ಮಂಗಳೂರು: ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿ ಬಂಧನ..!
ಮಂಗಳೂರು: ಜಿಲ್ಲೆಯಲ್ಲಿ ಸಿಸಿಬಿ ಪೊಲೀಸರು (CCB Police) ಕಾರ್ಯಾಚರಣೆ ನಡೆಸಿ ಗಾಂಜಾ (Ganja) ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಬಂಧಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರು ತಾಲೂಕಿನ ಕುಡುಪು ಪೆದಮಲೆ ಗ್ರಾಮದ ನಿವಾಸಿ ನಿಶಾಂತ್ ಶೆಟ್ಟಿ ಬಂಧಿತ ಆರೋಪಿ. ಈತನಿಂದ 1.50 ಲಕ್ಷ ಮೌಲ್ಯದ 6 ಕೆ.ಜಿ ಗ್ರಾಂ ಗಾಂಜಾ ವಶಕ್ಕೆ ಪಡೆಯಲಾಗಿದೆ.
ಆರೋಪಿ ಆಂಧ್ರಪ್ರದೇಶದ ವಿಶಾಖಪಟ್ಟಣದಿಂದ ಗಾಂಜಾ ಖರೀದಿಸಿ ತಂದು ಸಣ್ಣ ಸಣ್ಣ ಪ್ಯಾಕೆಟ್ ಮಾಡಿಕೊಂಡು ಮಂಗಳೂರು ನಗರದಲ್ಲಿ ಮಾರಾಟ ಮಾಡುತ್ತಿದ್ದ. ಈತ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ಗಾಂಜಾ ಮಾರಾಟ ಮಾಡುತ್ತಿದ್ದ. ಉಳ್ಳಾಲ ತಾಲೂಕಿನ ತೊಕ್ಕೊಟ್ಟು ಒಳಪೇಟೆಯಲ್ಲಿ ಗೂಡ್ಸ್ ಟೆಂಪೋದಲ್ಲಿ ಗಾಂಜಾ ಸಾಗಿಸುವಾಗ ಸಿಸಿಬಿ ಬಲೆಗೆ ಬಿದ್ದಿದ್ದಾನೆ. ಖಚಿತ ಮಾಹಿತಿ ಮೇರೆಗೆ ಸಿಸಿಬಿ ಪೊಲೀಸರು ದಾಳಿ ನಡೆಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತನಿಂದ ಒಟ್ಟು 9.11 ಲಕ್ಷ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಯ ವಿರುದ್ಧ ಈಗಾಗಲೇ ಹಲ್ಲೆ, ಕಳ್ಳತನ ಪ್ರಕರಣ ಸೇರಿದಂತೆ ಒಟ್ಟು 10ಕ್ಕೂ ಹೆಚ್ಚು ಪ್ರಕರಣಗಳಿರುವುದು ಪತ್ತೆಯಾಗಿದೆ.
ಕೂಜಿಮಲೆಯಲ್ಲಿ ಮತ್ತೆ ನಕ್ಸಲ್ ಸಂಚಾರದ ಶಂಕೆ-ಎಎನ್‌ಎಫ್‌ನಿಂದ ಶೋಧಕಾರ್ಯ ಚುರುಕು!
ಸುಳ್ಯ: ದಕ್ಷಿಣ ಕನ್ನಡ ಹಾಗೂ ಕೊಡಗು ಗಡಿಭಾಗದ ಕೂಜಿಮಲೆ ಎಸ್ಟೇಟ್ ಪ್ರದೇಶದಲ್ಲಿ ಬುಧವಾರ ಅಪರಿಚಿತ ಮಹಿಳೆ ಓಡಾಡಿದ್ದು ಆಕೆ ನಕ್ಸಲ್ ಎಂಬ ಶಂಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಶೋಧಕಾರ್ಯ ನಡೆಸಲಾಗಿದೆ.
ಸುಳ್ಯ ತಾಲೂಕಿನ ಗಡಿಗ್ರಾಮ ಕಲ್ಮಕಾರು ಸಮೀಪದ ಕೂಜಿಮಲೆ ಎಸ್ಟೇಟ್ ಕೊಡಗು ಜಿಲ್ಲೆಯ ವ್ಯಾಪ್ತಿಯಲ್ಲಿ ಬುಧವಾರ ಮಧ್ಯಾಹ್ನ 12ರ ಬಳಿಕ ಅಪರಿಚಿತ ಮಹಿಳೆ ಎಸ್ಟೇಟ್ ನ ರಬ್ಬರ್ ತೋಟದಲ್ಲಿ ಸಂಚರಿಸುತ್ತಿರುವುದನ್ನು ಸಿಬ್ಬಂದಿ ನೋಡಿದ್ದು, ಬಳಿಕ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ.
ಈ ಹಿನ್ನಲೆ ನಕ್ಸಲ್ ನಿಗ್ರಹ ಪಡೆ ಆಗಮಿಸಿ ಶೋಧ ನಡೆಸಿದರು ಯಾವುದೇ ಸುಳಿವು ಸಿಕ್ಕಿಲ್ಲ ಎಂದು ಹೇಳಲಾಗಿದೆ. ಶಂಕಿತ ಮಹಿಳೆ ರಬ್ಬರ್ ತೋಟದಿಂದ ಅರಣ್ಯ ಭಾಗದತ್ತ ತೆರಳಿದ್ದಾಳೆ ಎನ್ನಲಾಗಿದೆ.
ನಕ್ಸಲ್ ನಿಗ್ರಹ ಪಡೆ, ಐನಕಿದು ಕೂಜಿಮಲೆ ಆಸು ಪಾಸಿನಲ್ಲೇ ಶೋಧ ಕಾರ್ಯ ನಡೆಸುತ್ತಿದೆ ಎನ್ನಲಾಗಿದ್ದು, ಶಂಕಿತ ಮಹಿಳೆ ಕಾಣಿಸಿಕೊಂಡ ಮಾಹಿತಿ ಲಭ್ಯವಾದ ಕೂಡಲೇ ಎ ಎನ್ ಎಫ್ ತಂಡ ಎಸ್ಟೇಟ್ ಪ್ರದೇಶಕ್ಕೆ ತೆರಳಿ ಶೋಧ ಕಾರ್ಯ ತೊಡಗಿದೆ.