ಮಂಗಳೂರು: ಅವೈಜ್ಞಾನಿಕ ರೋಡ್ ಹಂಪ್ ಗೆ ಎಂಜಿನಿಯರಿಂಗ್ ವಿದ್ಯಾರ್ಥಿ ಟೆರೆನ್ಸ್ ಡಿಸೋಜಾ ಬಲಿ...!
ರಸ್ತೆಗಳಲ್ಲಿ ಅವೈಜ್ಞಾನಿಕ ರೋಡ್ ಹಂಪ್ ಕಾರಣದಿಂದಾಗಿ ದ್ವಿಚಕ್ರ ವಾಹನ ಸವಾರ ಪ್ರಾಣ ಕಳೆದುಕೊಂಡ ದಾರುಣ ಘಟನೆ ನಗರದ ಮರೋಳಿ ಬಳಿಯ ಫ್ಲೈಓವರ್ ಸನಿಹ ಫೆಬ್ರವರಿ 9 ರ ಗುರುವಾರ ರಾತ್ರಿ ನಡೆದಿದೆ.
ಮೃತರನ್ನು ಕುಲಶೇಖರ ನಿವಾಸಿ ಸ್ಟಾನ್ಲಿ ಮತ್ತು ಸುನಿತಾ ಡಿ’ಸೋಜಾ ದಂಪತಿಯ ಪುತ್ರ ಟೆರೆನ್ಸ್ ಡಿಸೋಜಾ (21) ಎಂದು ಗುರುತಿಸಲಾಗಿದೆ. ತನ್ನ ದ್ವಿಚಕ್ರ ವಾಹನಕ್ಕೆ ಇಂಧನ ತುಂಬಿಸಲು ಪೆಟ್ರೋಲ್ ಬಂಕ್‌ಗೆ ತೆರಳುತ್ತಿದ್ದ ಟೆರೆನ್ಸ್, ಅವೈಜ್ಞಾನಿಕ ರೋಡ್ ಹಂಪ್ ಕಾರಣದಿಂದ ನಿಯಂತ್ರಣ ಕಳೆದುಕೊಂಡು ಬಿದ್ದಿದ್ದಾರೆ. ಬಿದ್ದ ರಭಸಕ್ಕೆ ಅವರ ತಲೆರಸ್ತೆ ವಿಭಜಕಕ್ಕೆ ಬಡಿದ ಪರಿಣಾಮ ಅವರು ಸಾವನ್ನಪ್ಪಿದ್ದಾರೆ.
ಟೆರೆನ್ಸ್ ಅವರು ಕಾರ್ಡೆಲ್ ಮತ್ತು ಸುತ್ತಮುತ್ತಲು ಸಾಮಾಜಿಕ ಮತ್ತು ತಮ್ಮ ಸಮುದಾಯ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಕುಲಶೇಖರದ ಸುತ್ತಮುತ್ತ ಜನಸ್ನೇಹಿ ಯುವಕನಾಗಿದ್ದ ಅವರು ICYM ನ ಸಕ್ರಿಯ ಸದಸ್ಯರಾಗಿದ್ದರು. ಟೆರೆನ್ಸ್ ಅವರು ಖಾಸಗಿ ಕಾಲೇಜಿನಲ್ಲಿ ಎಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದರು.
ಅವೈಜ್ಞಾನಿಕ ರೋಡ್ ಹಂಪ್ ಅಪಘಾತಕ್ಕೆ ಕಾರಣವಾಗಿ ಯುವಕ ಪ್ರಾಣ ಕಳೆದುಕೊಳ್ಳುವಂತಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಪುತ್ರನ ಹಠಾತ್ ಸಾವಿನಿಂದ ಅವರ ಕುಟುಂಬಕ್ಕೆ ತೀವ್ರ ಅಘಾತವಾಗಿದೆ.