15 ವರ್ಷದ ಬಾಲಕಿಗೆ ಮದುವೆ; ಏಳು ಮಂದಿ ವಿರುದ್ಧ ಪ್ರಕರಣ ದಾಖಲು
ಇಂದೋರ್: ಮಧ್ಯಪ್ರದೇಶದ ಇಂದೋರ್ ಜಿಲ್ಲೆಯಲ್ಲಿ 15 ವರ್ಷದ ಬಾಲಕಿಗೆ ವಿವಾಹ ಮಾಡಿದ ಆರೋಪದ ಮೇಲೆ ಏಳು ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ.
ಮೋವ್‌ನ ಬಾಲಕಿಯನ್ನು ಧಾರ್ ಜಿಲ್ಲೆಯ 24 ವರ್ಷದ ಯುವಕನೊಂದಿಗೆ ವಿವಾಹ ಮಾಡಿಕೊಟ್ಟಿರುವ ಬಗ್ಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಯೊಬ್ಬರು ನೀಡಿದ ದೂರಿನ ಆಧಾರದ ಮೇಲೆ, ತನಿಖೆ ಕೈಗೆತ್ತಿಕೊಳ್ಳಲಾಗಿದೆ ಎಂದು ಮನ್‌ಪುರ ಪೊಲೀಸ್ ಠಾಣೆಯ ಪ್ರಭಾರಿ ಅರುಣ್ ಸೋಲಂಕಿ ತಿಳಿಸಿದ್ದಾರೆ.
2023ರ ನವೆಂಬರ್ 29ರಂದು ಮನ್‌ಪುರದ ದೇವಸ್ಥಾನದಲ್ಲಿ ಮದುವೆ ನಡೆಯಿತು ಎಂದು ಹೇಳಲಾಗಿದೆ.
ಬಾಲಕಿಯ ವಯಸ್ಸಿಗೆ ಸಂಬಂಧಿಸಿದ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದ್ದು, ತನಿಖೆಯ ವೇಳೆ ಆಕೆ ಅಪ್ರಾಪ್ತೆ ಎಂಬುದು ದೃಢಪಟ್ಟಿದೆ. ಶನಿವಾರ ಸಂಜೆ ಬಾಲ್ಯ ವಿವಾಹ ನಿಷೇಧ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಈ ಪ್ರಕರಣದಲ್ಲಿ ಯುವತಿಯ ಪೋಷಕರು, ವರ ಮತ್ತು ಆತನ ತಂದೆ, ವಿವಾಹ ನೆರವೇರಿಸಿದ ಅರ್ಚಕ ಹಾಗೂ ಇತರ ಇಬ್ಬರನ್ನು ಆರೋಪಿಗಳೆಂದು ಹೆಸರಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಆರೋಪಿಗಳ ಹೇಳಿಕೆಗಳನ್ನು ದಾಖಲಿಸಿದ ನಂತರ ಪ್ರಕರಣದಲ್ಲಿ ಇತರ ಕಾಯ್ದೆಗಳ ನಿಬಂಧನೆಗಳನ್ನು ಸೇರಿಸಲಾಗುವುದು ಎಂದು ಸೋಲಂಕಿ ಹೇಳಿದರು.
ಅಪ್ರಾಪ್ತರಿಗೆ ವಿವಾಹ ಮಾಡಿದರೆ ಬಾಲ್ಯ ವಿವಾಹ ನಿಷೇಧ ಕಾಯ್ದೆ, 2006 ರ ಅಡಿಯಲ್ಲಿ ಎರಡು ವರ್ಷಗಳ ಕಠಿಣ ಜೈಲು ಶಿಕ್ಷೆ ಅಥವಾ 1 ಲಕ್ಷ ರೂ. ದಂಡ ಅಥವಾ ಎರಡನ್ನೂ ವಿಧಿಸುವ ಅವಕಾಶವಿರುತ್ತದೆ.