ಮಂಗಳೂರು: ಭೀಕರ ರಸ್ತೆ ಅಪಘಾತ, ಕುದುರೆಮುಖ ಕಂಪೆನಿಯ ಉದ್ಯೋಗಿ ಮೃತ್ಯು
ಮಂಗಳೂರು : ಮಂಗಳೂರು ನಗರದ ಕಾವೂರಿನಲ್ಲಿ ಮಂಗಳವಾರ ರಾತ್ರಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಕುದುರೆಮುಖ ಕಂಪೆನಿಯ ಉದ್ಯೋಗಿ ದಾರುಣ ಅಂತ್ಯ ಕಂಡಿದ್ದಾರೆ.
ಶೇಖರಪ್ಪ ಮೃತ ದುರ್ದೈವಿಯಾಗಿದ್ದಾರೆ. ಕುದುರೆ ಮುಖ ಕಂಪೆನಿಯ ಮಂಗಳೂರು ಪೋರ್ಟ್ ಫೆಸಿಲಿಟೀಸ್ ವಿಭಾಗಲ್ಲಿ ಕಾರ್ಯನಿರ್ವಹಿಸುತ್ತಿದ್ದ ಶೇಖರಪ್ಪ ನವರು ಮಂಗಳವಾರ ರಾತ್ರಿ ಸುಮಾರು 11 ಗಂಟೆ ಹೊತ್ತಿಗೆ ತಮ್ಮ ಕ್ವಾಟರ್ಸ್ ಕಂಪೌಂಡ್ ಗೆ ಹೋಗಲು ಡಿವೈಡರ್ ಕಡೆಯಿಂದ ಬೈಕ್ ತಿರುಗಿಸಿದಾಗ ಬೋಂದೆಲ್‌ನಿಂದ ಕಾವೂರು ಕಡೆಗೆ ಬರುತ್ತಿದ್ದ ಕಾರೋಂದು ವೇಗವಾಗಿ ಬಂದು ಇವರ ಬೈಕಿಗೆ ಢಿಕ್ಕಿ ಹೊಡೆದಿದೆ.
ರಸ್ತೆಗೆ ಎಸೆಯಲ್ಪಟ್ಟು ಗಂಭೀರ ಗಾಯಗೊಂಡಿದ್ದ ಶೇಖರಪ್ಪರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ರೂ ಫಲಕೊಡದೆ ಸಾವನ್ನಪ್ಪಿದ್ದಾರೆ. ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಉಳ್ಳಾಲ – ಫ್ಯಾನ್ ಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಯುವಕ
ಉಳ್ಳಾಲ : ಯುವಕನೊಬ್ಬ ಫ್ಯಾನ್ ಗೆ ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ಘಟನೆ ಕೋಟೆಕಾರು ಬಳಿಯ ಮಾಡೂರಿನಲ್ಲಿ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡವರನ್ನು ಮಾಡೂರು ಅಯ್ಯಪ್ಪ ಭಜನಾ ಮಂದಿರ ಸಮೀಪ ನಿವಾಸಿ ನಾಗರಾಜ್ ಶೆಟ್ಟಿ (32) ಎಂದು ಗುರುತಿಸಲಾಗಿದೆ.
ಕೋಟೆಕಾರು ಬೀರಿಯಲ್ಲಿರುವ ಸಂಸ್ಥೆಯೊಂದರಲ್ಲಿ ಉದ್ಯೋಗದಲ್ಲಿದ್ದ ನಾಗರಾಜ್ ನಿನ್ನೆ ಕೆಲಸಕ್ಕೆ ತೆರಳಿ ರಾತ್ರಿ ಕೋಣೆಯಲ್ಲಿ ಮಲಗಿದವರು ಕೃತ್ಯ ಎಸಗಿದ್ದಾರೆ. ಚೆಂಬುಗುಡ್ಡೆ ಸೇವಂತಿಗುಡ್ಡೆಯಲ್ಲಿ ನೆಲೆಸಿದ್ದ ಕುಟುಂಬ ಐದು ವರ್ಷಗಳ ಹಿಂದಷ್ಟೇ ಮಾಡೂರು ಸಮೀಪ ಮನೆಯನ್ನು ಖರೀದಿಸಿ ನೆಲೆಸಿದ್ದರು. ಕಿರಿಯ ಸಹೋದರನಿಗೂ ವಿವಾಹ ನಿಶ್ಚಯವಾಗಿದ್ದು, ನಾಗರಾಜ್ ಮಾತ್ರ ವಿವಾಹವಾಗುವುದಿಲ್ಲ ಎಂದು ಉಳಿದಿದ್ದರು. ಆರ್ಥಿಕ ಅಡಚಣೆ ಕೃತ್ಯಕ್ಕೆ ಕಾರಣವಾಗಿರಬಹುದು ಅನ್ನುವ ಸಂಶಯ ವ್ಯಕ್ತಪಡಿಸಲಾಗಿದೆ. ಉಳ್ಳಾಲ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಮೃತದೇಹವನ್ನ ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದಿಲ್ಲ. ಮೃತ ನಾಗರಾಜ್ ತಾಯಿ, ಸಹೋದರ, ಸಹೋದರಿಯನ್ನ ಅಗಲಿದ್ದಾನೆ.