ಮಂಗಳೂರು: ಫಾಝಿಲ್ ಹತ್ಯೆ ಪ್ರಕರಣ: 3 ಆರೋಪಿಗಳಿಗೆ ಜಾಮೀನು ಮಂಜೂರು
2022 ಜುಲೈ 28ರಂದು ಸುರತ್ಕಲ್‌ನಲ್ಲಿ ಮೊಹಮ್ಮದ್ ಫಾಝಿಲ್ ಹತ್ಯೆ ನಡೆಸಿದ ಪ್ರಮುಖ 3 ಆರೋಪಿಗಳಿಗೆ ಜಾಮೀನು ಮಂಜೂರು ಆಗಿದೆ.
ಸುರತ್ಕಲ್ ಮಂಗಳಪೇಟೆಯ ಮೊಹಮ್ಮದ್ ಫಾಝಿಲ್ ಹತ್ಯೆಯ A1 ಆರೋಪಿ ಸುಹಾಸ್ ಶೆಟ್ಟಿ, A2 ಆರೋಪಿ ಅಭಿಷೇಕ್, A3 ಆರೋಪಿ ನೇಪಾಳಿ ಗಣೇಶ್‌ಗೆ ಕರ್ನಾಟಕ ಹೈಕೋರ್ಟ್ ಜಾಮೀನು ನೀಡಿದೆ.
ಫಾಝಿಲ್ ಹತ್ಯೆಯಲ್ಲಿ ಒಟ್ಟು 8 ಪ್ರಮುಖ ಆರೋಪಿಗಳ ಬಂಧನವಾಗಿತ್ತು. ಐವರು ಆರೋಪಿಗಳು ಈಗಾಗಲೇ ಜಾಮೀನಿನಲ್ಲಿ ಹೊರ ಬಂದಿದ್ದಾರೆ. ಇದೀಗ ಮೂವರು ಪ್ರಮುಖ ಆರೋಪಿಗಳಿಗೆ ಜಾಮೀನು ಆಗಿದೆ. ಈ ಮೂಲಕ ಫಾಝಿಲ್ ಹತ್ಯೆಯ ಎಲ್ಲ ಆರೋಪಿಗಳೂ ಬಂಧಮುಕ್ತರಾದಂತಾಗಿದೆ.
2022 ಜುಲೈ 28ರಂದು ರಾತ್ರಿ ಮಂಗಳೂರು ಬಳಿಯ ಸುರತ್ಕಲ್‍ನಲ್ಲಿ ಕಾರ್‌ನಲ್ಲಿ ಬಂದಿದ್ದ ನಾಲ್ವರು ಮುಸುಕುಧಾರಿ ದುಷ್ಕರ್ಮಿಗಳು ಬಟ್ಟೆ ಅಂಗಡಿಗೆ ನುಗ್ಗಿ ಮೊಹಮ್ಮದ್ ಫಾಜಿಲ್ (23)ನನ್ನು ಮಾರಕಾಸ್ತ್ರಗಳಿಂದ ಬರ್ಬರವಾಗಿ ದಾಳಿ ಮಾಡಿ ಪರಾರಿಯಾಗಿದ್ದರು. ಗ್ಯಾಸ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಫಾಝಿಲ್ ಹಲ್ಲೆಯಿಂದ ತೀವ್ರವಾಗಿ ಗಾಯಗೊಂಡಿದ್ದರು. ಬಳಿಕ ಆಸ್ಪತ್ರೆಯಲ್ಲಿ ಫಾಝಿಲ್ ಕೊನೆಯುಸಿರೆಳೆದಿದ್ದರು.