ಕಳೆದ ಬಾರಿ ಬಂಟ್ವಾಳದ ಟಿಕೆಟ್ ಕೈ ಚೆಲ್ಲಿದ್ದ ಪದ್ಮರಾಜ್ ಗೆ ಈ ಬಾರಿ ಮಂಗಳೂರು ಲೋಕಸಭೆ ಟಿಕೆಟ್ ಘೋಷಣೆ
ಮಂಗಳೂರು: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಂಟ್ವಾಳ ವಿಧಾನಸಭಾ ಕ್ಷೇತ್ರದ ಟಿಕೆಟ್ ಕೈ ಚೆಲ್ಲಿದ್ದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್ ರವರಿಗೆ
ಕಾಂಗ್ರೆಸ್ ಹೈಕಮಾಂಡ್ ಈ ಬಾರಿ ಮಂಗಳೂರು ಲೋಕಸಭೆಯ ಟಿಕೆಟ್ ಅನ್ನು ಘೋಷಿಸಿದೆ.
ಈ ಬಾರಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಪದ್ಮರಾಜ್ ಬಿಜೆಪಿಯ ಅಭ್ಯರ್ಥಿ ಬ್ರಿಜೇಶ್ ಚೌಟ ಅವರನ್ನು ಎದುರಿಸಲಿದ್ದಾರೆ.
ಎರಡು ಯುವ ಅಭ್ಯರ್ಥಿಗಳಾಗಿ ಈ ಬಾರಿ ಮಂಗಳೂರು ಲೋಕಸಭೆ ಕುತೂಹಲ ಕೆರಳಿಸಿದೆ.
ಜನಾರ್ದನ ಪೂಜಾರಿಯವರ ಪ್ರೀತಿಯ ಶಿಷ್ಯನಾಗಿರುವ ಪದ್ಮರಾಜ್ ಅವರು ವೃತ್ತಿಯಲ್ಲಿ ವಕೀಲರಾಗಿದ್ದು ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ಮತ್ತು ರಾಜಕೀಯ ರಂಗದಲ್ಲಿ ತೊಡಗಿಸಿಕೊಂಡಿದ್ದಾರೆ. ಮಂಗಳೂರಿನ ಪ್ರಸಿದ್ಧ ಕುದ್ರೋಳಿ ಗೋಕರ್ಣನಾಥ ದೇವಾಲಯದ ಆಡಳಿತ ಸಮಿತಿಯ ಖಜಾಂಚಿ ಆಗಿರುವ ಅವರು ಮಂಗಳೂರಿನ ಪ್ರಸಿದ್ಧ ದಸರಾ ಕೂಟದ ರೂವಾರಿ ಎನಿಸಿಕೊಂಡಿದ್ದಾರೆ. ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಯಾಗಿ ಜಿಲ್ಲೆಯಲ್ಲಿ ಪಕ್ಷವನ್ನು ಸಂಘಟಿಸುತ್ತಿದ್ದಾರೆ. ದ.ಕ ಜಿಲ್ಲೆಯ ಬಹುಸಂಖ್ಯಾತ ಬಿಲ್ಲದ ಸಮುದಾಯದ ನಂಬಿಕಸ್ಥ ಮುಖವಾಗಿರುವ ಪದ್ಮರಾಜ್ ರಾಮಯ್ಯ, ಎಲ್ಲಾ ಜಾತಿ ಧರ್ಮಗಳ ಜನರ ಜೊತೆ ಉತ್ತಮ ಬಾಂಧವ್ಯ, ಒಡನಾಟ ಇಟ್ಟುಕೊಂಡಿದ್ದಾರೆ.
ಜಿಲ್ಲೆಯನ್ನು ಕೋಮು ಸಾಮರಸ್ಯದ ಕಡೆಗೆ ತರಲು ನಿರಂತರವಾಗಿ ಕೆಲಸ ಮಾಡುತ್ತಿದ್ದಾರೆ. ಈ ಎಲ್ಲಾ ಮಾನದಂಡ, ಅರ್ಹತೆ ಪರಿಗಣಿಸಿ ಪದ್ಮರಾಜ್ ಅವರ ಹೆಸರು ಆಕಾಂಕ್ಷಿಗಳ ಪಟ್ಟಿಯಲ್ಲಿ ಹೈಕಮಾಂಡ್ ಗೆ ರವಾನೆಯಾಗಿತ್ತು. ಮಾಜಿ ಸಚಿವ ರಮನಾಥ ರೈ ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯ ಹಿರಿಯ ನಾಯಕರು ಪದ್ಮರಾಜ್ ಅವರನ್ನು ಬೆಂಬಲಿಸಿದ್ದರೆ.
