ಮಿಜೋರಾಂ : ಮ್ಯಾನ್ಮಾರ್ ಸೇನಾ ವಿಮಾನ ಪತನ – 8 ಮಂದಿಗೆ ಗಾಯ
ಮಿಜೋರಾಂ ಜನವರಿ 23: ಮ್ಯಾನ್ಮಾರ್ ಸೇನೆಗೆ ಸೇರಿದ ವಿಮಾನವೊಂದು ಪತನಗೊಂಡ ಘಟನೆ ಮಿಜೋರಾಂನ ರಾಜಧಾನಿ ಐಜ್ವಾಲ್‌ನ ಹೊರವಲಯದಲ್ಲಿರುವ ಲೆಂಗ್‌ಪುಯಿ ವಿಮಾನ ನಿಲ್ದಾಣದಲ್ಲಿ ನಡೆದಿದೆ. ಘಟನೆಯಲ್ಲಿ 8 ಮಂದಿ ಗಾಯಗೊಂಡಿದ್ದಾರೆ.
ಮಿಜೋರಾಂನಿಂದ ಮ್ಯಾನ್ಮಾರ್ ಸೈನಿಕರನ್ನು ವಾಪಸ್ ಕರೆದೊಯ್ಯಲು ಬಂದಿದ್ದ ವಿಮಾನ ರನ್‌ವೇನಲ್ಲಿ ಲ್ಯಾಂಡ್ ಆಗುವ ವೇಳೆ ಸ್ಕಿಡ್ ಆದ ಕಾರಣ ದುರಂತ ಸಂಭವಿಸಿದೆ. ಪೈಲಟ್ ಸೇರಿ ವಿಮಾನದಲ್ಲಿ 14 ಸಿಬ್ಬಂದಿಯಿದ್ದರು. ಅವರಲ್ಲಿ ಆರು ಜನ ಸುರಕ್ಷಿತವಾಗಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಮಿಜೋರಾಂ ಅಧಿಕಾರಿಗಳು ತಿಳಿಸಿದ್ದಾರೆ.
ಮ್ಯಾನ್ಮಾರ್‌ನ ದಕ್ಷಿಣ ಚಿನ್ ರಾಜ್ಯದ ಖಾನ್ಖಾ ಪರ್ವತದ ಮಿಲಿಟರಿ ನೆಲೆಯನ್ನು ಬಂಡುಕೋರರು ವಶಪಡಿಸಿಕೊಂಡ ಬಳಿಕ ಸೇನೆ ಮತ್ತು ಬಂಡುಕೋರರ ನಡುವೆ ಭಾರೀ ಗುಂಡಿನ ಚಕಮಕಿ ನಡೆದಿತ್ತು. ಹೀಗಾಗಿ ಕನಿಷ್ಠ 276 ಮ್ಯಾನ್ಮಾರ್ ಸೇನಾ ಸಿಬ್ಬಂದಿ ಜನವರಿ 17 ರಂದು ಮಿಜೋರಾಂಗೆ ಬಂದು ಆಶ್ರಯ ಪಡೆದಿದ್ದರು.
ಸೋಮವಾರ ಮ್ಯಾನ್ಮಾರ್ ಸೇನೆಗೆ ಸೇರಿದ ವಿಮಾನವು ಲೆಂಗ್‌ಪುಯಿ ವಿಮಾನ ನಿಲ್ದಾಣದಿಂದ ಎರಡು ಹಂತಗಳಲ್ಲಿ 184 ಸೈನಿಕರನ್ನು ಹಿಂದಕ್ಕೆ ಕರೆದೊಯ್ದಿದೆ. ಉಳಿದ 92 ಸೈನಿಕರನ್ನು ವಾಪಸ್ ಕರೆದುಕೊಂಡು ಹೋಗಲು ಮಂಗಳವಾರ ಬೆಳಗ್ಗೆ ಮತ್ತೆ ಬಂದಿದ್ದರು. ಈ ವೇಳೆ ಅಪಘಾತ ಸಂಭವಿಸಿದೆ ಎಂದು ಮೂಲಗಳು ತಿಳಿಸಿವೆ.
ಅಯೋಧ್ಯೆಯಲ್ಲಿ ರಾಮಲಲ್ಲಾನ ನೋಡಲು ಸಾಗರೋಪಾದಿಯಲ್ಲಿ ಬಂದ ಭಕ್ತರು…!!
ಅಯೋಧ್ಯೆ ಜನವರಿ 23: ಅಯೋಧ್ಯೆಯಲ್ಲಿ ಶ್ರೀರಾಮನ ಪ್ರಾಣಪ್ರತಿಷ್ಠೆ ಆಗಿ ಇನ್ನೂ ಒಂದು ದಿನ ಕಳೆಯುವ ಮೊದಲೇ ಇದೀಗ ಅಯೋಧ್ಯೆಯಲ್ಲಿ ಭಕ್ತರು ಸಾಗರೋಪಾದಿಯಲ್ಲಿ ಆಗಮಿಸಿದ್ದು, ಕೆಲವು ಸಮಯ ನೂಕು ನುಗ್ಗಲು ಆದ ಘಟನೆ ನಡೆದಿದೆ.
ಇಂದು ಸಾವಿರಾರು ಭಕ್ತರು ಬೆಳಗಿನ ಜಾವ 3 ಗಂಟೆಯಿಂದಲೇ ದೇವಾಲಯದ ಎದುರು ನಿಂತು ಕಾಯುತ್ತಿದ್ದಾರೆ. ಸಮಯ ಕಳೆಯುತ್ತಿದ್ದಂತೆ ಉದ್ರೇಕಗೊಂಡ ಭಕ್ತರು, ಪೊಲೀಸರು ಹಾಕಿದ್ದ ಹಗ್ಗವನ್ನು ತಳ್ಳಿ ರಾಮಮಂದಿರದ ಆವರಣದ ಒಳಕ್ಕೆ ನುಗ್ಗಿದ್ದಾರೆ.
ಭಕ್ತರು ಬಾಲರಾಮನ ದರ್ಶನಕ್ಕಾಗಿ ಎರಡು ಅವಧಿಯನ್ನು ನಿಗದಿಪಡಿಸಲಾಗಿದೆ. ಮೊದಲ ಅವಧಿಯು ಬೆಳಿಗ್ಗೆ 7ರಿಂದ 11.30ರವರೆಗೆ ಮತ್ತು ಎರಡನೇ ಅವಧಿಯು ಮಧ್ಯಾಹ್ನ 2 ಗಂಟೆಯಿಂದ ಸಂಜೆ 7 ಗಂಟೆವರೆಗೆ ನಿಗದಿಪಡಿಸಲಾಗಿದೆ.
ನಿತ್ಯ ಸಂಜೆ 6.30ಕ್ಕೆ ವಿಶೇಷ ಭಜನೆ, ಶೃಂಗಾರ ಆರತಿ ಕಾರ್ಯಕ್ರಮ ನಡೆಯಲಿದೆ. ಸಂಜೆ 7 ಗಂಟೆಗೆ ಬಾಲರಾಮನಿಗೆ ಆರತಿ ನೆರವೇರಲಿದ್ದು ಒಂದು ದಿನ ಮೊದಲೇ ಭಕ್ತರು ತಮ್ಮ ಸ್ಥಾನವನ್ನು ಕಾಯ್ದಿರಿಸಬೇಕು ಎಂದು ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಮಾಹಿತಿ ನೀಡಿದೆ.