ಮೋದಿ ಬಿಡಲೊಪ್ಪದ ಬಿಲ್ಲವರು; ಆರಂಭದಲ್ಲಿಯೇ ಕರಾವಳಿ ಕಾಂಗ್ರೆಸಿಗೆ ಎದುರಾದ ತಲೆಬಿಸಿ!
ಮಂಗಳೂರು: ನರೇಂದ್ರ ಮೋದಿಯನ್ನು ಬಿಡಲು ಒಪ್ಪದ ಬಿಲ್ಲವರು . ಈ ರೀತಿಯ ವಿಷಯಗಳು ಈಗ ಸಾಮಾಜಿಕ ಜಾಲತಾಣದಲ್ಲಿ ಜೋರಾಗಿ ವೈರಲಾಗುತ್ತಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿಯನ್ನು ಹೆಚ್ಚಿನ ಎಲ್ಲಾ ಸಮುದಾಯಗಳು ಕರಾವಳಿಯಲ್ಲಿ ಗೌರವಿಸುತ್ತಿರುವುದು ಕಾಂಗ್ರೆಸ್ಸಿಗೆ ಈಗ ಹೊಸ ತಲೆನೋವನ್ನು ತಂದಿಟ್ಟಿದೆ.ನರೇಂದ್ರ ಮೋದಿಯನ್ನು ಬಿಡಲು ಸಾಧ್ಯವಿಲ್ಲ ಎಂದು ಹಲವಾರು ಮಂದಿ ಬಿಲ್ಲವರು ತಮ್ಮ ಅನಿಸಿಕೆಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇದು ಹುಮ್ಮಸಿನಲ್ಲಿರುವ ಕರಾವಳಿಯ ಕಾಂಗ್ರೆಸ್ಸಿಗೆ ಹೊಸ ತಲೆನೋವನ್ನು ತಂದಿಟ್ಟಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಆರಂಭವಾಗಿದೆ. ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿಯ ನಡುವೆ ನೇರಾ ಹಣಾಹಣೆ ಇದ್ದರು, ಜಾತಿ ವಿಷಯಗಳು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗುತ್ತಿರುವುದು ಕೆಲವರಿಗೆ ಕಿರಿಕಿರಿ ಉಂಟು ಮಾಡಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಕ್ಯಾಪ್ಟನ್ ಬ್ರಿಜೇಶ್ ಚೌಟರ ಹಿನ್ನೆಲೆ ಏನು?
ಕಾಲೇಜು ದಿನಗಳಲ್ಲಿಯೇ ಎನ್‌ಸಿಸಿ(NCC)ಯಲ್ಲಿ ಹೆಸರು ಮಾಡಿ ಸೇನೆಗೆ ಸೇರ್ಪಡೆಯಾಗಿದ್ದರು. ಮಂಗಳೂರಿನ ಮಿಲಾಗ್ರಿಸ್ ಸ್ಕೂಲ್‌ನಲ್ಲಿ ಪ್ರಾಥಮಿಕ ಶಿಕ್ಷಣ, ಸಂತ ಅಲೋಶಿಯಸ್ ಕಾಲೇಜಿನಲ್ಲಿ ಪಿಯು(PUC) ಮತ್ತು ಬಿಎಸ್ಸಿ(BSC) ಪದವಿ ಪೂರೈಸಿದ್ದ ಅವರು ಬಳಿಕ ಮಧ್ಯಪ್ರದೇಶದ ಇಂದೋರ್ ಐಐಎಂ(IIM)ನಲ್ಲಿ ಉನ್ನತ ಶಿಕ್ಷಣ ಪಡೆದಿದ್ದರು. ಪದವಿಯಲ್ಲಿದ್ದಾಗ ಎನ್‌ಸಿಸಿಯಲ್ಲಿ ಮಂಗಳೂರು ವಿ.ವಿ.ಯಲ್ಲಿ “ಬೆಸ್ಟ್ ಕೆಡೆಟ್’ ಎಂದು ಗುರುತಿಸಿದ್ದರು. ದಿಲ್ಲಿ(Delhi) ರಿಪಬ್ಲಿಕ್ ಪರೇಡ್‌ನಲ್ಲಿ ಎನ್‌ಸಿಸಿ(NCC) ಕೆಡೆಟ್ ಆಗಿ ಪಾಲ್ಗೊಂಡಿದ್ದರು.
