Miss World 2024: ಭಾರತವನ್ನು ಪ್ರತಿನಿಧಿಸಲಿರುವ ಕರಾವಳಿ ಮೂಲದ ಸಿನಿ ಶೆಟ್ಟಿ..!
ಉಡುಪಿ: 71ನೇ ಆವೃತ್ತಿಯ ಮಿಸ್ ವರ್ಲ್ಡ್ 2024 ರಲ್ಲಿ ಭಾರತವನ್ನು ಪ್ರತಿನಿಧಿಸಲು ಉಡುಪಿ ಮೂಲದ 21 ವರ್ಷದ ಸಿನಿ ಶೆಟ್ಟಿ ಆಯ್ಕೆಯಾಗಿದ್ದಾರೆ.ಮುಂಬೈನಲ್ಲಿ ನಡೆದ ‘ಫೆಮಿನಾ ಮಿಸ್ ಇಂಡಿಯಾ ವರ್ಲ್ಡ್-2022’ ಕಾರ್ಯಕ್ರಮದಲ್ಲಿ ಸಿನಿ ಶೆಟ್ಟಿ ‘ಮಿಸ್ ಇಂಡಿಯಾ’ ಕಿರೀಟವನ್ನು ಅಲಂಕರಿಸಿದ ನಂತರ ಈ ಘೋಷಣೆ ಹೊರ ಬಿದ್ದಿದೆ.ಸಿನಿ ಶೆಟ್ಟಿ ಅಕೌಂಟಿಂಗ್ ಮತ್ತು ಫೈನಾನ್ಸ್ ನಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.
ವಿಶ್ವ ಸುಂದರಿ ಚಾಂಪಿಯನ್ ಶಿಪ್ ಮಾರ್ಚ್ 9 ರಂದು ಮುಂಬೈನ ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್ ನಲ್ಲಿ ನಡೆಯಲಿದೆ.
ಮಿಸ್ ವರ್ಲ್ಡ್ 2024 ಸ್ಪರ್ಧೆ ಭಾರತದಲ್ಲಿ ಸಾಕಷ್ಟು ಕುತೂಹಲ ಸೃಷ್ಟಿಸಿದೆ. ಅಷ್ಟೇ ಅಲ್ಲ ಕನ್ನಡಿಗರಿಗೆ ಸಂತಸವನ್ನೂ ತಂದೊಡ್ಡಿದೆ. ಯಾಕೆಂದರೆ ಈ ಭಾರಿ Miss World 2024ರಲ್ಲಿ ಭಾರತವನ್ನು ಪ್ರತಿನಿಧಿಸುತ್ತಿರುವ ಸುಂದರಿ ಬೇರ್ಯಾರೂ ಅಲ್ಲ, ತುಳುವ ಕುವರಿ ಸಿನಿ ಶೆಟ್ಟಿ. ಸಿನಿ ಶೆಟ್ಟಿ ಮಹಾರಾಷ್ಟ್ರದ ಮುಂಬೈನಲ್ಲಿ ಹುಟ್ಟಿ ಬೆಳೆದವರು. ಆದರೆ ಅವರ ಮೂಲ ಕರ್ನಾಟಕ. ಅಂದ್ರೆ ತುಳುನಾಡು. ಆಗಾಗ ಮಂಗಳೂರಿಗೆ ಬಂದು ದೈವಗಳಿಗೆ ತಲೆಬಾಗುವ ತುಳುವ ಪೊಣ್ಣು ಸಿನಿ ಶೆಟ್ಟಿ, ತಾನು ಬೇರೆ ರಾಜ್ಯದಲ್ಲಿ ಹುಟ್ಟಿ ಬೆಳೆದರೂ ತನ್ನ ಮಾತೃಭಾಷೆ ತುಳುವನ್ನು ಸರಾಗವಾಗಿ ಮಾತಾಡಿ ಭಾಷಾ ಪ್ರೇಮ ಮೆರೆಯುತ್ತಾರೆ.
ಮಾಡೆಲಿಂಗ್ ಅನ್ನು ವೃತ್ತಿಯನ್ನಾಗಿಸಿಕೊಂಡಿದ್ದರೂ ಸಹ, ಸಿನಿ ತನ್ನ ಜೀವನದಲ್ಲಿ ಸ್ವಲ್ಪ ಸಮಯದವರೆಗೆ ಮಾರ್ಕೆಟಿಂಗ್ ಸಂಸ್ಥೆಯಲ್ಲಿ ಕೆಲಸ ಮಾಡಿದ್ದರು.ನೃತ್ಯ ಅಂದರೆ ಪ್ರಾಣ ಎನ್ನುವ ಸಿನಿ ಶೆಟ್ಟಿ 14 ನೇ ವಯಸ್ಸಿನಲ್ಲಿ ಭರತನಾಟ್ಯವನ್ನು ಪ್ರದರ್ಶಿಸಿದರು. ತನ್ನ ವಿದ್ಯಾಭ್ಯಾಸದ ಜೊತೆಗೆ, ಬಾಲ್ಯದಿಂದಲೂ ನೃತ್ಯ ಅಕಾಡೆಮಿಯಲ್ಲಿ ತೊಡಗಿಸಿಕೊಂಡಿದ್ದರು.ನಾನು ಪ್ರಿಯಾಂಕಾ ಚೋಪ್ರಾ ಅವರಿಂದ ತುಂಬಾನೇ ಸ್ಫೂರ್ತಿ ಪಡೆದಿದ್ದೇನೆ ಎಂದು ಸಿನಿ ಶೆಟ್ಟಿ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಅವರ ಪ್ರಿಯಾಂಕಾ ಚೋಪ್ರಾ ಅವರ ಮುಕ್ತ ಆಲೋಚನೆಗಳಿಂದ ಸಿನಿ ತುಂಬಾ ಪ್ರಭಾವಿತಳಾಗಿದ್ದಾರೆ.
2022ರಲ್ಲಿ ನಡೆದ ಮಿಸ್ ಇಂಡಿಯಾ ಸ್ಪರ್ಧೆಯಲ್ಲಿ ಗೆದ್ದಿದ್ದ ತುಳುವ ಪೊಣ್ಣು ಸಿನಿ ಶೆಟ್ಟಿಗೆ ಮಂಗಳೂರಿನಲ್ಲಿ ಬೃಹತ್ ಸ್ವಾಗತ ನೀಡಲಾಗಿತ್ತು. ಈ ವೇಳೆ ಮಾಧ್ಯಮಗಳ ಜೊತೆ ತುಳು ಭಾಷೆಯಲ್ಲೇ ಮಾತಾಡಿ ಮಾತೃಭಾಷಾ ಪ್ರೇಮ ಮೆರೆದಿದ್ದರು.