ಮಂಗಳೂರು : ಕಡಲ ಅಲೆಗಳ ಹೊಡೆತಕ್ಕೆ ಮೂವರು ಯುವಕರು ಸಮುದ್ರಪಾಲು..!

ತೂಫಾನ್ ರೀತಿಯ ಬಲ ವಾದ ಗಾಳಿಯಿಂದ ಪ್ರಕ್ಷುಬ್ಧಗೊಂಡಿದ್ದ ಕಡಲ ಅಲೆಗಳ ಹೊಡೆತಕ್ಕೆ ಸಿಲುಕಿ ಪಿಯುಸಿ ವಿದ್ಯಾರ್ಥಿ ಸಹಿತ ಮೂವರು ಯುವಕರು ಸಮುದ್ರಪಾಲಾದ ಘಟನೆ ಪಣಂಬೂರಿನಲ್ಲಿ ರವಿವಾರ ಸಂಜೆ ಸಂಭವಿಸಿದೆ.
ಕೈಕಂಬ ರೋಸಾ ಮಿಸ್ತಿಕಾ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿ ಲಿಖಿತ್ (18), ಖಾಸಗಿ ಸಂಸ್ಥೆಯೊಂದರಲ್ಲಿ ಡೆಲಿವರಿ ಕೆಲಸ ಮಾಡುತ್ತಿದ್ದ ಮಿಲನ್ (20) ಹಾಗೂ ಬೈಕಂಪಾಡಿ ಮುಂಗಾರು ಜಂಕ್ಷನ್‌ನಲ್ಲಿರುವ ಎಂಎಂಆರ್ ಕಂಪೆನಿಯಲ್ಲಿ ಮೇಲ್ವಿಚಾರಕರಾಗಿದ್ದ ನಾಗರಾಜ್ (24) ನೀರುಪಾಲಾದವರು.
ಸ್ನೇಹಿತರಾಗಿದ್ದ ಯುವಕರು ರಜಾ ದಿನವಾದ ಕಾರಣ ರವಿವಾರ ವಿಹಾರಕ್ಕೆಂದು ಪಣಂಬೂರು ಬೀಚ್‌ಗೆ ಬಂದಿದ್ದರು. ಸಂಜೆ ನೀರಿನಲ್ಲಿ ಆಟವಾಡುತ್ತಿದ್ದಾಗ ಬೃಹತ್ ಗಾತ್ರದ ಅಲೆಗಳ ಹೊಡೆತಕ್ಕೆ ಸಿಲುಕಿ ಕೊಚ್ಚಿ ಹೋಗಿದ್ದಾರೆ.
ಸಮುದ್ರ ತೀರದಲ್ಲಿ ತೂಫಾನ್ ರೀತಿಯಲ್ಲಿ ಭಾರೀ ಗಾಳಿ ಬೀಸುತ್ತಿದ್ದು, ಬೃಹತ್ ಗಾತ್ರದ ಅಲೆಗಳು ಏಳುತ್ತಿದ್ದವು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ರವಿವಾರ ಭಾರೀ ಸಂಖ್ಯೆಯಲ್ಲಿ ಪ್ರವಾಸಿಗರು ಕೂಡ ಸಮುದ್ರ ತೀರಕ್ಕೆ ಆಗಮಿಸಿದ್ದು, ರಕ್ಷಣ ಸಿಬಂದಿ ಕಡಿಮೆ ಸಂಖ್ಯೆಯಲ್ಲಿದ್ದರು. ಬೀಚ್‌ನಲ್ಲಿ ಮೂರು ದಿನದಿಂದ ಕಡಲೋತ್ಸವ ಆಯೋಜನೆ ಗೊಂಡಿದ್ದು, ಈ ಹಿನ್ನೆಲೆಯಲ್ಲಿಯೂ ಜನಸಂದಣಿ ಹೆಚ್ಚಿತ್ತು
ಪ್ರವಾಸಿಗರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಿ ಸೈರನ್ ಮೊಳಗಿಸಲಾಗಿತ್ತು. ಆದರೆ ಈ ಯುವಕರು ರಕ್ಷಕ ಸಿಬಂದಿಯ ಕಣ್ಣು ತಪ್ಪಿಸಿ ಸಮುದ್ರಕ್ಕೆ ಈಜಾಡಲು ಹಾರಿದ್ದು, ಈ ವೇಳೆ ಅಲೆಗಳ ಅಬ್ಬರಕ್ಕೆ ಸಿಲುಕಿ ಸಮುದ್ರ ಪಾಲಾದರು ಎಂದು ತಿಳಿದುಬಂದಿದೆ.
ಸ್ಥಳಕ್ಕೆ ಪೊಲೀಸರು ದೌಡಾಯಿಸಿದ್ದು, ನಾಪತ್ತೆಯಾದವರಿಗಾಗಿ ಶೋಧ ಕಾರ್ಯ ಮುಂದುವರಿದಿದೆ. ಪಣಂಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಮುದ್ರಪಾಲಾಗಿರುವ ಮೂವರು ಸೇರಿದಂತೆ ಒಟ್ಟು ಐದು ಮಂದಿ ಜತೆಯಾಗಿ ಪಣಂಬೂರು ಬೀಚ್‌ಗೆ ತೆರಳಿದ್ದರು ಎನ್ನಲಾಗಿದೆ. ಇವರೆಲ್ಲರೂ ಅಂಬೇಡ್ಕರ್ ಕಾಲನಿ ನಿವಾಸಿಗಳಾಗಿದ್ದಾರೆ. ಸಮುದ್ರ ಪಾಲಾಗಿರುವ ಲಿಖೀತ್ ಪ್ರತಿಭಾವಂತ ವಿದ್ಯಾರ್ಥಿ. ಮೂಲತಃ ತಮಿಳುನಾಡಿನವರಾಗಿದ್ದು, ಕಳೆದ ಸುಮಾರು ಎರಡು ದಶಕಗಳಿಂದ ಈತನ ತಂದೆ -ತಾಯಿ ಪೊರ್ಕೊಡಿಯ ಅಂಬೇಡ್ಕರ್ ನಗರ ಕಾಲೊನಿಯಲ್ಲಿ ವಾಸಿಸುತ್ತಿದ್ದಾರೆ. ತಂದೆ ಮಣಿಕಂಠ ಟೈಲ್ಸ್ ಕೆಲಸ ಮಾಡುತ್ತಾರೆ. ತಾಯಿ ಗೃಹಿಣಿ.