ ತೊರೆದು ಚಂದ್ರನ ಕಕ್ಷೆ ಸೇರಿದ್ದು, ನೌಕೆಯಿಂದ ಲ್ಯಾಂಡರ್ ಪ್ರತ್ಯೇಕಗೊಂಡು ಚಂದ್ರಯಾನ-2ರ ಆರ್ಬಿಟರ್‌ನೊಂದಿಗೆ ಸಂಪರ್ಕ ಸಾಧಿಸಿದಾಗ ಮತ್ತು ಚಂದ್ರನ ಮೇಲೆ ಇಳಿದ ಕೂಡಲೇ ಲ್ಯಾ0ಡರ್‌ನಿಂದ ಹೊರಟ ಮೊದಲ ಸಂದೇಶ ತಲುಪಿದ್ದು ಇದೇ ಕೇಂದ್ರಕ್ಕೆ. ಇದು ಇಸ್ರೋದ ನೌಕೆಗಳ ಮಾರ್ಗವನ್ನು ನಿರ್ವಹಿಸುವ ಮತ್ತು ನೌಕೆಗೆ ಬೇಕಾದ ಸೂಚನೆಗಳನ್ನು ಕಳುಹಿಸುವ ಕೇಂದ್ರವಾಗಿದೆ. ಇಲ್ಲಿ ಹಲವು ವಿಜ್ಞಾನಿಗಳು ಪ್ರತಿ ಕ್ಷಣವೂ ನೌಕೆಯ ಮೇಲೆ ನಿಗಾ ವಹಿಸಿದ್ದಾರೆ. ಇದರಿಂದಾಗಿ ಸರಿಯಾದ ಸಮಯಕ್ಕೆ ನೌಕೆ ಕಕ್ಷೆಯನ್ನು ಸೇರಿದೆ ಎಂಬುದು ಗಮನಾರ್ಹ ವಿಚಾರ.