ಮೊಬೈಲ್ ಚಾರ್ಜರ್ ನಿಂದ ವಿದ್ಯುತ್ ಪ್ರವಹಿಸಿ 8 ತಿಂಗಳ ಕಂದಮ್ಮ ಮೃತ್ಯು!
ಕಾರವಾರ: ಮೊಬೈಲ್ ಚಾರ್ಜಿಂಗ್ ವೈರ್ ನಿಂದ ವಿದ್ಯುತ್ ಸ್ಪರ್ಶಗೊಂಡು 8 ತಿಂಗಳ ಕಂದಮ್ಮ ಮೃತಪಟ್ಟ ದುರ್ಘಟನೆ ಕಾರವಾರ ತಾಲೂಕಿನ ಸಿದ್ಧರ ಗ್ರಾಮದಲ್ಲಿ ಬುಧವಾರ ನಡೆದಿದೆ
ಸಿದ್ಧರ ಗ್ರಾಮದ ಸಂತೋಷ ಕಲ್ಗುಟಕರ್ ಹಾಗೂ ಸಂಜನಾ ದಂಪತಿಗಳ ಎಂಟು ತಿಂಗಳ ಮಗುವೇ ವಿದ್ಯುತ್ ಸ್ಪರ್ಶಕ್ಕೆ ಒಳಗಾಗಿ ಕೊನೆಯುಸಿರೆಳೆದಿದೆ.
ಪೋಷಕರು ಮೊಬೈಲ್ ಚಾಜ್೯ ಹಾಕಿ ಆಫ್ ಮಾಡದೆ ಬಿಟ್ಟಿದ್ದರು ಎನ್ನಲಾಗಿದೆ. ಮಗು ಆಟವಾಡುತ್ತಾ ಮೊಬೈಲ್ ಚಾಜ್೯ರ್ ವೈರ್ ಅನ್ನು ಬಾಯಲ್ಲಿಟ್ಟುಕೊಂಡಿದೆ ಕಾರಣ ಈ ಘಟನೆ ನಡೆದು ಹೋಗಿದೆ. ಆಸ್ಪತ್ರೆಗೆ ಮಗುವನ್ನು ಕರೆತಂದರಾದರೂ, ವೈದ್ಯರ ಪ್ರಯತ್ನ ಯಶ ಕಾಣಲಿಲ್ಲ.
ಕಾರವಾರ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತುಮಕೂರು: ಮೂಢನಂಬಿಕೆಗೆ ಹಸುಗೂಸು ಬಲಿ ಪ್ರಕರಣ; ಸಾವಿಗೆ ಸತ್ಯಾಂಶ ತಿಳಿಯಲು ಹೂತ್ತಿದ್ದ ಮೃತದೇಹ ಹೊರತೆಗೆದ ಪೊಲೀಸ್ರು
ತುಮಕೂರು, ಆ.2: ಜಿಲ್ಲೆಯ ಕೊರಟಗೆರೆ ತಾಲೂಕಿನ ಬಡಮುದ್ದಯ್ಯನಪಾಳ್ಯದ ಗೊಲ್ಲರಹಟ್ಟಿಯಲ್ಲಿ ಕಾಡುಗೊಲ್ಲ (Kuadgolla) ಸಮಾಜದ ಮೂಢನಂಬಿಕೆಗೆ ಜುಲೈ 23ರಂದು ಸಿದ್ದೇಶ್-ವಸಂತಾ ದಂಪತಿಯ ಮಗು ಮೃತಪಟ್ಟಿತ್ತು. ಬಳಿಕ ಸ್ವಗ್ರಾಮ ಬಡಮುದ್ದಯ್ಯನಪಾಳ್ಯದಲ್ಲಿ ಅಂತ್ಯಸಂಸ್ಕಾರ ಮಾಡಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಗು ಸಾವಿನ ನಿಜವಾದ ಕಾರಣ ತಿಳಿಯಲು ಇದೀಗ ಉಪವಿಭಾಗಾಧಿಕಾರಿ ಗೌರವ್ ಕುಮಾರ್ ಉಪಸ್ಥಿತಿಯಲ್ಲಿ ಮೃತದೇಹವನ್ನ ಹೊರ ತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.
