ಮಂಗಳೂರು : ಉದ್ಯೋಗಕ್ಕೆಂದು 8 ತಿಂಗಳ ಹಿಂದೆ ಬಂದಿದ್ದ ಯುವತಿ ನಾಪತ್ತೆ ; ತಂದೆಯಿಂದ ದೂರು!
ಮಂಗಳೂರು, ಆ 16 : ಉದ್ಯೋಗಕ್ಕೆಂದು ಮಂಗಳೂರಿಗೆ ಬಂದಿದ್ದ ಯುವತಿ ನಾಪತ್ತೆಯಾಗಿರುವ ಬಗ್ಗೆ ಆಕೆಯ ತಂದೆ ಕದ್ರಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಹೊನ್ನಾವರದ ಸೋನಿಯಾ ರೋಡ್ರಿಗಸ್ (23) ನಾಪತ್ತೆಯಾಗಿರುವ ಯುವತಿಯಾಗಿದ್ದಾಳೆ.
ಈಕೆ ಸುಮಾರು 8 ತಿಂಗಳ ಹಿಂದೆ ಉದ್ಯೋಗಕ್ಕಾಗಿ ಮಂಗಳೂರಿಗೆ ಬಂದಿದ್ದು, ಸೋನಿಯಾ ಬೆಂದೂರಿನ ಅಪಾರ್ಟ್‌ಮೆಂಟ್‌ವೊಂದರಲ್ಲಿ ವಾಸವಿರುವುದಾಗಿ ತಿಳಿಸಿದ್ದಳು.
ಇತ್ತೀಚೆಗೆ ಕರೆಗಳನ್ನು ಸ್ವೀಕರಿಸದ ಹಿನ್ನೆಲೆಯಲ್ಲಿ ಅಪಾರ್ಟ್‌ಮೆಂಟ್‌ಗೆ ಬಂದು ವಿಚಾರಿಸಿದಾಗ ಆಕೆಯ ಬಗ್ಗೆ ಯಾವುದೇ ಮಾಹಿತಿ ಇಲ್ಲವೆಂದು ಅಪಾರ್ಟ್ ಮೆಂಟ್‌ನ ನಿವಾಸಿಗಳು ಹೇಳಿದ್ದಾರೆ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ. ಈ ಕುರಿತು ನಾಪತ್ತೆ ಪ್ರಕರಣ ದಾಖಲಾಗಿದೆ.
ಉಡುಪಿ: ಪ್ರವಾಸಿ ತಾಣಗಳ ಭೇಟಿ – ಆಗಸ್ಟ್ ಅಂತ್ಯದವರೆಗೆ ನಿರ್ಬಂಧ ಮುಂದುವರಿಕೆ
ಉಡುಪಿ, ಆ 16 : ಮಳೆ ಹಿನ್ನೆಲೆಯಲ್ಲಿ ಪ್ರವಾಸಿ ತಾಣಗಳಲ್ಲಿ ಅಗತ್ಯ ಮುನ್ನೆಚ್ಚರಿಕೆ ತೆಗೆದುಕೊಂಡಿದ್ದ ಜಿಲ್ಲಾಡಳಿತ, ಜಲಪಾತ ವೀಕ್ಷಣೆ, ಬೀಚ್ ಗೆ ಪ್ರವಾಸಿಗರು ಹಾಗೂ ಸಾರ್ವಜನಿಕರ ಭೇಟಿ ನೀಡುವುದನ್ನು ನಿರ್ಬಂಧ ಹೇರಿರುವುದನ್ನು ಆಗಸ್ಟ್ ಅಂತ್ಯದವರೆಗೂ ವಿಸ್ತರಿಸಿದೆ.
ಕೊಲ್ಲೂರು ಸಮೀಪದ ಅರಶಿನ ಗುಂಡಿ ಜಲಪಾತದಲ್ಲಿ ಯುವಕನೋರ್ವ ನೀರುಪಾಲಾದ ದುರ್ಘಟನೆಯ ಬಳಿಕ ಬೀಚ್ ಸಹಿತ ಜಲಪಾತ ಹಾಗೂ ಮಳೆಗಾಲದಲ್ಲಿ ಅಪಾಯಕಾರಿಯಾಗಿ ಪರಿಣಮಿಸುವ ಪ್ರವಾಸಿ ತಾಣಗಳಿಗೆ ಪ್ರವಾಸಿಗರು ಮತ್ತು ಸಾರ್ವಜನಿಕರ ಪ್ರವೇಶಕ್ಕೆ ಜಿಲ್ಲಾಡಳಿತ ನಿರ್ಬಂಧ ಹೇರಿತ್ತು.
ಪ್ರಸ್ತುತ ಜಿಲ್ಲೆಯಲ್ಲಿ ಮಳೆ ಕಡಿಮೆಯಾದರೂ ನಿರ್ಬಂಧವನ್ನು ಹಿಂಪಡೆದಿಲ್ಲ. ಇದನ್ನು ಈ ತಿಂಗಳ ಅಂತ್ಯದವರೆಗೂ ಮುಂದುವರಿಸಲಾಗುವುದು ಎಂದು ಜಿಲ್ಲಾಡಳಿತ ತಿಳಿಸಿದೆ.
ಮಳೆಗಾಲವಾದ್ದರಿಂದ ಯಾವಾಗ ಬೇಕಾದರೂ ಮಳೆಯ ಪ್ರಮಾಣದಲ್ಲಿ ಏರಿಕೆಯಾಗಬಹುದು. ನಿರ್ಬಂಧ ವಾಪಸ್ ಪಡೆದ ಅನಂತರದಲ್ಲಿ ಪುನಃ ಪರಿಸ್ಥಿತಿ ನಿಯಂತ್ರಿಸುವುದು ತಕ್ಷಣಕ್ಕೆ ಕಷ್ಟವಾಗಬಹುದು. ಹೀಗಾಗಿ ತಿಂಗಳಾಂತ್ಯದವರೆಗೆ ನಿರ್ಬಂಧ ಮುಂದುವರಿಸಿ ಬಳಿಕ ವಿವಿಧ ಇಲಾಖೆಯ ಅಧಿಕಾರಿಗಳ ಸಭೆ ನಡೆಸಿ ಆನಂತರ ತೆರವುಗೊಳಿಸುವ ಬಗ್ಗೆ ತೀರ್ಮಾನಿಸಲಿದ್ದೇವೆ ಎಂದು ಜಿಲ್ಲಾಧಿಕಾರಿ ಡಾ| ವಿದ್ಯಾ ತಿಳಿಸಿದ್ದಾರೆ.