ಕಾಂಗ್ರೆಸ್ ಪಕ್ಷವು ಕರ್ನಾಟಕದ 28 ಲೋಕಸಭಾ ಕ್ಷೇತ್ರಗಳ ಪೈಕಿ ಬಾಕಿಯಿದ್ದ 21 ಕ್ಷೇತ್ರಗಳ ಪೈಕಿ ಎರಡು ಕ್ಷೇತ್ರಗಳನ್ನು ಬಾಕಿ ಉಳಿಸಿಕೊಂಡು ಉಳಿದ ಲೋಕಸಭೆ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ.
ಇಂದು ಕಾಂಗ್ರೆಸ್ ಹೈಕಮಾಂಡ್ ಬಾಕಿ ಇದ್ದ ಲೋಕಸಭಾ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಆಯ್ಕೆಗೊಳಿಸಿ, ಘೋಷಣೆ ಮಾಡಿದೆ.
ದಕ್ಷಿಣ ಕನ್ನಡ- ಆರ್. ಪದ್ಮರಾಜ್, ಉಡುಪಿ – ಚಿಕ್ಕಮಗಳೂರು – ಕೆ. ಜಯಪ್ರಕಾಶ್ ಹೆಗ್ಡೆ, ಬೆಂಗಳೂರು ದಕ್ಷಿಣ- ಸೌಮ್ಯ ರೆಡ್ಡಿ, ಚಿತ್ರದುರ್ಗ- ಚಂದ್ರಪ್ಪ, ಬೆಳಗಾವಿ- ಮೃಣಾಲ್ ಹೆಬ್ಬಾಳ್ಕರ್, ಚಿಕ್ಕೋಡಿ- ಪ್ರಿಯಾಂಕ ಜಾರಕಿಹೊಳಿ, ಕೊಪ್ಪಳ- ರಾಜಶೇಖರ್ ಹಿಟ್ನಾಳ, ಬೀದರ್ – ರಾಜಶೇಖರ್ ಪಾಟೀಲ್, ಬೆಂಗಳೂರು ಕೇಂದ್ರ- ಮನ್ಸೂರ್ ಅಲಿ ಖಾನ್, ರಾಯಚೂರು- ಕುಮಾರ್ ನಾಯಕ್, ಮೈಸೂರು- ಎಂ. ಲಕ್ಷಣ್, ಬೆಂಗಳೂರು ಉತ್ತರ- ಪ್ರೊ. ರಾಜೀವ್ ಗೌಡ್, ಬಾಗಲಕೋಟೆ- ಸಂಯುಕ್ತಾ ಶಿವನಾಂದ ಪಾಟೀಲ್, ಕಲಬುರಗಿ- ರಾಧಾಕೃಷ್ಣ ದೊಡ್ಡಮನಿ, ಧಾರವಾಡ- ವಿನೋದ್ ಅಸೂಟಿ, ಉತ್ತರ ಕನ್ನಡ- ಅಂಜನಿ ನಿಂಬಾಲ್ಕರ್ ಅವರನ್ನು ನೇಮಕಗೊಳಿಸಲಾಗಿದೆ.
ಕಾಂಗ್ರೆಸ್ ಈಗಾಗಲೇ ಏಳು ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ. ದಾವಣಗೆರೆ ಹಾಗೂ ಚಾಮರಾಜನಗರ ಕ್ಷೇತ್ರಗಳನ್ನು ಬಾಕಿ ಉಳಿಸಿಕೊಂಡಿದ್ದು, ಇಂದು ಅಭ್ಯರ್ಥಿಗಳನ್ನು ಘೋಷಣೆ ಮಾಡಲಿದೆ ಎಂದು ತಿಳಿದುಬಂದಿದೆ.