manipur: ಮಣಿಪುರದಲ್ಲಿ ಮತ್ತೆ ಗುಂಪು ಘರ್ಷಣೆ ; 15 ಮನೆಗಳಿಗೆ ಬೆಂಕಿ - ಓರ್ವ ವ್ಯಕ್ತಿಗೆ ಗುಂಡು ಹಾರಿಸಿದ ದುಷ್ಕರ್ಮಿಗಳು!
ಇಂಫಾಲ: ಮಣಿಪುರದ ಇಂಫಾಲ ಪಶ್ಚಿಮ ಜಿಲ್ಲೆಯಲ್ಲಿ ಹೊಸ ಹಿಂಸಾಚಾರ ಭುಗಿಲೆದ್ದಿದ್ದು, ಅಲ್ಲಿ 15 ಮನೆಗಳಿಗೆ ಬೆಂಕಿ ಹಚ್ಚಲಾಗಿದೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.ಶನಿವಾರ ಸಂಜೆ ಲಾಂಗೋಲ್ ಗೇಮ್ಸ್ ಗ್ರಾಮದಲ್ಲಿ ಗುಂಪು ಘರ್ಷಣೆ ನಡೆದಿದ್ದರಿಂದ ಈ ಘಟನೆ ಸಂಭವಿಸಿದೆ ಎಂದು ಅವರು ಹೇಳಿದ್ದಾರೆ.
ಗುಂಪನ್ನು ಚದುರಿಸಲು ಮತ್ತು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಭದ್ರತಾ ಸಿಬ್ಬಂದಿ ಹಲವಾರು ಸುತ್ತಿನ ಅಶ್ರುವಾಯು ಪ್ರಯೋಗಿಸಿದ್ದಾರೆ ಎಂದು ಅವರು ಹೇಳಿದರು.ಹಿಂಸಾಚಾರದ ವೇಳೆ 45 ವರ್ಷದ ವ್ಯಕ್ತಿಯೊಬ್ಬರಿಗೆ ಗುಂಡು ಹಾರಿಸಲಾಗಿದೆ. ಎಡತೊಡೆಯ ಮೇಲೆ ಗುಂಡಿನ ಗಾಯಗಳಾಗಿದ್ದು, ಅವರನ್ನು ಪ್ರಾದೇಶಿಕ ವೈದ್ಯಕೀಯ ವಿಜ್ಞಾನ ಸಂಸ್ಥೆ (ಆರ್‌ಐಎಂಎಸ್) ಗೆ ದಾಖಲಿಸಲಾಗಿದೆ. ಸದ್ಯ ಅವರು ಅಪಾಯದಿಂದ ಪಾರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಭಾನುವಾರ ಬೆಳಿಗ್ಗೆ ಪರಿಸ್ಥಿತಿ ಸುಧಾರಿಸಿದೆ. ಆದರೆ, ನಿರ್ಬಂಧಗಳು ಜಾರಿಯಲ್ಲಿವೆ ಎಂದು ಅವರು ಹೇಳಿದರು.
ಇಂಫಾಲ್ ಪೂರ್ವ ಜಿಲ್ಲೆಯ ಚೆಕನ್ ಪ್ರದೇಶದಲ್ಲೂ ಹೊಸ ಹಿಂಸಾಚಾರ ವರದಿಯಾಗಿದೆ. ಅಲ್ಲಿ ಶನಿವಾರ ದೊಡ್ಡ ವಾಣಿಜ್ಯ ಮಳಿಗೆಗೆ ಬೆಂಕಿ ಹಚ್ಚಲಾಗಿದೆ. ಅಕ್ಕಪಕ್ಕದ ಮೂರು ಮನೆಗಳಿಗೂ ಬೆಂಕಿ ಹಚ್ಚಲಾಗಿದ್ದು, ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.27 ವಿಧಾನಸಭಾ ಕ್ಷೇತ್ರಗಳ ಸಮನ್ವಯ ಸಮಿತಿಯು ಕರೆ ನೀಡಿದ್ದ 24 ಗಂಟೆಗಳ ಸಾರ್ವತ್ರಿಕ ಮುಷ್ಕರದ ನಡುವೆಯೇ ಹಿಂಸಾಚಾರದ ಘಟನೆಗಳು ವರದಿಯಾಗಿದ್ದು, ಶನಿವಾರ ಇಂಫಾಲ್ ಕಣಿವೆಯಲ್ಲಿ ಸಾಮಾನ್ಯ ಜನ ಜೀವನದ ಮೇಲೆ ಪರಿಣಾಮ ಬೀರಿದೆ.
ಮೇ ತಿಂಗಳಲ್ಲಿ ಮಣಿಪುರದಲ್ಲಿ ಜನಾಂಗೀಯ ಘರ್ಷಣೆಗಳು ಭುಗಿಲೆದ್ದವು ಮತ್ತು ಕಳೆದ ಮೂರು ತಿಂಗಳಿನಿಂದ 160ಕ್ಕೂ ಹೆಚ್ಚು ಜೀವಗಳನ್ನು ಬಲಿ ಪಡೆದಿವೆ.
ಮಣಿಪುರದಲ್ಲಿ ಮುಂದುವರೆದ ಹಿಂಸಾಚಾರ: ಕಳೆದ 24 ಗಂಟೆಗಳಲ್ಲಿ 6 ಮಂದಿ ಸಾವು:
ಮಣಿಪುರ ಹಿಂಸಾಚಾರ(Manipur Violence) ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆಯುತ್ತಿದ್ದು, ಕಳೆದ 24 ಗಂಟೆಗಳಲ್ಲಿ 6 ಮಂದಿ ಮೃತಪಟ್ಟಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ತಂದೆ-ಮಗ ಸೇರಿದಂತೆ ಆರು ಮಂದಿ ಸಾವನ್ನಪ್ಪಿದ್ದಾರೆ. ಶನಿವಾರ ಮುಂಜಾನೆಯಿಂದ ಬಿಷ್ಣುಪುರ್-ಚುರಾಚಂದ್‌ಪುರ ಗಡಿ ಪ್ರದೇಶಗಳಲ್ಲಿ ಹಗಲಿಡೀ ನಡೆದ ದಾಳಿಗಳಲ್ಲಿ ಸುಮಾರು 16 ಜನರು ಗಾಯಗೊಂಡಿದ್ದಾರೆ .
ಸೇನೆಯು ಈ ಪ್ರದೇಶದಲ್ಲಿ ಪ್ರಮುಖ ಕೂಂಬಿಂಗ್ ಕಾರ್ಯಾಚರಣೆಯನ್ನು ಪ್ರಾರಂಭಿಸಿದೆ. ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿರುವ ಹಿನ್ನೆಲೆಯಲ್ಲಿ ಇಂಫಾಲ್ ಪೂರ್ವ ಮತ್ತು ಇಂಫಾಲ್ ಪಶ್ಚಿಮ ಜಿಲ್ಲೆಗಳಲ್ಲಿ ಇಂದು ಯಾವುದೇ ಕರ್ಫ್ಯೂ ಸಡಿಲಿಕೆ ಇರುವುದಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಶನಿವಾರ ಮಣಿಪುರದಲ್ಲಿ ಹದಿನೈದು ದಿನಗಳಲ್ಲಿ ಅತ್ಯಂತ ಮಾರಣಾಂತಿಕ ದಿನವಾಗಿದೆ.
ಬಿಷ್ಣುಪುರ್ ಜಿಲ್ಲೆಯ ತೆರಾಖೋಂಗ್ಸಾಂಗ್ಬಿಯಲ್ಲಿ ಏಕಕಾಲದಲ್ಲಿ ನಡೆದ ದಾಳಿಯಲ್ಲಿ ಒಬ್ಬ ವ್ಯಕ್ತಿ ಸಾವನ್ನಪ್ಪಿದ್ದು, ಪೊಲೀಸ್ ಕಮಾಂಡೋ ಸೇರಿದಂತೆ ಮೂವರು ಗುಂಡೇಟಿನಿಂದ ಗಾಯಗೊಂಡಿದ್ದಾರೆ.