ವಸಂತಾ ಎಂಬ ಮಹಿಳೆ ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ಅವಳಿ ಶಿಶುವಿಗೆ ಜನ್ಮ ನೀಡಿದ್ದರು. ಆದರೆ, ಹೆರಿಗೆ ಸಂದರ್ಭದಲ್ಲಿ ಗಂಡು ಮಗು ಸಾವನ್ನಪ್ಪಿದ್ದು, ಹೆಣ್ಣು ಮಗು ಆರೋಗ್ಯವಾಗಿತ್ತು. ಬಳಿಕ ತನ್ನ ಗ್ರಾಮಕ್ಕೆ ವಾಪಸ್ ಬಂದ ವಸಂತಾಳಿಗೆ ಕಾಡುಗೊಲ್ಲ ಸಮುದಾಯದ ಮುಖಂಡರು ನಮ್ಮ ಸಮುದಾಯದ ಜುಂಜಪ್ಪ ಹಾಗೂ ಯತ್ತಪ್ಪ ದೇವರಿಗೆ ಸೂತಕ ಆಗುವುದಿಲ್ಲ. ಹೀಗಾಗಿ ನಾವು ಗ್ರಾಮದೊಳಗೆ ಬಿಟ್ಟುಕೊಳ್ಳುವುದಿಲ್ಲ. ಸೂತಕದ ಬಾಣಂತಿ ಊರ ಒಳಗೆ ಬಂದರೇ ಕೇಡು ಎಂದು ಊರಾಚೆಯ ಜಮೀನಿನಲ್ಲಿ ನಿರ್ಮಿಸಲಾದ ತಾತ್ಕಾಲಿಕ ಗುಡಿಸಿಲಿನಲ್ಲಿ ಏಕಾಂಗಿಯಾಗಿ ವಾಸ ಮಾಡುವಂತೆ ಆದೇಶ ನೀಡಿದ್ದರು.
ಬಳಿಕ ಊರಾಚೆ ಗುಡಿಸಿಲಿನಲ್ಲಿ, ಮಳೆ-ಚಳಿಯಲ್ಲಿ ಏಕಾಂಗಿಯಾಗಿ ವಾಸವಿದ್ದಳು. ಆದರೆ. ಮಗುವಿಗೆ ವಿಪರೀತ ಶೀತವಾಗಿ ಪ್ರಾಣ ಬಿಟ್ಟಿತ್ತು. ನಂತರ ಈ ಘಟನೆಯನ್ನ ಟಿವಿ9ನಲ್ಲಿ ಬಿತ್ತರಿಸುತ್ತಿದ್ದಂತೆ ಎಚ್ಚೆತ್ತ ಆರೋಗ್ಯ ಇಲಾಖೆಯ ಅಧಿಕಾರಿಗಳು ಮಲ್ಲೇನಹಳ್ಳಿ ಗೊಲ್ಲರಹಟ್ಟಿಗೆ ಭೇಟಿ ನೀಡಿ, ಗ್ರಾಮಸ್ಥರ ಮನವೊಲಿಸಿ ವಸಂತರನ್ನು ಮನೆಗೆ ಸೇರಿಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಣಂತಿ ವಸಂತಾ ಪತಿ ಸಿದ್ದೇಶ್, ಮಾವ ಚಿಕ್ಕಹುಲಿಯಪ್ಪ, ಸಿದ್ದೇಶ್ ಕುಟುಂಬ ಹಾಗೂ ಸಮುದಾಯದ ಮುಖಂಡರ ವಿರುದ್ಧ ಕೋರಾ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು.