Manu Bhaker: ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಏರ್ ಪಿಸ್ತೂಲ್ ಶೂಟಿಂಗ್‌ನಲ್ಲಿ ಐತಿಹಾಸಿಕ ಪದಕ ಗೆದ್ದ ಮೊದಲ ಭಾರತೀಯೆ ಮನು ಭಾಕರ್!
Manu Bhaker: ಭಾರತ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಶೂಟಿಂಗ್ ಮೂಲಕ ಪದಕದ ಖಾತೆ ತೆರೆದಿದೆ. ಮನು ಭಾಕರ್ (Manu Bhaker) ಕಂಚಿನ ಪದಕ ಜಯಿಸಿದ್ದಾರೆ. ಈ ಮೂಲಕ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಅನುಭವಿಸಿದ್ದ ನಿರಾಸೆ ಮರೆಯುವಲ್ಲಿ ಯಶಸ್ವಿಯಾಗಿದ್ದಾರೆ
ಬಹುನಿರೀಕ್ಷಿತ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತದ ಪದಕದ ಖಾತೆ ತೆರೆದಿದೆ. ಮಹಿಳೆಯರ 10 ಮೀಟರ್ ಏರ್ ಪಿಸ್ತೂಲ್ ಫೈನಲ್‌ನಲ್ಲಿ 22 ವರ್ಷದ ಮನು ಭಾಕರ್ ಕಂಚಿನ ಪದಕ ಜಯಿಸುವ ಮೂಲಕ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಒಲಿಂಪಿಕ್ಸ್ ಇತಿಹಾಸದಲ್ಲೇ ಪದಕ ಜಯಿಸಿದ ಮೊದಲ ಮಹಿಳಾ ಶೂಟರ್ ಎನ್ನುವ ಹಿರಿಮೆಗೆ ಮನು ಭಾಕರ್ ಪಾತ್ರರಾಗಿದ್ದಾರೆ.
ವಿಶೇಷವೆಂದರೆ ಕಳೆದ ಒಲಂಪಿಕ್ಸ್‌ನಲ್ಲಿ ಮನು ಭಾಕರ್ ತಮ್ಮ ಪಿಸ್ತೂಲಿನಲ್ಲಿ ಕಂಡುಬಂದ ದೋಷದಿಂದಾಗಿ ಪದಕದ ರೇಸ್ನಿಂದ ಹೊರಬಿದ್ದಿದ್ದರು. ಆದರೆ ಈ ಬಾರಿ ಅವರು ಕೋಟ್ಯಂತರ ಭಾರತೀಯರ ಕನಸನ್ನು ನನಸಾಗಿಸಿದ್ದಾರೆ.
ಹರಿಯಾಣದ ಜಜ್ಜಾರ್‌ನಲ್ಲಿ ಜನಿಸಿದ ಮನು ಭಾಕರ್ ಬಾಲ್ಯದಿಂದಲೂ ಕ್ರೀಡೆಯಲ್ಲಿ ಆಸಕ್ತಿ ಹೊಂದಿದ್ದರು. ಟೆನ್ನಿಸ್‌ನಿಂದ ಹಿಡಿದು ಸ್ಕೇಟಿಂಗ್ ಮತ್ತು ಬಾಕ್ಸಿಂಗ್‌ವರೆಗಿನ ಸ್ಪರ್ಧೆಗಳಲ್ಲಿ ಆಗಾಗ್ಗೆ ಭಾಗವಹಿಸುತ್ತಿದ್ದರು. ಇದಲ್ಲದೇ ‘ಥಾನ್ ತಾ’ ಎಂಬ ಸಮರ ಕಲೆಯಲ್ಲೂ ಭಾಗವಹಿಸಿ ರಾಷ್ಟ್ರಮಟ್ಟದಲ್ಲಿ ಪದಕ ಗೆದ್ದಿದ್ದಾರೆ.
ಮಹಿಳೆಯರ 10 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಭಾರತದ ಶೂಟರ್ ಮನು ಭಾಕರ್ ಕಂಚಿನ ಪದಕಕ್ಕೆ ಕೊರಳ್ಳೊಡಿದ್ದಾರೆ. ಈ ಮೂಲಕ ಶೂಟಿಂಗ್‌ನಲ್ಲಿ ಭಾರತಕ್ಕೆ ಒಲಿಂಪಿಕ್ ಪದಕ ಗೆದ್ದ ಮೊದಲ ಭಾರತೀಯ ಮಹಿಳಾ ಶೂಟರ್ ಎಂಬ ವಿಶ್ವ ದಾಖಲೆ ನಿರ್ಮಿಸಿದ್ದಾರೆ.
ಕಳೆದ ಒಲಿಂಪಿಕ್ಸ್‌ನಲ್ಲಿ ಅಂದರೆ 2020 ರಲ್ಲಿ ನಡೆದಿದ್ದ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಯಾವುದೇ ವಿಭಾಗದಲ್ಲೂ ಅರ್ಹತೆ ಪಡೆಯಲು ವಿಫಲರಾಗಿದ್ದ 22 ವರ್ಷದ ಮನು ಭಾಕರ್ ಅವರಿಗೆ ಇದು ಒಲಿಂಪಿಕ್ಸ್‌ನಲ್ಲಿ ಮೊದಲ ಪದಕವಾಗಿದೆ.
ಮಹಿಳೆಯರ 10 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಯ ಫೈನಲ್‌ನಲ್ಲಿ 221.7 ಪಾಯಿಂಟ್‌ಗಳನ್ನು ಸಂಪಾಧಿಸಿದ ಮನು ಭಾಕರ್ ಮೂರನೇ ಸ್ಥಾನ ಪಡೆದು ಕಂಚಿನ ಪದಕಕ್ಕೆ ಮುತ್ತಿಕ್ಕಿದರೆ, ಕೊರಿಯಾದ ಓಹ್ ಯೆ ಜಿನ್ 243.2 ಅಂಕಗಳೊಂದಿಗೆ ಮೊದಲ ಸ್ಥಾನ ಪಡೆದು ಚಿನ್ನದ ಪದಕಕ್ಕೆ ಮುತ್ತಿಟ್ಟರು. ಉಳಿದಂತೆ 241.3 ಅಂಕ ಗಳಿಸಿದ ಕೊರಿಯಾದ ಮತ್ತೊಬ್ಬ ಸ್ಪರ್ಧಿ ಕೊರಿಯಾದ ಕಿಮ್ ಯೆಜಿ ಬೆಳ್ಳಿ ಪದಕವನ್ನು ತನ್ನದಾಗಿಸಿಕೊಂಡರು.
ಬಾಲ್ಯದಿಂದಲೂ ಕ್ರೀಡೆಯಲ್ಲಿ ಆಸಕ್ತಿ
ಮನು ಭಾಕರ್ 14 ವರ್ಷದವರಿದ್ದಾಗ, ಶೂಟಿಂಗ್‌ನಲ್ಲಿ ತನ್ನ ವೃತ್ತಿಜೀವನವನ್ನು ಆರಂಭಿಸಲು ನಿರ್ಧರಿಸಿದರು. ಆ ವೇಳೆಗೆ 2016 ರ ರಿಯೊ ಒಲಿಂಪಿಕ್ಸ್ ಕೂಡ ಮುಗಿದಿತ್ತು. ಹೀಗಾಗಿ ಶೂಟಿಂಗ್‌ನಲ್ಲಿ ವೃತ್ತಿಜೀವನ ಕಟ್ಟಿಕ್ಕೊಳ್ಳಲು ಮುಂದಾದ ಮನು, ಅಭ್ಯಾಸ ಮಾಡಲು ಪಿಸ್ತೂಲ್ ತರುವಂತೆ ತಂದೆ ರಾಮ್ ಕಿಶನ್ ಭಾಕರ್ ಬಳಿ ಮನವಿ ಮಾಡಿದರು. ಮಗಳ ಆಸಕ್ತಿ ನೋಡಿದ ಅವರ ತಂದೆ ಕೂಡ ಮಗಳ ಕನಸಿಗೆ ನಿರೇರೆದರು.