ಶಾಸಕ ಅಜಯ್ ಸಿಂಗ್ ನಿವಾಸದ ಮುಂದೆ ನೇಣು ಬಿಗಿದ ಸ್ಥಿತಿಯಲ್ಲಿ ಕೆಲಸದಾತನ ಶವ ಪತ್ತೆ!
ಕಲಬುರಗಿ: ಜೇವರ್ಗಿ (Jewargi) ಶಾಸಕ ಡಾ. ಅಜಯ್ ಸಿಂಗ್ (Ajay Singh) ನಿವಾಸದಲ್ಲಿ ಮನೆ ಕೆಲಸದ ವ್ಯಕ್ತಿಯ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಕಲಬುರಗಿ (Kalaburagi) ನಗರದ ಶರಣ ನಗರ ಬಡಾವಣೆಯಲ್ಲಿ ಶಾಸಕರ ನಿವಾಸದಲ್ಲಿರುವ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ. ಮೃತ ವ್ಯಕ್ತಿಯನ್ನು ದೇವೇಂದ್ರ ಪಟ್ಟೆದಾರ ಎಂದು ಗುರುತಿಸಲಾಗಿದೆ. ಮೇಲ್ನೋಟಕ್ಕೆ ಆತ್ಮಹತ್ಯೆ ಎಂದು ತಿಳಿದುಬಂದರೂ ನಿಖರ ಕಾರಣ ತಿಳಿದುಬಂದಿಲ್ಲ. ಸ್ಥಳಕ್ಕೆ ಬೆರಳಚ್ಚು ತಜ್ಞರ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಬ್ರಹ್ಮಪೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಡಿಸಿಪಿ ಅಡ್ಡೂರು ಶ್ರೀನಿವಾಸಲು, ಅಜಯ್ ಸಿಂಗ್ ಅವರ ಮನೆಯಲ್ಲಿ ಕೆಲಸದಾತ ದೇವೇಂದ್ರನ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಬೆಳಗ್ಗೆ 6 ಗಂಟೆಗೆ ನಮಗೆ ಈ ಬಗ್ಗೆ ಮಾಹಿತಿ ಬಂದಿದೆ. ಎಫ್‌ಎಸ್‌ಎಲ್ ತಂಡದವರು, ನಮ್ಮ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿಸಿದರು.
ಕಲಬುರಗಿ ತಾಲೂಕಿನ ಪಟ್ಟಣ ಗ್ರಾಮದ ನಿವಾಸಿದ್ದ ದೇವೇಂದ್ರ, ಅಜಯ್ ಸಿಂಗ್ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಬಗ್ಗೆ ಮಾಹಿತಿ ಇದೆ. ಘಟನೆ ನಡೆದ ಸಂದರ್ಭದಲ್ಲಿ ಅಜಯ್ ಸಿಂಗ್ ಅವರು ಮನೆಯಲ್ಲಿ ಇದ್ದ ಬಗ್ಗೆ ಮಾಹಿತಿ ಇಲ್ಲ. ಸಾವಿಗೆ ನಿಖರವಾದ ಯಾವುದೇ ಕಾರಣ ಸದ್ಯ ತಿಳಿದುಬಂದಿಲ್ಲ. ತನಿಖೆ ನಡೆದ ಬಳಿಕವಷ್ಟೇ ಸಾವಿನ ಹಿಂದಿರುವ ಕಾರಣ ಬಯಲಾಗಲಿದೆ ಎಂದು ತಿಳಿಸಿದ್ದಾರೆ.
ಹೃದಯಾಘಾತದಿಂದ ಪೊಲೀಸ್ ಕಾನ್ಸ್‌ಟೇಬಲ್ ಸಾವು
ಯಾದಗಿರಿ: ರಜೆಯಲ್ಲಿದ್ದ ಪೊಲೀಸ್ ಕಾನ್ಸ್‌ಟೇಬಲ್ (Police Constable) ಹೃದಯಾಘಾತದಿಂದ (Heart Attack) ಮೃತಪಟ್ಟಿರುವ ಘಟನೆ ಯಾದಗಿರಿ (Yadgiri) ಜಿಲ್ಲೆಯಲ್ಲಿ ನಡೆದಿದೆ.
ಯಾದಗಿರಿ ಜಿಲ್ಲೆಯ ಶಹಾಪುರ (Shahapura) ತಾಲೂಕಿನ ಗೋಗಿ ಠಾಣೆಯ ಕಾನ್ಸ್‌ಟೇಬಲ್ ದೇವೇಂದ್ರಪ್ಪ (40) ಮೃತ ದುರ್ದೈವಿ. ದೇವೇಂದ್ರಪ್ಪಗೆ ಕಳೆದ ಮೂರು ತಿಂಗಳುಗಳಿಂದ ಜ್ವರ ಬಾಧಿಸುತ್ತಿದ್ದ ಕಾರಣ ಜೂನ್‌ನಿಂದ ರಜೆಯಲ್ಲಿದ್ದರು. ಹೀಗಾಗಿ ಬುಧವಾರ ಬೆಂಗಳೂರಿನ (Bengaluru) ಅಪೋಲೋ ಆಸ್ಪತ್ರೆಗೆ ಚಿಕಿತ್ಸೆಗೆಂದು ಹೋಗುವ ಸಂದರ್ಭ ಮಾರ್ಗಮಧ್ಯೆ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ.
ಮೂಲತಃ ಕಲಬುರಗಿ (Kalaburagi) ಜಿಲ್ಲೆಯ ಜೇವರ್ಗಿ ತಾಲೂಕಿನ ಬಿರಾಳ ಗ್ರಾಮದ ದೇವೇಂದ್ರಪ್ಪ ಕಳೆದ 16 ವರ್ಷಗಳಿಂದ ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಇವರ ಅಗಲಿಕೆಗೆ ಯಾದಗಿರಿ ಎಸ್ಪಿ ಡಾ.ಸಿ.ಬಿ.ವೇದಮೂರ್ತಿ ಸೇರಿದಂತೆ ಪೊಲೀಸ್ ಇಲಾಖೆಯಿಂದ ಸಂತಾಪ ಸೂಚಿಸಲಾಗಿದೆ.