UPSC ಆಯೋಜಿಸುವ ಕಂಬೈನ್ ಡಿಫೆನ್ಸ್ ಸರ್ವಿಸಸ್ ಎಕ್ಸಾಮಿನೇಷನ್ (CDSE) ಪರೀಕ್ಷೆ ಹಾಗೂ SSB ಸಂದರ್ಶನದಲ್ಲಿ ತೇರ್ಗಡೆಗೊಂಡು ಚೆನ್ನೈಯಲ್ಲಿರುವ ಆಫೀಸರ್ಸ್ ಟ್ರೈನಿಂಗ್ ಅಕಾಡೆಮಿಯಲ್ಲಿ ತರಬೇತಿ ಪಡೆದು ಭೂ ಸೇನೆಯ ಗೋರ್ಖಾ ರೈಫಲ್ಸ್‌ನ 7ನೇ ಬೆಟಾಲಿಯನ್‌ನಲ್ಲಿ ಅಧಿಕಾರಿಯಾಗಿದ್ದರು. ಅಸ್ಸಾಂ ಮತ್ತು ಮಣಿಪುರ ಸೇರಿದಂತೆ ದೇಶದ ಹಲವು ಪ್ರದೇಶಗಳಲ್ಲಿ ಸೇವೆ ಸಲ್ಲಿಸಿದ್ದಾರೆ.
2011ರಲ್ಲಿ ಸೇನೆಯಿಂದ ಸ್ವಯಂ ನಿವೃತ್ತಿ ಪಡೆದು ಊರಿಗೆ ಮರಳಿದ್ದ ಚೌಟ ಆರೆಸ್ಸೆಸ್(RSS) ಮತ್ತು ಬಿಜೆಪಿ(BJP)ಯಲ್ಲಿ ಗುರುತಿಸಿಕೊಂಡಿದ್ದರು. 2013ರಲ್ಲಿ ಯುವ ಮೋರ್ಚಾದ ದ.ಕ. ಜಿಲ್ಲಾ ಪ್ರ. ಕಾರ್ಯದರ್ಶಿ, 2016-19ರಲ್ಲಿ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿಯಾಗಿ, ಆನಂತರ ಜಿಲ್ಲಾ ಕಾರ್ಯಕಾರಿಣಿ ಸದಸ್ಯರಾಗಿ, ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಬೈಂದೂರು ಕ್ಷೇತ್ರದಲ್ಲಿ ಪ್ರಭಾರಿಯಾಗಿ ಕೆಲಸ ಮಾಡಿದ್ದರು.
ಕರಾವಳಿಯ ಜನಪದ ಕ್ರೀಡೆ ಕಂಬಳ ನಿಷೇಧಕ್ಕೊಳಗಾದ ಸಂದರ್ಭದಲ್ಲಿ ಅದರ ವಿರುದ್ಧ ಹೋರಾಟ ಸಂಘಟಿಸಿದವರಲ್ಲಿ ಕ್ಯಾಪ್ಟನ್ ಬ್ರಿಜೇಶ್ ಚೌಟ ಒಬ್ಬರು. ಕಂಬಳಕ್ಕೆ ಒಂದು ಹಂತದ ಜಯ ಸಿಕ್ಕ ಬೆನ್ನಲ್ಲೇ ಮಂಗಳೂರು ನಗರದಲ್ಲಿಯೇ ಕಂಬಳ ಆಯೋಜಿಸಬೇಕೆಂದು ನಿಶ್ಚಯಿಸಿ, ಯುವ ಸ್ನೇಹಿತರ ಬಳಗವನ್ನು ಕಟ್ಟಿಕೊಂಡು ಸತತ ಏಳು ವರ್ಷಗಳಿಂದ ಕುಳೂರಿನ ಗೋಲ್ಡ್ ಫಿಂಚ್ ಮೈದಾನದಲ್ಲಿ ಯಶಸ್ವಿಯಾಗಿ ಕಂಬಳ ಆಯೋಜಿಸಿದ್ದರು. ರಾಜ್ಯ ಬಿಜೆಪಿ ಕಾರ್ಯದರ್ಶಿಯಾಗಿರುವ ಕ್ಯಾಪ್ಟನ್ ಬ್ರಿಜೇಶ್ ಚೌಟ ಬಂಟ ಸಮುದಾಯದ ಪ್ರಮುಖ ಗುತ್ತಿನ ಮನೆಗೆ ಸೇರಿದ್ದರೂ ಅವಿವಾಹಿತರಾಗಿಯೇ ಇದ್ದು ತನ್ನ ಸಂಪೂರ್ಣ ಜೀವನವನ್ನು ದೇಶ ಸೇವೆಗಾಗಿ ಮುಡಿಪಾಗಿಟ್ಟಿದ್ದಾರೆ.ಹೀಗೆ ಕ್ಯಾಪ್ಟನ್ ಬ್ರಿಜೇಶ್ ಚೌಟ ರಾಜಕೀಯಕ್ಕೆ ಆಗಮಿಸಿ, ದಕ್ಷಿಣ ಕನ್ನಡದಲ್ಲಿ ಬಿಜೆಪಿಯಿಂದ ಲೋಕಸಭೆ ಚುನಾವಣೆಗೆ ಸ್ಪರ್ಧಿಸಲಿದ್ದಾರೆ.
ಪದ್ಮರಾಜ್ ಹಿನ್ನೆಲೆ ಏನು?
ಜನಾರ್ದನ ಪೂಜಾರಿಯವರ ಪ್ರೀತಿಯ ಶಿಷ್ಯನಾಗಿರುವ ಪದ್ಮರಾಜ್ ಅವರು ವೃತ್ತಿಯಲ್ಲಿ ವಕೀಲರಾಗಿದ್ದು ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ಮತ್ತು ರಾಜಕೀಯ ರಂಗದಲ್ಲಿ ತೊಡಗಿಸಿಕೊಂಡಿದ್ದಾರೆ. ಮಂಗಳೂರಿನ ಪ್ರಸಿದ್ಧ ಕುದ್ರೋಳಿ ಗೋಕರ್ಣನಾಥ ದೇವಾಲಯದ ಆಡಳಿತ ಸಮಿತಿಯ ಖಜಾಂಚಿ ಆಗಿರುವ ಅವರು ಮಂಗಳೂರಿನ ಪ್ರಸಿದ್ಧ ದಸರಾ ಕೂಟದ ರೂವಾರಿ ಎನಿಸಿಕೊಂಡಿದ್ದಾರೆ.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಯಾಗಿ ಜಿಲ್ಲೆಯಲ್ಲಿ ಪಕ್ಷವನ್ನು ಸಂಘಟಿಸುತ್ತಿದ್ದಾರೆ. ದ.ಕ ಜಿಲ್ಲೆಯ ಬಹುಸಂಖ್ಯಾತ ಬಿಲ್ಲದ ಸಮುದಾಯದ ನಂಬಿಕಸ್ಥ ಮುಖವಾಗಿರುವ ಪದ್ಮರಾಜ್ ರಾಮಯ್ಯ, ಎಲ್ಲಾ ಜಾತಿ ಧರ್ಮಗಳ ಜನರ ಜೊತೆ ಉತ್ತಮ ಬಾಂಧವ್ಯ, ಒಡನಾಟ ಇಟ್ಟುಕೊಂಡಿದ್ದಾರೆ. ಜಿಲ್ಲೆಯನ್ನು ಕೋಮು ಸಾಮರಸ್ಯದ ಕಡೆಗೆ ತರಲು ನಿರಂತರವಾಗಿ ಕೆಲಸ ಮಾಡುತ್ತಿದ್ದಾರೆ.
ಈ ಎಲ್ಲಾ ಮಾನದಂಡ, ಅರ್ಹತೆ ಪರಿಗಣಿಸಿ ಪದ್ಮರಾಜ್ ಅವರ ಹೆಸರು ಆಕಾಂಕ್ಷಿಗಳ ಪಟ್ಟಿಯಲ್ಲಿ ಹೈಕಮಾಂಡ್ ಗೆ ರವಾನೆಯಾಗಿತ್ತು. ಮಾಜಿ ಸಚಿವ ರಮನಾಥ ರೈ ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯ ಹಿರಿಯ ನಾಯಕರು ಪದ್ಮರಾಜ್ ಅವರನ್ನು ಬೆಂಬಲಿಸಿದ್ದರು. ನಿರೀಕ್ಷೆಯಂತೆ ಅವರಿಗೆ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ದಕ್ಷಿಣ ಕನ್ನಡ ಕ್ಷೇತ್ರದಿಂದ ಟಿಕೆಟ್ ಲಭಿಸಿದೆ..
ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರ ಒಂದು ಕಾಲದಲ್ಲಿ ಕಾಂಗ್ರೆಸ್ ಪಕ್ಷದ ಭದ್ರಕೋಟೆಯಾಗಿತ್ತು. ಜನಾರ್ದನ ಪೂಜಾರಿಯವರ ಹಿಡಿತದಲ್ಲಿದ್ದ ಈ ಕ್ಷೇತ್ರ ಬದಲಾದ ಕಾಲಘಟ್ಟದಲ್ಲಿ ಕಾಂಗ್ರೆಸ್ ಕೈತಪ್ಪಿ ಹೋಗಿತ್ತು. 3 ದಶಕದಿಂದ ಬಿಜೆಪಿ ಹಿಡಿತದಲ್ಲಿರುವ ಈ ಕ್ಷೇತ್ರ ಬಿಜೆಪಿಯ ಭದ್ರಕೋಟೆ ಎಂದು ಕರೆಸಿಕೊಳ್ಳುತ್ತಿದೆ. ಬಿಜೆಪಿಯ ಈ ಭದ್ರಕೋಟೆಯನ್ನು ಭೇದಿಸುವ ಪ್ರಯತ್ನದಲ್ಲಿರುವ ಕಾಂಗ್ರೆಸ್ ಪಕ್ಷ, ಜನಾರ್ದನ ಪೂಜಾರಿ ಅವರ ಕೈಯಿಂದ ಕಳೆದುಕೊಂಡಿರುವ ಕ್ಷೇತ್ರವನ್ನು ಅವರ ಪ್ರೀತಿಯ ಶಿಷ್ಯನ ಮೂಲಕವೇ ಪಡೆದುಕೊಳ್ಳಲು ಪ್ಲ್ಯಾನ್ ಮಾಡಿಕೊಂಡಿದೆ.
ಬಿಜೆಪಿಯನ್ನು ಸೋಲಿಸಬೇಕಾದರೆ ಜಿಲ್ಲೆಯಲ್ಲಿ ಬಹುಸಂಖ್ಯಾತರಾಗಿರುವ ಬಿಲ್ಲವರ ಮತಗಳನ್ನು ಸೆಳೆಯಬೇಕು. ಬಿಜೆಪಿ ಕಡೆ ವಾಲಿರುವ ಬಿಲ್ಲವರ ಮತಗಳನ್ನು ಕಾಂಗ್ರೆಸ್ ಪದ್ಮರಾಜ್ ರಾಮಯ್ಯ ಅವರ ಮುಖಾಂತರ ಪಕ್ಷಕ್ಕೆ ಸೆಳೆದಲ್ಲಿ ಲೋಕಸಭೆ ಸೇರಿದಂತೆ ಮುಂಬರುವ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಚುನಾವಣಾ ಗಳಲ್ಲಿ ಪಕ್ಷಕ್ಕೆ ಮುನ್ನಡೆಯನ್ನು ತಂದುಕೊಡುವುದರಲ್ಲಿ ಯಾವುದೇ ಸಂಶಯವಿರುವುದಿಲ್ಲ.